

ಹುಣಸೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ 50 ಲಕ್ಷ ಮಹಿಳೆಯರ ಸಬಲೀಕರಣಕ್ಕೆ ಪೂರಕ ಮಾಹಿತಿ ನೀಡಲಾಗಿದೆ ಎಂದು ಯೋಜನೆಯ ಜ್ಞಾನವಿಕಾಸ ವಿಭಾಗದ ಕೇಂದ್ರ ಕಚೇರಿಯ ನಿರ್ದೇಶಕ ದಿನೇಶ್ ಪೂಜಾರಿ ತಿಳಿಸಿದರು.
ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು. ಹೇಮಾವತಿ ವಿ.ಹೆಗ್ಗಡೆ ಅಮ್ಮನವರ ಕನಸಿನ ಜ್ಞಾನವಿಕಾಸ ಕಾರ್ಯಕ್ರಮದಡಿ ಮಹಿಳೆಯರಲ್ಲಿ ಕುಟುಂಬ ನಿರ್ವಹಣೆ, ವ್ಯವಹಾರ ಜ್ಞಾನ, ವೈಯಕ್ತಿಕ ಶುಚಿತ್ವ, ಪರಿಸರ ಪ್ರಜ್ಞೆ, ಸ್ವಉದ್ಯೋಗ, ನಾಗರಿಕ ಸೌಲಭ್ಯಗಳ ಬಳಕೆ, ಸರ್ಕಾರಿ ಯೋಜನೆಗಳ ಬಗ್ಗೆ ಅರಿವಿನ ಮೂಲಕ ಸಬಲೀಕರಣದ ಉದ್ದೇಶದಿಂದ ಆರಂಭಿಸಿದ್ದು, ಕೇಂದ್ರದ ಮೂಲಕ ನೀಡುವ ಜಾಗೃತಿ ಕಾರ್ಯಕ್ರಮಗಳನ್ನು ಜೀವನದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಮಾನಸಿಕ, ದೈಹಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಆರೋಗ್ಯದ ಕಡೆಗೆ ನಿಮ್ಮ ಆದ್ಯತೆ ಇರಲೆಂದು ಆಶಿಸಿ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ರಾಜ್ಯದ 53 ಲಕ್ಷ ಜನರಿಗೆ ಬ್ಯಾಂಕ್ನ ಮೂಲಕ ಸಾಲ ಸೌಲಭ್ಯ ಕಲ್ಪಿಸಿದ್ದಾರೆ. ಇದರ ಸದುಪಯೋಗಕ್ಕೆ ಸಂಘದಲ್ಲಿ ಆರ್ಥಿಕ ಶಿಸ್ತು ಬಹಳ ಮುಖ್ಯವಾದುದು. ಪ್ರತಿಯೊಬ್ಬರೂ ಗಳಿಸಿದ್ದರಲ್ಲಿ ಕನಿಷ್ಠ ಶೇ.20ಉಳಿತಾಯ ಮಾಡುವುದರಿಂದ ವೃದ್ಧಾಪ್ಯ ಜೀವನದ ಮೂಲಕ ಸ್ವತಂತ್ರವಾಗಿ ಬದುಕಬಹುದಾಗಿದೆ. ಜ್ಞಾನವಿಕಾಸ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸ್ವಾವಲಂಬಿ ಸ್ವಾತಂತ್ರ್ಯದ ಬದುಕು ಕಟ್ಟಿಕೊಳ್ಳಿ ಎಂದು ಮಹಿಳೆಯರಿಗೆ ಸಲಹೆ ನೀಡಿದರು.
ಜಿಲ್ಲಾ ಜನಜಾಗೃತಿ ಸದಸ್ಯೆ, ವಕೀಲೆ ಪವಿತ್ರಾ ಮಾತನಾಡಿ, ಮಹಿಳೆಯರಿಗೆ ಕಾನೂನು ಅರಿವು ಅತ್ಯವಶ್ಯ. ನ್ಯಾಯಾಲಯದಲ್ಲಿ ಉಚಿತ ಕಾನೂನು ನೆರವಿನ ವ್ಯವಸ್ಥೆ ಇದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಬಾಲ್ಯವಿವಾಹ ಕಂಡುಬಂದಲ್ಲಿ ಪೊಲೀಸ್ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಗ್ರಾಮಾಂತರ ಠಾಣಾ ಪೊಲೀಸ್ ವಸಂತಕುಮಾರ್ ಸೈಬರ್ ವಂಚನೆ ಕುರಿತು ಮಾಹಿತಿ ನೀಡಿದರು. ವೈದ್ಯೆ ಡಾ.ರಾಜೇಶ್ವರಿ ಮಧುಮೇಹ, ಸ್ವಚ್ಛತೆ, ಆರೋಗ್ಯ ಕುರಿತು ಜಾಗೃತಿ ಮೂಡಿಸಿದರು.
ಒಕ್ಕೂಟದ ಅಧ್ಯಕ್ಷೆ ಶೀಲಾ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ತೇಜಾವತಿ, ಸಮಪನ್ಮೂಲ ವ್ಯಕ್ತಿ ಜಿ.ಎಸ್.ಜಗದೀಶ್, ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಮಲ್ಲಿಕಾ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು ಹಾಜರಿದ್ದರು.