

ಮೈಸೂರು: ಮೈಸೂರು ನಗರಪಾಲಿಕೆ, ಅರಣ್ಯ ಇಲಾಖೆ ಸಹಯೋಗದಲ್ಲಿ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಪೌರಕಾರ್ಮಿಕರು, ದಸರಾ ಆನೆಗಳ ಮಾವುತ, ಕಾವಾಡಿಗಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ನಗರಪಾಲಿಕೆ ಆಯುಕ್ಷೆ ಎಂ. ಕೆ. ಸವಿತಾ, ಅರಣ್ಯ ಇಲಾಖೆಯ ಅಧಿಕಾರಿ (ವನ್ಯಜೀವಿ ವಿಭಾಗ) ಡಾ. ಐ.ಬಿ.ಪ್ರಭು ಗೌಡ, ಪಾಲಿಕೆ ಸಹಾಯಕ ಆಯುಕ್ತೆ ರತ್ನಾಂಬಿಕಾ, ಸಿಂಧು, ಆಸ್ಪತ್ರೆಯ ನಿರ್ದೇಶಕ ಬಿ.ಕೆ. ಸಂದೀಪ ಪಟೇಲ್ ಇತರರು ಇದ್ದರು.
ದಸರಾದಲ್ಲಿ ಆನೆ ಮಾವುತರ ಪಾತ್ರ ಬಹಳ ಮುಖ್ಯವಾಗಿದ್ದು, ಅವರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಮಣಿಪಾಲ್ ಆಸ್ಪತ್ರೆಯು ಮಾವುತರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ, ಪ್ರಮುಖ ತಪಾಸಣೆಗಳು ಹಾಗೂ ತಜ್ಞ ವೈದ್ಯರಿಂದ ಸಲಹೆ ನೀಡಿದ್ದು ಸಹಕಾರಿಯಾಯಿತು ಎಂದು ಡಾ. ಐ.ಬಿ.ಪ್ರಭುಗೌಡ ಅಭಿಪ್ರಾಯಪಟ್ಟರು.
ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಸಂದೀಪ್ ಪಟೇಲ್ ಮಾತನಾಡಿ, ಪೌರಕಾರ್ಮಿಕರು ನಮ್ಮ ನಗರದ ಬೆನ್ನೆಲುಬು. ನಗರವನ್ನು ಸ್ವಚ್ಛವಾಗಿಡುವ ಅವರ ಆರೋಗ್ಯ ಸ್ವಚ್ಛವಾಗಿರಬೇಕು. ಅಲ್ಲದೆ ದಸರೆ ನಮ್ಮ ಸಂಸ್ಕೃತಿ ಕಾಯುವ ಮಾವುತ ಕಾವಡಿಗಳಿಗೆ ಆರೋಗ್ಯ ಮುಖ್ಯ ಎಂದರು.
ಆಸ್ಪತ್ರೆ ಹಾಗೂ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಗೆ ಒಳಗಾದರು.