ಪಾರಂಪರಿಕ ಚಿಕಿತ್ಸಾ ಸಂಶೋಧನೆ ಕೈಗೊಳ್ಳಿ: ವೈದ್ಯಕೀಯ ಮೌಲ್ಯಮಾಪಕ ಮಂಡಳಿಯ ಅಧ್ಯಕ್ಷ ಮುಕುಲ್ ಪಟೇಲ್ ಸಲಹೆ

ಜ್ಯೋತಿರ್ಗಮಯ ವಿಚಾರ ಸಂಕಿರಣ
Conduct research on traditional therapies: Medical Evaluation Board Chairman Mukul Patel advises
ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮುಕುಲ್ ಪಟೇಲ, ಡಾ.ಸುನಿಲ್ ಪನ್ವರ್, ಡಾ.ಸಿ.ಜಿ.ಬೆಟಸೂರ ಮಠ, ಆರ್.ಮಹೇಶ್, ರಾಜೀವ್ ಮಹಾಜನ್, ಡಾ.ಶರಭೇಶ್ವರ್ ಕರ್, ಡಾ.ಗವಿಮಠ ಶಿವಾನಂದ್, ಡಾ.ಡಿ.ಸಂಧ್ಯಾರಾಣಿ, ಡಾ.ಬಿ.ಜಿ.ಮಧುಸೂಧನ್ ಇತರರು ಇದ್ದರು.
Published on: 

ಮೈಸೂರು: ನಮ್ಮ ಪಾರಂಪರಿಕ ಚಿಕಿತ್ಸಾ ಪದ್ಧತಿಯ ಮೂಲ ತತ್ವಗಳನ್ನು ಕಾಪಾಡಿಕೊಂಡು, ಅವುಗಳ ಆಧಾರದ ಮೇಲೆ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಮೌಲ್ಯಮಾಪಕ ಹಾಗೂ ಶ್ರೇಯಾಂಕ ಮಂಡಳಿಯ ಅಧ್ಯಕ್ಷ ಮುಕುಲ್ ಪಟೇಲ್ ಹೇಳಿದರು.

ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶಾಲಕ್ಯ ತಂತ್ರ ಸ್ನಾತಕೋತ್ತರ ವಿಭಾಗದಿಂದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ‘ಜ್ಯೋತಿರ್ಗಮಯ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಆಯುರ್ವೇದ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಆಧುನಿಕ ರೋಗನಿರ್ಣಯ ವಿಧಾನಗಳು ಮತ್ತು ಆಧುನಿಕ ಸಾಧನಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ. ಆಧುನಿಕ ಸಾಧನೆಗಳನ್ನು ಹಾಗೂ ರೋಗ ನಿರ್ಣಯ ವಿಧಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಾಕ್ಷ್ಯಾಧಾರಿತ ಚಿಕಿತ್ಸಾ ಪದ್ಧತಿಯನ್ನು ರೂಪಿಸಬೇಕಾಗಿದೆ ಎಂದರು.

