ಬಾಂಬ್ ಹುಸಿ ಕರೆ ಮಾಡಿದ್ದವನ ಬಂಧನ

ಬೆದರಿಕೆ ಹಾಕಿದ್ದ ಮಾಜಿ ಉದ್ಯೋಗಿ
Arrest of person who made hoax bomb call
ಬಂಧನ
Published on: 

ಮೈಸೂರು: ನಗರದ ಹುಣಸೂರು ರಸ್ತೆಯಲ್ಲಿರುವ ಮಂಗಳೂರು ಗಣೇಶ ಬೀಡಿ ವರ್ಕ್ಸ್ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದ ಹಳೆ ನೌಕರನನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರದ ಭ್ರಮರಾಂಬ ಬಡಾವಣೆ ನಿವಾಸಿ ರಾಜೇಶ್ ಪೈ (50) ಬಂಧಿತ. ಈತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಳೆ ನೌಕರ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.

ಸೆಪ್ಟೆಂಬರ್ 17ರಂದು ಗಣೇಶ್ ಬೀಡಿ ಕಚೇರಿಯ ಲ್ಯಾಂಡ್‌ಲೈನ್‌ಗೆ ಅನಾಮಧೇಯ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಮೂರು ಬಾರಿ ನಿಮ್ಮ ಕಚೇರಿ ಹಿಂಭಾಗದಲ್ಲಿ ಬಾಂಬ್ ಇರಿಸಿದ್ದೇನೆ ಎಂದು ಬೆದರಿಕೆ ಹಾಕಿದ್ದ.

ಕೂಡಲೇ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಚೇರಿ ಆವರಣದಲ್ಲಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಇದು ಹುಸಿ ಕರೆ ಎಂದು ದೃಢಪಟ್ಟಿದ್ದು, ಈ ಕುರಿತು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ವೇಳೆ ಆರೋಪಿ ತಾನು ಈ ಹಿಂದೆ ಗಣೇಶ್ ಬೀಡಿ ವರ್ಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಕೆಲಸ ಬಿಟ್ಟಮೇಲೆ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದು, ತಮಾಷೆಗಾಗಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದೆ ಎಂದು ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net