ಮೈಸೂರು: ನಗರದ ದೊಡ್ಡಕೆರೆ ಮೈದಾನದಲ್ಲಿ ಆಯೋಜಿಸಿರುವ ದಸರಾ ವಸ್ತುಪ್ರದರ್ಶನದಲ್ಲಿ ಸಾಂಪ್ರದಾಯಿಕ ಜಾನಪದ ಕಲೆಯಾದ ದಾಂಡಿಯಾ ನೃತ್ಯ ಮನಸೂರೆಗೊಳಿಸಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ದಾಂಡಿಯಾ ನೃತ್ಯವನ್ನು ಇಲ್ಲಿಯ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಆಯೋಜಿಸಲಾಗಿತ್ತು.
ದಸರಾ ವಸ್ತುಪ್ರದರ್ಶನದ ವೀಕ್ಷಣೆಗೆ ಬಂದ ಪ್ರವಾಸಿಗರು, ಸಾರ್ವಜನಿಕರು, ದಾಂಡಿಯಾ ನೃತ್ಯವನ್ನು ಕಣ್ತುಂಬಿಕೊಂಡರು.
ಗುಜರಾತ್ ರಾಜ್ಯದಲ್ಲಿ ಹುಟ್ಟಿ, ದೇಶಾದ್ಯಂತ ಜನಪ್ರಿಯತೆ ಗಳಿಸಿರುವ ದಾಂಡಿಯಾವನ್ನು ಮೈಸೂರಿನ ಜನರಿಗೆ, ಪ್ರವಾಸಿಗರಿಗೆ ಪರಿಚಯ ಮಾಡಿಕೊಡಲಾಯಿತು. ಉತ್ತರ ಭಾರತದಲ್ಲಿ ವಿಶೇಷವಾಗಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ದಾಂಡಿಯಾ ನೃತ್ಯವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದಸರಾ ವಸ್ತುಪ್ರದರ್ಶನದಲ್ಲೂ ಈ ಕಲೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಕಣ್ಮನ ಸೆಳೆಯಲಾಯಿತು.
ಕೈಯಲ್ಲಿ ಎರಡು ಅಲಂಕೃತ ಮರದ ಕೋಲುಗಳನ್ನು ಹಿಡಿದ ಕಲಾವಿದರು, ಸಂಗೀತದ ಲಯಕ್ಕೆ ಅನುಗುಣವಾಗಿ ಪರಸ್ಪರ ಕೋಲುಗಳನ್ನು ತಾಳಬದ್ಧವಾಗಿ ಬಡಿಯುತ್ತಾ ನೃತ್ಯ ಮಾಡಿದರು. ಪುರುಷರು ಮತ್ತು ಮಹಿಳೆಯರು ವರ್ಣರಂಜಿತ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ವೃತ್ತಾಕಾರದಲ್ಲಿ ಹೆಜ್ಜೆ ಹಾಕಿ ನೆರೆದವರನ್ನು ರಂಜಿಸಿದ್ದು ವಿಶೇಷ ಎನಿಸಿತು.
ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸಹ ಹೆಜ್ಜೆ ಹಾಕಿದರು. ಅಲಂಕೃತ ಮರದ ಕೋಲು ಹಿಡಿದು ಸೊಗಸಾಗಿ ನೃತ್ಯ ಮಾಡಿ ಕಲಾವಿದರಿಗೆ ಉತ್ಸಾಹ ತುಂಬಿ ಗಮನ ಸೆಳೆದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಇನ್ನಿತರರಿದ್ದರು.