ಪೊಲೀಸ್ ಲಾಠಿ ಏಟಿಗೆ ಬಾಲಕಿಗೆ ಗಂಭೀರ ಗಾಯ

ಜಂಬೂ ಸವಾರಿ ಮೆರವಣಿಗೆ ವೀಕ್ಷಿಸುತ್ತಿದ್ದ ಬಾಲಕಿಗೆ ಲಾಠಿ ಏಟು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ
ಪೊಲೀಸ್ ಲಾಠಿ ಏಟಿಗೆ ಬಾಲಕಿಗೆ ಗಂಭೀರ ಗಾಯ
ಪೊಲೀಸರ ಲಾಠಿಯಿಂದ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಶಿರಾಳ ಯೋಗಕ್ಷೇಮವನ್ನು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ವಿಚಾರಿಸಿದರುGirl sustains serious injuries from police lathi blow
Published on: 

ಮೈಸೂರು: ಜಂಬೂ ಸವಾರಿ ಮೆರವಣಿಗೆ ವೀಕ್ಷಣೆಗಾಗಿ ಕುಟುಂಬದವರೊಂದಿಗೆ ಬಂದಿದ್ದ 5 ವರ್ಷದ ಬಾಲಕಿ ಪೊಲೀಸ್ ಲಾಠಿ ಏಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಬನ್ನಿಮಂಟಪದ ಬಳಿ ಇರುವ ಹೈವೇ ವೃತ್ತದಲ್ಲಿ ಕುಟುಂಬದವರೊಂದಿಗೆ ಜಂಬೂ ಸವಾರಿ ಮೆರವಣಿಗೆ ನೋಡುತ್ತಿದ್ದ ಶಿಶಿರಾ ತಲೆಗೆ ತೀವ್ರ ಪೆಟ್ಟಾಗಿದೆ. ಆಕೆಯನ್ನು ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿದೆ. ಬಾಲಕಿ ತಂದೆ, ಬನ್ನಿಮಂಟಪದ ನಿವಾಸಿ ಎಚ್.ಕೆ.ನಾಗರಾಜು ನೀಡಿರುವ ದೂರಿನಂತೆ ನರಸಿಂಹರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೋಗಕ್ಷೇಮ ವಿಚಾರಿಸಿದ ಸಚಿವ:

ಪೊಲೀಸರ ಲಾಠಿಯಿಂದ ಗಂಭೀರ ಗಾಯಗೊಂಡಿರುವ ಶಿಶಿರಾಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಮಗುವಿನ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡ ಅವರು, ಪಾಲಕರಿಗೆ ಧೈರ್ಯ ಹೇಳಿದರು. ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ರೀತಿಯ ಅತ್ಯುತ್ತಮ ವೈದ್ಯಕೀಯ ನೆರವು ಒದಗಿಸುವುದಾಗಿ ಭರವಸೆ ನೀಡಿದರು. ವೈಯಕ್ತಿಕವಾಗಿಯೂ ಧನಸಹಾಯ ಮಾಡಿದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡಿಸಿಗೆ ಸೂಚನೆ ನೀಡಿದರು.ಡಿಸಿ ಲಕ್ಷ್ಮೀಕಾಂತ ರೆಡ್ಡಿ, ನಗರದ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಉಪಸ್ಥಿತರಿದ್ದರು.

ಆಗಿದ್ದು ಏನು..?

