ಮಲ್ಲಿಗೆ ನಗರಿಯಲ್ಲಿ ಮಾರ್ದನಿಸಿದ ಪ್ರಜಾಪ್ರಭುತ್ವದ ಸಂದೇಶ

ಸಂವಿಧಾನ ದಿನಾಚರಣೆ ಅಂಗವಾಗಿ ಬೃಹತ್ ಸಮಾವೇಶ ಬಿಜೆಪಿ, ಸಂಘ ಪರಿವಾರದ ವಿರುದ್ಧ ಕೈ ನಾಯಕರ ರೋಷಾವೇಶ
ಮೈಸೂರಿನಲ್ಲಿ ಆಯೋಜಿಸಿದ್ದ ಸಂವಿದಾನ ದಿನ ಅಂಗವಾಗಿ ನಡೆದ ಆಕರ್ಷಕ ಮೆರವಣಿಗೆ
ಮೈಸೂರಿನಲ್ಲಿ ಆಯೋಜಿಸಿದ್ದ ಸಂವಿದಾನ ದಿನ ಅಂಗವಾಗಿ ನಡೆದ ಆಕರ್ಷಕ ಮೆರವಣಿಗೆ
Published on: 

ಮೈಸೂರು: ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸಮಾನತೆ ಸಹೋದರತ್ವದ ಮೌಲ್ಯ ಎತ್ತಿಹಿಡಿಯುವ ಸಂವಿಧಾನ ದಿನವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಬೃಹತ್ ಸಮಾವೇಶದ ರೂಪದಲ್ಲಿ ಆಚರಿಸಿ ಗಮನ ಸೆಳೆಯಲಾಯಿತು.

ಜಾತಿ, ಧರ್ಮ, ಭಾಷೆ, ಆರ್ಥಿಕ ಅಸಮಾನತೆಗಳಂತಹ ಸವಾಲುಗಳು ಮುಂದುವರಿದಿರುವ ಈ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂಬ ಸಂದೇಶವನ್ನು ಕಾರ್ಯಕ್ರಮ ಕಟ್ಟಿ ಕೊಟ್ಟಿತು.

ಸಾಂಸ್ಕೃತಿಕ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಜನರು ಸಾಕ್ಷಿಯಾದರು.

ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ, ಮಾಜಿ ಸಿಎಂ, ಸಚಿವರು, ಸಂವಿಧಾನ ರಕ್ಷಣೆ ಮಾಡಿ, ಅದನ್ನು ಪರಿಣಾಮಕಾರಿ ಜಾರಿಯಾಗಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದರು. ಸಂವಿಧಾನ, ಲೋಕತಂತ್ರ ಎದುರಾಗಿರುವ ಆಪತ್ತಿನ ಕುರಿತು ಆತಂಕ ವ್ಯಕ್ತಪಡಿಸಿದ ನಾಯಕರು, ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧವೂ ಹರಿಹಾಯ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಆಯೋಜಿಸಿದ್ದ ಸಂವಿಧಾನದ ಭವ್ಯ ಮೆರವಣಿಗೆ ಕಣ್ಮನ ಸೆಳೆಯಿತು. ಪುರಭವನದಲ್ಲಿರುವ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹಾಗೂ ಅಲ್ಲೇ ಇರುವ ಬೃಹತ್ ಸಂವಿಧಾನ ಪೀಠಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಸಂವಿಧಾನ ಪೀಠಿಕೆಯ ಪ್ರತಿಯನ್ನಿಟ್ಟು ಮೆರವಣಿಗೆ ಮಾಡಲಾಯಿತು. ನಗರದ ಪ್ರಮುಖ ಬೀದಿಯಲ್ಲಿ ಸಾಗಿದ ಮೆರವಣಿಗೆಗೆ ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳ ಸೊಬಗು ತಂದುಕೊಟ್ಟವು.

