ಮೈಸೂರು: ಕಾಂಗ್ರೆಸ್, ರಾಜ್ಯ ಸರ್ಕಾರವು ಅಂಬೇಡ್ಕರ್ ಅವರ ಆಶಯದ ಹಾದಿಯನ್ನು ಎಂದಿಗೂ ಬಿಟ್ಟುಕೊಡಲ್ಲ. ಸಂವಿಧಾನ ನೀಡಿರುವ ಹಕ್ಕು, ಸ್ವಾತಂತ್ರ್ಯ, ಸಮಾನತೆಯನ್ನು ರಕ್ಷಿಸಲು ಬದ್ಧ. ಕರ್ನಾಟಕವು ಸಾಮಾಜಿಕ ನ್ಯಾಯ, ಸಮಾನತೆಯ ವಿಚಾರದಲ್ಲಿ ಇಡೀ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಅತ್ಯಂತ ಅಮೂಲ್ಯವಾದ ಹಕ್ಕು ಮತದಾನ. ಪ್ರಧಾನಿ, ಸಾಮಾನ್ಯ ನಾಗರಿಕನ ಮತಕ್ಕೂ ಅಷ್ಟೇ ಮೌಲ್ಯವಿದೆ. ಶ್ರೀಮಂತ-ಬಡವ ಎಂಬ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಮತದಾನದ ಹಕ್ಕು ನೀಡಿರುವುದು ಪ್ರಜಾಪ್ರಭುತ್ವದ ಶ್ರೇಷ್ಠತೆ. ಆದರೆ, ಮತದಾರರ ಪಟ್ಟಿಯಿಂದ ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರ ಮತವನ್ನು ಕಿತ್ತು ಹಾಕಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ‘ನಮ್ಮ ಮತ ನಮ್ಮ ಹಕ್ಕು, ನಮ್ಮ ಮತ ನಮ್ಮ ಬದುಕು’ ಎಂಬ ಅರಿವಿನೊಂದಿಗೆ ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಲು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಹೇಳಿದರು.
ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು ಅವರ ಮಾರ್ಗದರ್ಶನದಲ್ಲಿ ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಮಹತ್ವದ ಜವಾಬ್ದಾರಿ ನೀಡಲಾಯಿತು. ದೇಶದ ಪ್ರತಿ ಪ್ರಜೆಗೂ ನ್ಯಾಯ, ಹಕ್ಕು, ಸಮಾನತೆಯ ಅವಕಾಶ ಕಲ್ಪಿಸಿದ ಸಂವಿಧಾನ ರಚನಾ ಮಹನೀಯರಿಗೆ ಕೋಟಿ ನಮನ ಸಲ್ಲಿಸಬೇಕು. ಸಂವಿಧಾನ ನಮ್ಮೆಲ್ಲರ ನ್ಯಾಯದ ಆಧಾರ, ಸಮಾನತೆಯ ಬಂಡಾರ. ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಿದ ಪವಿತ್ರ ಗ್ರಂಥ ಎಂದು ಬಣ್ಣಿಸಿದರು.
ಸಂವಿಧಾನವೇ ಭಾರತದ ರಾಷ್ಟ್ರೀಯ ಗ್ರಂಥ, ಸಂವಿಧಾನವೇ ಭಾರತದ ಏಕೈಕ ಧರ್ಮ ಎಂಬ ಭಾವನೆಯೊಂದಿಗೆ ಅದನ್ನು ಉಳಿಸಿ ಬೆಳೆಸಬೇಕು. ಮನೆ ನಿರ್ಮಾಣಕ್ಕೆ ನೀಲಿನಕ್ಷೆ ಹೇಗೆ ಅಗತ್ಯವೋ, ದೇಶದ ನಿರ್ಮಾಣಕ್ಕೂ ಸಂವಿಧಾನದ ಬುನಾದಿ ಅಷ್ಟೇ ಮುಖ್ಯ. ಸಂವಿಧಾನ ನಿಂತ ನೀರಲ್ಲ. ಆದರೆ, ಅದರ ಮೂಲ ಆಶಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವವನ್ನು ಎಂದಿಗೂ ಮರೆಯಬಾರದು ಎಂದರು.
ಸಂವಿಧಾನವು ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಧೈರ್ಯವನ್ನೂ ಸಾಮಾನ್ಯ ಜನರಿಗೆ ನೀಡಿದೆ. ತಾರತಮ್ಯವಿಲ್ಲದೆ ಎಲ್ಲರಿಗೂ ಒಂದೇ ಕಾನೂನು, ಒಂದೇ ನ್ಯಾಯ ಎಂಬ ತತ್ವವನ್ನು ಸಂವಿಧಾನ ಎತ್ತಿಹಿಡಿದಿದೆ ಎಂದು ಹೇಳಿದರು.
