ಪರಿಸರಸ್ನೇಹಿ ಇಂಧನ ಒದಗಿಸಲು ಸಂಕಲ್ಪ

ಸಿಎಫ್‌ಟಿಆರ್‌ಐ ಮುಖ್ಯ ವಿಜ್ಞಾನಿ ಎಸ್.ನಾಗರಾಜನ್ ಮಾಹಿತಿ ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ವತಿಯಿಂದ ಮಾನದಂಡಗಳ ಸಮಾವೇಶ
ಪರಿಸರಸ್ನೇಹಿ ಇಂಧನ ಒದಗಿಸಲು ಸಂಕಲ್ಪ
ಬಿಐಎಸ್ ಬೆಂಗಳೂರಿನ ಶಾಖಾ ಕಚೇರಿಯ ವತಿಯಿಂದ ಹೆಬ್ಬಾಳದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಮಾನದಂಡಗಳ ಸಮಾವೇಶವನ್ನು ಸಿಎಫ್‌ಟಿಆರ್‌ಐ ಮುಖ್ಯ ವಿಜ್ಞಾನಿ ಎಸ್.ನಾಗರಾಜನ್ ಉದ್ಘಾಟಿಸಿದರು.ಸುಷ್ಮಾ ರಾವ್, ವಿನೋದಿನಿ ಕಿಶೋರ್, ವಿಜಯ್ ಕುಮಾರ್, ಜಿ.ಆರ್.ವಿನಯ್, ಕೆ.ಎಲ್. ಶಿವಕುಮಾರ್ ಇತರರಿದ್ದರು.Commitment to provide eco-friendly fuel
Published on: 

ಮೈಸೂರು: ಗುಣಮಟ್ಟ, ಸುರಕ್ಷತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ನಾವೀನ್ಯ ಮತ್ತು ಪ್ರಮಾಣೀಕರಣ ಒಟ್ಟಾಗಿ ಸಾಗಬೇಕು ಎಂದು ನಗರದ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಮುಖ್ಯ ವಿಜ್ಞಾನಿ ಎಸ್.ನಾಗರಾಜನ್ ಹೇಳಿದರು.

ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ಬೆಂಗಳೂರಿನ ಶಾಖಾ ಕಚೇರಿಯಿಂದ ಹೆಬ್ಬಾಳದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಮಾನದಂಡಗಳ ಸಮಾವೇಶದಲ್ಲಿ ಮಾತನಾಡಿದರು.

ಸುಸ್ಥಿರ ಅಭಿವೃದ್ಧಿ ಗುರಿ 7 (ಎಸ್‌ಡಿಜಿ-7) ವಿಶ್ವಸಂಸ್ಥೆಯ ಜಾಗತಿಕ ಗುರಿಯಾಗಿದ್ದು, ಕೈಗೆಟುಕುವ ಮತ್ತು ಶುದ್ಧ ಇಂಧನ ಎನ್ನುವುದು 2030ರ ವೇಳೆಗೆ ಪ್ರಪಂಚದಾದ್ಯಂತ ಎಲ್ಲರಿಗೂ ಪರಿಸರಸ್ನೇಹಿ ಹಾಗೂ ಕಡಿಮೆ ವೆಚ್ಚದ ಇಂಧನ ಒದಗಿಸುವುದು ಇದರ ಸಂಕಲ್ಪವಾಗಿದೆ. ಹೀಗಾಗಿ, ಕೈಗೆಟುಕುವ ಮತ್ತು ಶುದ್ಧ ಇಂಧನದ ಮೇಲೆ ಕೇಂದ್ರೀಕರಿಸಿ ಉದ್ಯಮ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವಾಗಿದೆ ಎಂದರು.

ಮಾನದಂಡಗಳು ವೈಜ್ಞಾನಿಕ ಪ್ರಗತಿಯನ್ನು ಅಳೆಯಲು ಸಹಾಯ ಮಾಡುತ್ತವೆ. ಹೊಸ ತಂತ್ರಜ್ಞಾನಗಳು ಸುರಕ್ಷಿತ, ವಿಶ್ವಾಸಾರ್ಹ, ಪರಿಣಾಮಕಾರಿ, ನೈಜ ಪ್ರಪಂಚದ ಬಳಕೆಗೆ ಸೂಕ್ತವಾಗಿದೆ ಎಂದು ಖಚಿತಪಡಿಸುತ್ತದೆ ಎಂದು ಹೇಳಿದರು.

ಆಹಾರ ತಂತ್ರಜ್ಞಾನಕ್ಕೆ ಸಿಎಫ್‌ಟಿಆರ್‌ಐ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, 75 ವರ್ಷ ಪೂರೈಸಿರುವ ಈ ಸಂಸ್ಥೆಯಲ್ಲಿ ತಂತ್ರಜ್ಞಾನ ಅಭಿವೃದ್ಧಿ, ಗುಣಮಟ್ಟ ನಿಯಂತ್ರಣ, ಮಾನದಂಡಗಳ ಕುರಿತು ಸುಮಾರು 15 ಸಂಶೋಧನಾ ವಿಭಾಗಗಳಿವೆ. ಇದರ ವಿಜ್ಞಾನಿಗಳು ಬಿಐಎಸ್ ತಜ್ಞರು, ವಿಭಾಗೀಯ ಸಮಿತಿಗಳಿಗೂ ಕೊಡುಗೆ ನೀಡುತ್ತಿದ್ದಾರೆ ಎಂದರು.