ಹೈವೇ ವೃತ್ತ ಬಳಿಯ ನಿವಾಸಿ ಎಚ್.ಕೆ.ನಾಗರಾಜು ಅವರ ಪುತ್ರಿ ಶಿಶಿರಾ (5) ತನ್ನ ದೊಡ್ಡಪ್ಪ ಎಚ್.ಕೆ.ಶ್ರೀನಿವಾಸ್ ಕುಟುಂಬದೊಂದಿಗೆ ಗುರುವಾರ ಜಂಬೂ ಸವಾರಿಯಲ್ಲಿ ಕಲಾತಂಡಗಳು, ಸ್ತಬ್ಧಚಿತ್ರಗಳ ನೋಡಲು ಬಂದಿದ್ದರು. ಈ ಸಂದರ್ಭದಲ್ಲಿ ಸಂಜೆ 4.30ರ ಸುಮಾರಿಗೆ ಜನದಟ್ಟಣೆ ನಿಯಂತ್ರಿಸುತ್ತಿದ್ದ ಪೊಲೀಸರು ಏಕಾಏಕಿ ಲಾಠಿ ಬೀಸಿದ್ದಾರೆ. ಆಗ ಪಕ್ಕದಲ್ಲೇ ನಿಂತಿದ್ದ ಬಾಲಕಿ ತಲೆಗೆ ಲಾಠಿಯ ತುದಿ ಬಡಿದಿದೆ. ಏಟಿನ ರಭಸಕ್ಕೆ ಬಾಲಕಿ ತಲೆಯಿಂದ ರಕ್ತ ಚಿಮ್ಮಿದ್ದು, ನೆರೆದಿದ್ದ ಇಡೀ ಜನಸಮೂಹವೇ ಗಾಬರಿಗೊಂಡಿತ್ತು.

ಬಾಲಕಿಯ ತಲೆ ಒಡೆದಿತ್ತು. ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಂಆರ್‌ಐ ಸ್ಕ್ಯಾನ್ ಸಹ ಮಾಡಿಸಲಾಗಿದೆ. ವೈದ್ಯರ ಶಿಫಾರಸಿನಂತೆ ತುರ್ತಾಗಿ ಶಸ್ತ್ರ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯಕ್ಕೆ ಬಾಲಕಿಗೆ ಐಸಿಯುನಲ್ಲಿದ್ದಾಳೆ. ಶಸ್ತ್ರಚಿಕಿತ್ಸೆಗಾಗಿ ಈಗಾಗಲೇ ಆಸ್ಪತ್ರೆಗೆ 3 ಲಕ್ಷ ರೂ.ಪಾವತಿಸಿದ್ದಾರೆ. ಆಸ್ಪತ್ರೆ ವೆಚ್ಚವನ್ನು ಗಾಯಗೊಳಿಸಿರುವ ಪೊಲೀಸರು ಸೇರಿದಂತೆ ಸಂಬಂಧಪಟ್ಟವರು ನೀಡಬೇಕು ಎಂದು ಆಗ್ರಹಿಸಿದೆ. ಆಸ್ಪತ್ರೆಗೆ ಶಾಸಕ ತನ್ವೀರ್ ಸೇಠ್, ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ, ಬಾಲಕಿಯ ಯೋಗ ಕ್ಷೇಮ ವಿಚಾರಿಸಿದ್ದಾರೆ.

ತಪ್ಪೊಪ್ಪಿಕೊಂಡ ಪೊಲೀಸರು:

ದಸರಾ ಸ್ತಬ್ಧಚಿತ್ರಗಳನ್ನು ನೋಡುವ ಖುಷಿಯಲ್ಲಿ ಮಕ್ಕಳು ಹಾಗೂ ಜನರು ಎದ್ದು ನಿಲ್ಲುತ್ತಿದ್ದರು. ಅವರನ್ನು ಕುಳಿತುಕೊಳ್ಳುವಂತೆ ತಿಳಿಸಿ ಪೊಲೀಸ್ ಸಿಬ್ಬಂದಿ ಲಾಠಿಯಿಂದ ಬ್ಯಾರಿಕೇಡ್‌ಗೆ ಬಡಿದಿದ್ದಾರೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಲಕಿಯ ಕಿವಿಗೆ ತಾಗಿ ತಲೆಗೆ ಏಟು ಬಿದ್ದಿದೆ. ಆಕೆಯನ್ನು ಆಂಬುಲೆನ್ಸ್‌ನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಮಗುವಿಗೆ ತುರ್ತು ಚಿಕಿತ್ಸೆ ಕೊಡಿಸುವಲ್ಲಿ ಸ್ಪಂದಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net