ಸಂವಿಧಾನ ಎಲ್ಲ ವರ್ಗಗಳಿಗೂ ಸಮಾನ ಅವಕಾಶ, ನ್ಯಾಯ ಒದಗಿಸುವ ವ್ಯವಸ್ಥೆ ರೂಪಿಸಿದೆ. 2013ರಿಂದ 2018ರವರೆಗೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡುವ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು. ಸಾಮಾಜಿಕ ನ್ಯಾಯದ ಆಶಯವನ್ನು ಕಾರ್ಯರೂಪಕ್ಕೆ ತರುವ ಇಂತಹ ನಿರ್ಧಾರಗಳು ದೇಶಕ್ಕೆ ಮಾದರಿ ಎಂದರು.
ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ. ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಲ್ಲ ವರ್ಗಗಳಿಗೂ ನ್ಯಾಯ, ಹಕ್ಕುಗಳನ್ನು ಒದಗಿಸುವ ಕೆಲಸ ಮಾಡಿದೆ. ಸಂವಿಧಾನದ ಆಶಯ ಎತ್ತಿಹಿಡಿಯುವಲ್ಲಿ ಸರ್ಕಾರ ಸದಾ ಬದ್ಧ ಎಂದು ಹೇಳಿದರು.
ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬದುಕುವ ಅವಕಾಶ, ಗೌರವ, ಆರ್ಥಿಕ ಭದ್ರತೆ ಸಿಗಬೇಕು. ಇದೇ ಉದ್ದೇಶದಿಂದ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಭೂಮಿ ಗ್ಯಾರಂಟಿ ಯೋಜನೆಯೂ ಇದೇ ಆಶಯದ ಭಾಗವಾಗಿದೆ. ಎಲ್ಲರಿಗೂ ಸಮಬಾಳು, ಸಮಾನ ಅವಕಾಶ ಕಲ್ಪಿಸುವುದಕ್ಕೆ ಬದ್ಧ ಎಂದು ತಿಳಿಸಿದರು.
ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಜಾರಿಗೊಳಿಸುವವರ ಮೇಲೆ ಅದರ ಯಶಸ್ಸು ಅವಲಂಬಿತವಾಗಿರುತ್ತದೆ ಎಂಬ ಡಾ.ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಕೇವಲ ಸರ್ಕಾರದ ಮೇಲಷ್ಟೇ ಇಲ್ಲ. ಪ್ರತಿಯೊಬ್ಬ ಭಾರತೀಯನ ಮೇಲೂ ಇದೆ. ಸ್ವಾತಂತ್ರ್ಯ ಎಂದರೆ ಕೇವಲ ಆಳ್ವಿಕೆ ನಡೆಸುವುದಲ್ಲ. ಶತಮಾನಗಳಿಂದ ಅಸಮಾನತೆಯಿಂದ ಬಳಲುತ್ತಿರುವ ಸಮಾಜದಲ್ಲಿ ಪರಿವರ್ತನೆ ತರುವುದು ಅದರ ನಿಜವಾದ ಉದ್ದೇಶ ಎಂದರು.
ಕಾಂಗ್ರೆಸ್ ಸರ್ಕಾರವು ದೇಶಕ್ಕೆ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ನೀಡಿದೆ. ವಿಶ್ವಮಾನವ ತತ್ವ, ಸಮಾನತೆಯ ಸಂದೇಶ ಸಾರಿದೆ. ಇವು ಕೇವಲ ದೇಶದ ಹೆಮ್ಮೆಯ ಸಂಕೇತವಲ್ಲ. ಪ್ರತಿಯೊಬ್ಬ ಭಾರತೀಯನೂ ಗೌರವಿಸಿ, ಉಳಿಸಿ ಬೆಳೆಸಬೇಕಾದ ರಾಷ್ಟ್ರೀಯ ಮೌಲ್ಯಗಳು. ಈ ತತ್ವ, ಆದರ್ಶ, ಸಂದೇಶ ಎಲ್ಲ ಸಂದರ್ಭಗಳಲ್ಲೂ ಪಾಲಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಹೇಳಿದರು.
ಜಾತಿ, ಧರ್ಮ, ಮೇಲು-ಕೀಳು ಎಂಬ ಭಾವನೆ ಬದಿಗಿಟ್ಟು ನಾವೆಲ್ಲರೂ ಭಾರತೀಯರು ಎಂಬ ಒಗ್ಗಟ್ಟಿನ ಭಾವನೆಯಿಂದ ಬದುಕಬೇಕು. ಅನೇಕ ಮಹನೀಯರು ಸಾರಿದ ಸಮಾನತೆ, ಮಾನವೀಯತೆಯ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮಾನವೀಯತೆಯೇ ನಮ್ಮ ಧರ್ಮವಾಗಬೇಕು. ಪ್ರತಿಯೊಬ್ಬರಿಗೂ ಸಮಾನ ಗೌರವ ಸಿಗುವ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.