

ತಿ.ನರಸೀಪುರ: ವೀರಶೈವ ಮಹಾಸಭಾ ಸ್ಥಾಪಿಸಿದ ಶ್ರೀ ಹಾನಗಲ್ ಕುಮಾರಸ್ವಾಮಿ ಹಾಗೂ ಸುತ್ತೂರು ಮಠದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಸಮಾಜಕ್ಕೆ ತಮ್ಮ ಬದುಕನ್ನೇ ಮುಡಿಪಾಗಿಟ್ಟು, ಮಠಗಳ ಸೇವೆಯನ್ನು ಮತ್ತಷ್ಟು ವಿಸ್ತರಿಸಿದ ಶರಣ ಸಂತರು ಎಂದು ವಾಟಾಳು ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.
ಪಟ್ಟಣದ ವಿವೇಕಾನಂದನಗರದಲ್ಲಿರುವ ವೀರಶೈವ ಲಿಂಗಾಯತ ಮಹಾಸಭಾ ಭವನದಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಶ್ರೀ ಹಾನಗಲ್ ಕುಮಾರ ಸ್ವಾಮೀಜಿ ಅವರ 159ನೇ ಜಯಂತಿ, ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 111ನೇ ಜಯಂತಿ ಮಹೋತ್ಸವ ಹಾಗೂ ಶಿಕ್ಷಕರ ದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಬ್ಬರು ಮಹನೀಯರ ಜತೆಗೆ ಶಿಕ್ಷಕರ ದಿನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ವೀರಶೈವ ಲಿಂಗಾಯತ ಸಮುದಾಯವನ್ನು ಸಂಘಟಿಸಬೇಕು ಎಂದು ಹಾನಗಲ್ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಹಾಸಭಾವನ್ನು ನಾಡಿನಲ್ಲಷ್ಟಲ್ಲದೆ ದೇಶಾದ್ಯಂತ ವಿಸ್ತರಿಸುವ ಕಾರ್ಯಕ್ಕೆ ಬುನಾದಿ ಹಾಕಿಕೊಟ್ಟರು. ಸುತ್ತೂರು ಮಠದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ದಾಸೋಹದೊಂದಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿ, ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸಿದರು. ಶಿಕ್ಷಕರ ವೃತ್ತಿಯ ಮೇಲೆ ವಿಶೇಷ ಗೌರವ ಇಟ್ಟುಕೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಘೋಷಿಸಿಕೊಂಡರು. ಹಾಗಾಗಿ ಮಹಾಸಭಾ ಮಹಿಳಾ ಘಟಕದ ಎಲ್ಲ ಕಾರ್ಯಕ್ರಮಗಳನ್ನು ವಾಟಾಳ್ ಮಠದಲ್ಲಿಯೇ ಆಯೋಜಿಸಬೇಕು ಎಂದು ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಬಸವರಾಜು ಹಿನಕಲ್ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯವನ್ನು ಸಂಘಟಿಸಿ, ಧ್ವನಿಯಾಗಬೇಕು ಎನ್ನುವ ಮಹತ್ಕಾರ್ಯಕ್ಕೆ ಪೂರಕವಾಗಿ ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ನರಸೀಪುರದಲ್ಲಿ ತಾಲೂಕು ಅಧ್ಯಕ್ಷ ಸಿ.ಎಂ.ಪ್ರಕಾಶ್ ಅವರು ಕೂಡ ಸಭಾ ಭವನವನ್ನು ಜೀರ್ಣೋದ್ಧಾರಗೊಳಿಸಿ, ಸಮುದಾಯಕ್ಕೆ ಸದ್ಬಳಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕರಾಟೆ, ಕಿಕ್ ಬಾಕ್ಸಿಂಗ್ ಹಾಗೂ ಬಾಕ್ಸಿಂಗ್‌ನಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಚಾಂಪಿಯನ್ ಚಿನ್ನದ ಪದಕ ವಿಜೇತೆ ಸಿ.ನಯನಾ ಕುಕ್ಕೂರು ಅವರಿಗೆ ಪ್ರತಿಭಾ ಪುರಸ್ಕಾರ ಹಾಗೂ 2026ರ ಸಾಲಿನಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಶಾಲಾ-ಕಾಲೇಜುಗಳ ಸಾಧಕ ಶಿಕ್ಷಕರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶಿಕ್ಷೃಕರಾದ ಅಂಬಿಕಾ ಎಚ್.ಎಸ್., ಡಾ.ರೇಣುಕಾ ಪ್ರಸಾದ್ ಕೆ.ಎಸ್., ಜಿ.ಎಲ್. ಸೋಮಣ್ಣ, ಗಿರೀಶ್ ಬಿ.ಪಿ., ಭಾಗ್ಯಮ್ಮ, ಲೀಲಾವತಿ ಎಂ.ಬಿ., ಸಿದ್ಧರಾಜು, ಪ್ರಭು ಸಿ.ಎನ್., ನಂದಿನಿ ಎಸ್.ಎಸ್., ಎ.ಎಸ್. ಮಹದೇವ, ಪಿ.ಎಸ್.ಜಯಲಕ್ಷ್ಮೀ ಹಾಗೂ ನಾಗಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಧನ್ಯಾ ಸತ್ಯೇಂದ್ರಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕಿ ಶಾರದಾ ಶಿವಲಿಂಗಸ್ವಾಮಿ, ಸಮಾಜ ಸೇವಕಿ ಸುಧಾ, ಮಹಾಸಭಾ ತಾಲೂಕು ಅಧ್ಯಕ್ಷ ಸಿ.ಎಂ.ಪ್ರಕಾಶ್, ಯುವ ಘಟಕದ ಅಧ್ಯಕ್ಷ ಕೆ.ಎನ್.ಅಶೋಕ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೂಪಶ್ರೀ ಪರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಮಹದೇವಸ್ವಾಮಿ, ನಿರ್ದೇಶಕಿ ಸವಿತಾ ಪ್ರಕಾಶ್, ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಿವಕುಮಾರ್ ದೂರ, ನಿರ್ದೇಶಕ ಪೂಜಿತ್ ಮೆಡಿಕಲ್ಸ್ ಪಿ.ಕುಮಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರಪ್ಪ, ತೋಂಟೇಶ್ ಹಾಗೂ ಇತರರು ಇದ್ದರು.