ಗ್ಯಾರಂಟಿ ಯೋಜನೆಯಲ್ಲಿ ರಾಜಿ ಇಲ್ಲ

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ಇಡೀ ದೇಶದಲ್ಲಿ ಸಂವಿಧಾನ ದಿನವನ್ನು ಆಚರಣೆ ಮಾಡಬೇಕು. ಕೇಂದ್ರ ಸರ್ಕಾರವು ಈ ಕುರಿತು ಆದೇಶ ಹೊರಡಿಸುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಸಂವಿಧಾನ, ಪ್ರಜಾಪ್ರಭುತ್ವ, ಅಂಬೇಡ್ಕರ್ ವಿರೋಧಿಸುತ್ತಿದ್ದವರು ಈಗ ಈ ಮೂರು ವಿಷಯಗಳ ಕುರಿತು ಮಾತನಾಡುತ್ತಿದ್ದಾರೆ. ಹೀಗಾಗಿ, ಅವರ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಸರ್ಕಾರದಿಂದ ಬೇರೆ ಯಾವುದೇ ಕಾರ್ಯಕ್ರಮಗಳನ್ನು ಕೈಗೊಂಡರೂ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಯಾವುದೂ ಕಡಿಮೆಯಾಗಬಾರದು. ಈ ವಿಷಯದಲ್ಲೂ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಸಿಎಂಗೆ ವೇದಿಕೆ ಮೇಲೆಯೇ ಡಿಸಿಎಂ ಒತ್ತಾಯಿಸಿದರು.

ಸಚಿವರಾದ ಕೆ.ಎಚ್.ಮುನಿಯಪ್ಪ, ಕೆ.ಎಸ್.ಬಸವಂತಪ್ಪ, ನರೇಂದ್ರಸ್ವಾಮಿ, ಟಿ.ರಘುಮೂರ್ತಿ, ಸತೀಶ್ ಜಾರಕಿಹೊಳಿ, ಪುಟ್ಟರಂಗಶೆಟ್ಟಿ, ರಿಜ್ವಾನ್ ಹರ್ಷದ್, ಕೆ.ಎಂ.ಶಿವಲಿಂಗೇಗೌಡ, ಯು.ಟಿ.ಖಾದರ್, ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಸಿಎಂ ಮುಖ್ಯ ಸಲಹೆಗಾರ ಜಿ.ಸಿ.ಚಂದ್ರಶೇಖರ್, ಸಂಸದರಾದ ಸುನೀಲ್ ಬೋಸ್, ಶ್ರೇಯಸ್ ಪಟೇಲ್, ರಾಜ್ಯಸಭಾ ಸದಸ್ಯ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಶಾಸಕರಾದ ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಕೆ.ವೆಂಕಟೇಶ್ ಇತರರಿದ್ದರು

ಸುರ್ಜೇವಾಲ ಪ್ರಧಾನ ಭಾಷಣವೇ ರದ್ದು

ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಪ್ರಧಾನ ಭಾಷಣವೇ ರದ್ದಾಯಿತು. ಸಂವಿಧಾನ ರಚನೆ ಕುರಿತು ಸುರ್ಜೇವಾಲ ಭಾಷಣ ಮಾಡಲಿದ್ದಾರೆಂದು ಆಮಂತ್ರಣ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅವರು ಸಹ ಬಂದಿದ್ದರು. ಸಚಿವರು, ಸಿಎಂ, ಮಾಜಿ ಸಿಎಂ ಭಾಷಣ ಮಾಡಿ ಮುಗಿಸುವ ಹೊತ್ತಿಗೆ ಮಧ್ಯಾಹ್ನ 3.30ಗಂಟೆ ಆಗಿತ್ತು. ಇಷ್ಟೊತ್ತಿಗೆ ಬಹುತೇಕ ಜನರು ನಿರ್ಗಮಿಸಿದ್ದರಿಂದ ಕಾಲಿ ಕುರ್ಚಿಗಳ ದರ್ಶನವಾಗುತ್ತಿತ್ತು. ಹೀಗಾಗಿ, ಪ್ರಧಾನ ಭಾಷಣವನ್ನೇ ರದ್ದು ಪಡಿಸಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