ನಮ್ಮ ಚಿಕಿತ್ಸಾ ವಿಧಾನಗಳೊಂದಿಗೆ ಆಧುನಿಕ ರೋಗನಿರ್ಣಯ ಸಾಧನಗಳನ್ನು ಬಳಸಿಕೊಂಡು ಅಧ್ಯಯನ ನಡೆಸಿದಾಗ ದೊರೆಯುವ ಫಲಿತಾಂಶಗಳು ವೈಜ್ಞಾನಿಕ ದೃಷ್ಟಿಯಿಂದಲೂ ಮಾನ್ಯವಾಗುವಂತಿರಬೇಕು. ಈ ರೀತಿಯ ವೈಜ್ಞಾನಿಕ ಅಧ್ಯಯನಗಳು ನಮ್ಮ ಚಿಕಿತ್ಸಾ ಪದ್ಧತಿಗಳ ಪರಿಣಾಮಕಾರಿತ್ವವನ್ನು ಜಗತ್ತಿನ ಮುಂದೆ ಪರಿಚಯಿಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಆಯುಷ್ ಇಲಾಖೆಯ ಆಯುಕ್ತ ಡಾ.ಸುನಿಲ್ ಪನ್ವರ್ ಮಾತನಾಡಿ, ಈಗ ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯದ ಸಮನ್ವಯದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಹೃದಯಾಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಚಿಕಿತ್ಸೆಗೆ ಆಧುನಿಕ ವೈದ್ಯಕೀಯ ಪದ್ಧತಿ ಅತ್ಯಂತ ಅಗತ್ಯವಿದೆ. ಆದರೆ ದೀರ್ಘಕಾಲದಲ್ಲಿ ಹೃದ್ರೋಗ ಸೇರಿದಂತೆ ವಿವಿಧ ಕಾಯಿಲೆಗಳನ್ನು ತಡೆಯುವುದು, ದೇಹವನ್ನು ಪ್ರಕೃತಿಯೊಂದಿಗೆ ಸಮತೋಲನದಲ್ಲಿ ಇಡುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಪಿಸುವಲ್ಲಿ ಆಯುರ್ವೇದ ಸೇರಿದಂತೆ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಆಧುನಿಕ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಜನರು ಸಾಮಾನ್ಯವಾಗಿ ಗುರುತಿಸುವಂತಹ ಸ್ಥಳದಲ್ಲಿಯೇ ಆಯುರ್ವೇದದ ಚಿಕಿತ್ಸಾ ಪದ್ಧತಿಗಳ ಕುರಿತು ಆಧುನಿಕ ವೈದ್ಯಕೀಯ ದೃಷ್ಟಿಕೋನದಿಂದ ಚರ್ಚಿಸುವ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ವಿಶೇಷವಾಗಿದೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಯಾವುದೇ ಪ್ರಕಟಣೆಯೂ ಕೇವಲ ಬರಹಗಳ ಸಂಗ್ರಹವಾಗಿರದೆ, ಸಾಮೂಹಿಕ ಚಿಂತನೆಯ ಪ್ರತಿಬಿಂಬವಾಗಬೇಕು. ತನ್ಮೂಲಕ ಭವಿಷ್ಯದ ಸಂಶೋಧನೆಗಳಿಗೆ ಆಕರವಾಗಬೇಕು ಎಂದು ಹೇಳಿದರು.

ಆಯುರ್ವೇದವನ್ನು ಸಂಕೀರ್ಣ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಬಳಸುವ ಕುರಿತು ಸಾಕ್ಷ್ಯಾಧಾರಿತ ಸಂಶೋಧನೆ ನಡೆಯುವುದು ಇಂದಿನ ಅಗತ್ಯವಾಗಿದೆ. ಆಧುನಿಕ ಜ್ಞಾನ ಮತ್ತು ಸಾಂಪ್ರದಾಯಿಕ ಜ್ಞಾನಗಳ ನಡುವೆ ಸಮನ್ವಯ ಹಾಗೂ ಸಂವಾದವನ್ನು ಬೆಳೆಸುವುದೇ ಮುಂದಿನ ಪ್ರಗತಿಯ ನಿಜವಾದ ಮಾರ್ಗವಾಗಿದೆ ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಯುಎಸ್‌ಎಯ ರಾಜೀವ್ ಮಹಾಜನ್, ಕಾಲೇಜಿನ ಪ್ರಾಂಶುಪಾಲ ಡಾ.ಶರಭೇಶ್ವರ್ ಕರ್, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ.ಗವಿಮಠ ಶಿವಾನಂದ್, ಜಂಟಿ ಸಂಘಟನಾ ಕಾರ್ಯದರ್ಶಿ ಡಾ.ಡಿ.ಸಂಧ್ಯಾರಾಣಿ, ಸಹಾಯಕ ಪ್ರಾಧ್ಯಾಪಕ ಡಾ.ಬಿ.ಜಿ.ಮಧುಸೂಧನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net