

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಆನಂದಗೆರೆ ಮಂಜುನಾಥ್ ಆರ್.ಗೌಡ ಒತ್ತಾಯಿಸಿದರು.
ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ದಿಂಡಗಾಡು ಗ್ರಾಮದಲ್ಲಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಭಾನುವಾರ ಆಯೋಜಿಸಿದ್ದ ಹಸಿರು ಶಾಲು ದೀಕ್ಷೆ ಹಾಗೂ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಪೀಡಿತ ತಾಲೂಕು ಎಂದು ಘೋಷಣೆಯಾಗಿರುವುದರಿಂದ ಸರ್ಕಾರ ಕೇವಲ ಘೋಷಣೆಗೆ ಸೀಮಿತವಾಗದೆ ರೈತರಿಗೆ ಅಗತ್ಯ ಪರಿಹಾರ ಹಾಗೂ ವಿಶೇಷ ಅನುದಾನ ಒದಗಿಸಬೇಕು ಎಂದರು.
ರೈತರ ಬೆಳೆ ಸಾಲ ಮರುಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಹಕಾರಿ ಬ್ಯಾಂಕ್‌ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮರುಪಾವತಿಗೆ ಕಾಲಾವಕಾಶ ನೀಡುವ ಜತೆಗೆ ಬಡ್ಡಿ ಮನ್ನಾ ಅಥವಾ ಪರಿಹಾರದ ಕ್ರಮ ಕೈಗೊಳ್ಳಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ತಾಲೂಕಿನ ಕೆರೆ-ಕಟ್ಟೆಗಳು ಹಾಗೂ ಜಲಾಶಯಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಸರ್ಕಾರ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯ ಯುವ ಘಟಕದ ಅಧ್ಯಕ್ಷ ಕೋಮಲಾಪುರ ಸ್ವಾಮಿಗೌಡ ಮಾತನಾಡಿ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಬೇಕಾದರೆ ರೈತರು ಪಕ್ಷ, ಜಾತಿ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟಿತರಾಗಬೇಕು. ಬರದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡುವುದರ ಜತೆಗೆ ಮುಂದಿನ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೆರವು ನೀಡಬೇಕು. ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಹಾಗೂ ನೀರಾವರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ರೈತರ ಬದುಕಿಗೆ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ದಿಂಡಗಾಡು ಗ್ರಾಮ ಘಟಕದ ಅಧ್ಯಕ್ಷರಾಗಿ ದಯಾನಂದ ಅವರನ್ನು ಆಯ್ಕೆ ಮಾಡಲಾಯಿತು. ಗ್ರಾಮದ ಹಲವು ರೈತರು ಹಸಿರು ಶಾಲು ದೀಕ್ಷೆ ಸ್ವೀಕರಿಸುವ ಮೂಲಕ ರೈತ ಸಂಘಕ್ಕೆ ಸೇರ್ಪಡೆಯಾದರು. ರಾಜ್ಯ ಸದಸ್ಯ ದೇವಶೆಟ್ಟರು, ತಾಲೂಕು ಸಂಚಾಲಕ ಕೊಣಸೂರು ಶಿವರಾಜು, ಉಪಾಧ್ಯಕ್ಷ ಬಿಲ್ಲಹಳ್ಳಿ ಸುರೇಶ್, ಕಾರ್ಯದರ್ಶಿ ಬೆಟ್ಟದಪುರ ಯೋಗಣ್ಣ, ತಾಲೂಕು ಅಧ್ಯಕ್ಷ ಪಿ.ಎಂ.ಮಹದೇವ, ಕುಮಾರ್, ಮಾದೇವ ಮತ್ತಿತರರು ಇದ್ದರು.