ಮೈಸೂರಿಗೆ ಬಂದ ಅತಿಥಿಗಳಿಗೆ ಸಿದ್ದರಾಮಯ್ಯ ಆತಿಥ್ಯ

ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಎಲ್ಲ ಸಚಿವರು ಮತ್ತು ಪ್ರಮುಖ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಉಪಾಹಾರ ಕೂಟ ಆಯೋಜಿಸಿ, ನಗರಕ್ಕೆ ಬಂದ ಅತಿಥಿಗಳಿಗೆ ವಿಶೇಷ ಆತಿಥ್ಯ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಹರಿಪ್ರಸಾದ್, ನರೇಂದ್ರಸ್ವಾಮಿ, ಜಮೀರ್ ಅಹಮದ್, ಪುಟ್ಟರಂಗಶೆಟ್ಟಿ ಸೇರಿದಂತೆ ಹಲವರು ಉಪಾಹಾರಕ್ಕೆ ಆಗಮಿಸಿದ್ದರು. ಅವರೆಲ್ಲರೂ ಹೊರ ಜಿಲ್ಲೆವರಾಗಿದ್ದರಿಂದ ಉಪಾಹಾರಕ್ಕೆ ಆಹ್ವಾನಿಸಿದ್ದೆ, ಹೀಗಾಗಿ ಬಂದಿದ್ದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹಮದ್, ಮಹದೇವಪ್ಪ ಅವರ ಹೆಸರನ್ನು ಹೇಳಲಿಲ್ಲ. ಪಕ್ಕದಲ್ಲಿದ್ದವರು ಅವರ ಹೆಸರನ್ನೂ ಹೇಳುವಂತೆ ಸೂಚಿಸಿದರೂ ಅದಕ್ಕೆ ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ. ಮಾಧ್ಯಮದವರು ಮತ್ತೆ ಮತ್ತೆ ಮಹದೇವಪ್ಪ ಅವರ ಬಗ್ಗೆ ಪ್ರಶ್ನಿಸಿದರೂ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಲಿಲ್ಲ. ‘ಅವರು ಮೈಸೂರು ಜಿಲ್ಲೆಯ ಶಾಸಕರು ತಾನೇ, ಅದಕ್ಕೆ ಬಂದಿದ್ದರು’ ಎಂಬಷ್ಟೇ ಹೇಳಿ ಅಲ್ಲಿಂದ ತೆರಳಿದರು.

ಬಿಜೆಪಿಯವರಿಂದ ಪಾಠ ಕಲಿಯಬೇಕಾಗಿಲ್ಲ

ಬಿಜೆಪಿ ನಾಯಕರಿಗೆ ಸಂವಿಧಾನದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಸಂವಿಧಾನ ದಿನವನ್ನು ಹೇಗೆ ಆಚರಿಸಬೇಕು ಎಂಬುದನ್ನು ಅವರಿಂದ ನಾವು ಕಲಿಯಬೇಕಾದ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಸಂವಿಧಾನವನ್ನು ಆರ್‌ಎಸ್‌ಎಸ್ ಯಾವಾಗಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಆರ್‌ಎಸ್‌ಎಸ್‌ನ ಮೊದಲ ಅಧ್ಯಕ್ಷರೇ ಸಂವಿಧಾನವನ್ನು ವಿರೋಧಿಸಿದ್ದರು. ಅಂತಹವರಿಂದ ನಾವು ಸಂವಿಧಾನದ ಬಗ್ಗೆ ಪಾಠ ಕಲಿಯಬೇಕೇ ಎಂದು ಪ್ರಶ್ನಿಸಿದರು.