ಭೂಮಿ ಗುರುತಿಸಿಕೊಡಲು ಆದಿವಾಸಿಗಳ ಪಟ್ಟು

ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ
 ದಾಸನಪುರ ಸರ್ವೇ ನಂಬರ್ 12 ಮತ್ತು 13ರ
ಹುಣಸೂರು ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್ ಅವರಿಗೆ ಆದಿವಾಸಿಗಳು ಮನವಿ ಸಲ್ಲಿಸಿದರು. ಬಸವರಾಜ್, ವಿಠಲ್ ನಾಣಾಚ್ಚಿ, ಹರ್ಷ, ಜಯಪ್ಪ ಇದ್ದರು.
Published on: 

ಹುಣಸೂರು: ತಾಲೂಕಿನ ಹನಗೋಡು ಹೋಬಳಿ ದಾಸನಪುರ ಸರ್ವೇ ನಂಬರ್ 12 ಮತ್ತು 13ರಲ್ಲಿ ಆದಿವಾಸಿಗಳಿಗೆ ಮೀಸಲಿರುವ ಭೂಮಿಯ ಪೈಕಿ 30 ಕುಟುಂಬಗಳಿಗೆ ಭೂಮಿ ಗುರುತಿಸಿಕೊಡುವುದು, ಒತ್ತುವರಿ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆದಿವಾಸಿ ಮುಖಂಡರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಸೋಮವಾರ ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ವಿಜಯಗಿರಿ ಹಾಡಿ ಭೂಮಿದಾರರ ಸಮಿತಿ ಅಧ್ಯಕ್ಷ ಬಸವರಾಜು, 1984ರಲ್ಲಿ ಸರ್ವೇ ನಂ.12 ಮತ್ತು 13ರ 280 ಎಕರೆ ಭೂಮಿಯನ್ನು 130 ಜೇನುಕುರುಬ ಆದಿವಾಸಿ ಕುಟುಂಬಗಳಿಗೆ ಸರ್ಕಾರ ಮೀಸಲಿಟ್ಟು ತಲಾ 2 ಎಕರೆಯಂತೆ ಸಾಗುವಳಿ ಪತ್ರ ನೀಡಿದೆ. ಈ ಪೈಕಿ 100ಕುಟುಂಬಕ್ಕೆ ಭೂಮಿಯನ್ನೂ ಗುರುತಿಸಿಕೊಡಲಾಗಿದೆ. ಆದರೆ, ಉಳಿದ 30 ಕುಟುಂಬಗಳಿಗೆ ಇಂದಿನವರೆಗೂ ಭೂಮಿ ಗುರುತಿಸಿಕೊಟ್ಟಿಲ್ಲ. ಈ ನಡುವೆ ಆದಿವಾಸಿಗಳಿಗೆ ಮೀಸಲಿಟ್ಟ ಭೂಮಿಯನ್ನು ಇತರರು ಒತ್ತುವರಿ ಮಾಡಿಕೊಂಡಿದ್ದಾರೆ. ಹಾಗಾಗಿ ತಾಲೂಕು ಆಡಳಿತ ಕೂಡಲೇ 30 ಕುಟುಂಬಗಳಿಗೆ ಭೂಮಿ ಗುರುತಿಸಿಕೊಡಬೇಕು ಎಂದು ಮನವಿ ಮಾಡಿದರು.

ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಮಾತನಾಡಿ, ಆದಿವಾಸಿಗಳಿಗೆ ಮೀಸಲಿರುವ 280 ಎಕರೆಗೂ ಬಂಡು ನಿರ್ಮಿಸಿ ಭೂಮಿ ರಕ್ಷಿಸಬೇಕು. ಕೆಲವು ರೈತರು ಅದಿವಾಸಿಗಳಿಂದ ಭೂಮಿ ಗುತ್ತಿಗೆ ಹಾಗೂ ಭೋಗ್ಯ ಮಾಡಿಸಿಕೊಂಡು ಕೃಷಿ ಮಾಡುತ್ತಿರುವುದನ್ನು ತಪ್ಪಿಸಬೇಕು. ಅದಿವಾಸಿಗಳೇ ಸ್ವತಃ ಭೂಮಿಯಲ್ಲಿ ಕೃಷಿ ಮಾಡುವಂತೆ ಕಟ್ಟುನಿಟ್ಟಾಗಿ ಸೂಚಿಸಬೇಕು. ಈ ಸಂಬಂಧ ಅದಿವಾಸಿಗಳಿಗೆ ಹಾಗೂ ರೈತರಿಗೆ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಬೇಕು ಎಂದು ಕೋರಿದರು.

ಆದಿವಾಸಿ ಹಿರಿಯ ಮುಖಂಡ ವಿಠಲ್ ನಾಣಾಚ್ಚಿ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಇದ್ದರು.