ಮಾಲೀಕನ ಮನೆಯಲ್ಲೇ ಕಳ್ಳತನ

 ಮಾಲೀಕನ ಮನೆಯಲ್ಲೇ ಕಳ್ಳತನ
ಮನೆ ಕಳ್ಳತನ Theft at the owner's own house
Published on: 

ಮೈಸೂರು: ಹೋಂ ನರ್ಸಿಂಗ್ ಸೇವೆಗೆಂದು ನೇಮಿಸಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಮಾಲೀಕರ ಮನೆಯಲ್ಲಿ 4.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ನಗರದ ಹೆಬ್ಬಾಳು ನಿವಾಸಿ ರವಿಚಂದ್ರ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಹೋಂ ನರ್ಸಿಂಗ್ ಸೇವೆಗೆಂದು ಮನೆಯಲ್ಲಿದ್ದ ಶಿವರಾಜು ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಮಾಲೀಕರ ತಂದೆಗೆ ಅನಾರೋಗ್ಯದ ಕಾರಣ ಈತನನ್ನು ಹೋಂ ನರ್ಸಿಂಗ್ ಸೇವೆಗೆ ಸೇರಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ಮಾಹಿತಿ ನೀಡದೆ ತನ್ನ ಮನೆಯಿಂದ ಹೋಗಿದ್ದಾನೆ. ಅನುಮಾನಗೊಂಡ ಮನೆಯಲ್ಲಿದ್ದ ಆಭರಣಗಳನ್ನು ಪರಿಶೀಲಿಸಿದಾಗಲೇ ಕಳ್ಳತನವಾಗಿರುವುದು ಗೊತ್ತಾಗಿದೆ. ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲೆಕ್ಟ್ರಿಕ್ ವಸ್ತುಗಳು ಕಳ್ಳತನ

ನಗರಪಾಲಿಕೆ ನಿರ್ಮಿಸಿರುವ ಬಹುಮಹಡಿ ಕಟ್ಟಡದಲ್ಲಿ ಅಳವಡಿಸಿದ್ದ ಸುಮಾರು 2.50 ಲಕ್ಷ ರೂ. ಮೊತ್ತದ ಎಲೆಕ್ಟ್ರಿಕ್ ವಸ್ತುಗಳು, ಅರ್ಥಿಂಗ್ ಸಿಸ್ಟಮ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.

ನಾಯ್ಡುನಗರದ ಪುಷ್ಪಾಶ್ರಮ ಜಂಕ್ಷನ್ ಬಳಿ ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆಂದು ಬಹುಮಹಡಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಇನ್ನೂ ಕೂಡ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಿಲ್ಲ. ಈ ನಡುವೆ ಕಟ್ಟಡದಲ್ಲಿ ಅಳವಡಿಸಿದ್ದ ವಿವಿಧ ವಸ್ತುಗಳನ್ನು ಖದೀಮರು ಕದ್ದಿದ್ದಾರೆ. ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಕಾಸ ಹಿಡಿದು ಭಯ ಹುಟ್ಟಿಸಿದ್ದ ಇಬ್ಬರ ಬಂಧನ

ನಗರದ ಕೆ.ಎನ್.ಪುರ ಬಳಿಯ ಅಬೂಬಕರ್ ಮಸೀದಿ ಬಳಿ ಸಾರ್ವಜನಿಕವಾಗಿ ಮಾರಕಾಸ ಹಿಡಿದು ಜನರಿಗೆ ಬೆದರಿಕೆಯೊಡ್ಡುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ನಗರದ ಕೆ.ಎನ್.ಪುರದ ಸೈಯದ್ ಫಾಜಿಲ್, ಶಾಂತಿನಗರದ ಶಾಹೇದ್ ಬಂಧಿತರು. ಇವರು ಮಾರಕಾಸ ಹಿಡಿದುಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆಂಬ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯುವಕರನ್ನು ಬಂಧಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

7 ಜೂಜುಕೋರರ ಬಂಧನ

ಮೈಸೂರು ತಾಲೂಕಿನ ಮುಳ್ಳೂರು ಕೆರೆಯ ಬಳಿ ಜೂಜಾಟದಲ್ಲಿ ತೊಡಗಿದ್ದ 7 ಜನರನ್ನು ಬಂಧಿಸಿ, ಅವರಿಂದ 16,820 ರೂ. ಹಣವನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಸ್ಥಳಕ್ಕೆ ತೆರಳಿದೆ. ಈ ವೇಳೆ ಜೂಜಾಟದಲ್ಲಿ ತೊಡಗಿದ್ದವರನ್ನು ಸುತ್ತುವರಿದಿದೆ. ಜೂಜಾಟದಲ್ಲಿ ತೊಡಗಿದ್ದ ವಿಜಯಕುಮಾರ್, ಅಕ್ಷಯ್, ವಿನಯ್, ಮಾದೇಶ್, ಶರತ್, ಸಂತೋಷ್, ಯಶವಂತ್ ಎಂಬವರನ್ನು ಬಂಧಿಸಲಾಗಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.