

ಹುಣಸೂರು : ತಾಲೂಕಿನ ಗಾವಡಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಪರಿಶಿಷ್ಟ ಜಾತಿ ಮಹಿಳಾ ಕ್ಷೇತ್ರವಾಗಿ ಮೀಸಲಿಡಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ಲಕ್ಷ್ಮೀನಾರಾಯಣ ನಾಗವಾರ ಬಣ)ಯ ಸದಸ್ಯರು ತಹಸೀಲ್ದಾರ್‌ರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಮಿತಿ ತಾಲೂಕು ಸಂಚಾಲಕ ಕಿರಣ್, ಜಿಲ್ಲಾ ಪಂಚಾಯತಿ ಚುನಾವಣೆ ಕ್ಷೇತ್ರಗಳ ಮೀಸಲಾತಿ ನಿಗದಿಪಡಿಸುವಾಗ ಪರಿಶಿಷ್ಟ ಜಾತಿ ಜನಸಂಖ್ಯೆ ಹಾಗೂ ಸಂಬಂಧಿತ ಕಾನೂನುಬದ್ದ ಮಾನದಂಡ ಪರಿಗಣಿಸಬೇಕಿತ್ತು. ಆದರೆ ಜಿಲ್ಲಾ ಪಂಚಾಯತಿ ಮೀಸಲಾತಿ ಕರಡು ಪಟ್ಟಿಯಲ್ಲಿ ಹುಣಸೂರು ತಾಲೂಕಿನ ಸುಮಾರು 56 ಸಾವಿರ ಮತದಾರರು ಇರುವ ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಂದೇ ಒಂದು ಕ್ಷೇತ್ರವನ್ನೂ ಮೀಸಲಾತಿಯನ್ನು ಮೀಸಲಿಡದೇ ಪರಿಶಿಷ್ಟ ಜಾಸತಿ ಸಮಾಜವನ್ನು ಸಾಮಾಜಿಕ ಮತ್ತು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗಿದೆ ಎಂದು ದೂರಿದರು. 1995ರಲ್ಲಿ ಬನ್ನಿಕುಪ್ಪೆ ಕ್ಷೆತ್ರ ಪರಿಶಿಷ್ಟ ಜಾತಿಗೆ, 2000 ಸಾಲಿನಲ್ಲಿ ಧರ್ಮಪುರ ಕ್ಷೇತ್ರ ಪರಿಶಿಷ್ಟ ಜಾತಿಗೆ, 2005ರಲ್ಲಿ ಪರಿಶಿಷ್ಟ ಜಾತಿ ಮಹಿಳಾ ಕ್ಷೇತ್ರವಾಗಿ ಮತ್ತು 2010 ಧರ್ಮಪುರ ಕ್ಷೇತ್ರ ಪರಿಶಿಷ್ಟ ಜಾತಿ ಮಹಿಳೆಗೆ, 2015ರಲ್ಲಿ ಬನ್ನಿಕುಪ್ಪೆ ಕ್ಷೇತ್ರ ಮಹಿಳಾ(ಎಸ್ಸಿ)ಕ್ಷೇತ್ರವಾಗಿ ಮೀಸಲಾಗಿದೆ. ಈ ಬಾರಿ 2026ನೇ ಸಾಲಿನಲ್ಲಿ ಗಾವಡಗೆರೆ ಜಿಪಂ ಕ್ಷೇತ್ರವನ್ನು ಪರಿಶಿಷ್ಟ ಜಾತಿ ಮಹಿಳಾ ಕ್ಷೇತ್ರವಾಗಿ ಮಾಡುವ ಮೂಲಕ ಎಸ್ಸಿ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಈ ವೇಳೆ ಮುಖಂಡರರಾದ ಪುಟ್ಟಮಾದಯ್ಯ, ಶಿವಣ್ಣ ಮಾರನಹಳ್ಳಿ, ಜಗದೀಶ್ ಧರ್ಮಾಪುರ, ರಾಜಣ್ಣ ಇತರರು ಇದ್ದರು.