ಆಹಾರ ಸುರಕ್ಷತೆ ಅತಿ ಮುಖ್ಯ. ಹೀಗಾಗಿ, ಸಿಎಫ್‌ಟಿಆರ್‌ಐನಲ್ಲಿರುವ ಆಹಾರ ಸುರಕ್ಷತೆ ಮತ್ತು ವಿಶ್ಲೇಷಣಾತ್ಮಕ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯವು ವಿದೇಶದಿಂದ ಆಮದು ಮಾಡಿಕೊಂಡ ಮತ್ತು ಸ್ವದೇಶದ ಆಹಾರ ಉತ್ಪನ್ನಗಳನ್ನು ಬಿಐಎಸ್ ಮತ್ತು ಎಫ್‌ಎಸ್‌ಎಸ್‌ಎಐ ಮಾನದಂಡಗಳ ಅನುಸರಣೆಗಾಗಿ ಪರೀಕ್ಷಿಸುತ್ತದೆ.

ಈ ಸಂದರ್ಭದಲ್ಲಿ ಮಾದರಿಗಳನ್ನು ಸುರಕ್ಷತೆ, ಗುಣಮಟ್ಟ ಮತ್ತು ಸರಿಯಾದ ಲೇಬಲಿಂಗ್ ಆಧಾರದ ಮೇಲೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರೊಂದಿಗೆ ನಮ್ಮಲ್ಲಿರುವ ಆಹಾರ ಪ್ರಯೋಗಾಲಯವು ಉನ್ನತ ಮಟ್ಟದ ವಿಶ್ಲೇಷಣೆಯ ಅಗತ್ಯವಿರುವ ವಿಶೇಷ ಪ್ರಕರಣಗಳನ್ನೂ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು.

ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ಒಟ್ಟಿಗೆ ಸಾಗಬೇಕು. ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದುಕೊಳ್ಳಲು ಉದ್ಯಮ ಸಂಬಂಧಿತ ಯೋಜನೆಗಳು ಮತ್ತು ವೃತ್ತಿಪರ ತರಬೇತಿಯ ಮೂಲಕ ಪ್ರಾಯೋಗಿಕ ಮಾನ್ಯತೆ ಗಿಟ್ಟಿಸಿಕೊಳ್ಳಬೇಕು. ಶಿಕ್ಷಣವು ಯುವ ಜನರನ್ನು ಉದ್ಯೋಗ ಹುಡುಕಲು ಮಾತ್ರವಲ್ಲದೆ ತಂತ್ರಜ್ಞಾನಗಳು, ಉತ್ಪನ್ನಗಳು, ಉದ್ಯಮ ಅಭಿವೃದ್ಧಿ ಪಡಿಸಲು ಸಹ ಸಜ್ಜುಗೊಳಿಸಬೇಕು ಎಂದರು.

ಕೀಳರಿಮೆ ಬಿಡಿ:

ನಾನೂ ಸಹ ಸರ್ಕಾರಿ ಶಾಲೆಯಲ್ಲಿ ಪ್ರಾದೇಶಿಕ (ತಮಿಳು) ಮಾಧ್ಯಮದಲ್ಲೇ ಓದಿರುವ ವಿದ್ಯಾರ್ಥಿ. ಹೀಗಾಗಿ, ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಕೀಳರಿಮೆ ಬೆಳೆಸಿಕೊಳ್ಳಬಾರದು. ಕುತೂಹಲ, ಪ್ರಶ್ನೋತ್ತರ ಮತ್ತು ಪ್ರಾಯೋಗಿಕ ಕಲಿಕೆಯು ಭವಿಷ್ಯದ ತಂತ್ರಜ್ಞಾನ ರೂಪಿಸಲು ಸಹಾಯ ಮಾಡುತ್ತದೆ ಎಂದರು.

ಬೆಂಗಳೂರು ಶಾಖಾ ಕಚೇರಿಯ ಮುಖ್ಯಸ್ಥೆ ಸುಷ್ಮಾರಾವ್ ಮಾತನಾಡಿ, ಮಾನದಂಡಗಳು ಗ್ರಾಹಕರು, ತಯಾರಕರು, ಇತರ ಪಾಲುದಾರರಲ್ಲಿ ವಿಶ್ವಾಸ ಬೆಳೆಸುತ್ತದೆ. ಜತೆಗೆ, ಗುಣಮಟ್ಟ, ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಸುಸ್ಥಿರತೆಗೆ ಅಡಿಪಾಯವನ್ನೂ ಒದಗಿಸುತ್ತವೆ. ಇದರೊಂದಿಗೆ ದೈನಂದಿನ ಜೀವನದಲ್ಲಿ ಮತ್ತು ಕೈಗಾರಿಕೆಗಳು, ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಾನದಂಡಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.

ಯುವ ಪೀಳಿಗೆಯಲ್ಲಿ ಗುಣಮಟ್ಟದ ಪ್ರಜ್ಞೆ, ನಾವೀನ್ಯತೆ, ಉತ್ಪಾದನೆ ಮತ್ತು ಸುಸ್ಥಿರ ಬೆಳವಣಿಗೆಗೆ ಅತ್ಯಗತ್ಯ. ಗುಣಮಟ್ಟವು ಕೇವಲ ತಾಂತ್ರಿಕ ಅವಶ್ಯಕತೆಗಿಂತ ಹೆಚ್ಚಾಗಿ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು. ಹಂಚಿಕೆಯ ಜವಾಬ್ದಾರಿಯೂ ಆಗಬೇಕು. ಮಾನದಂಡಗಳ ಹೆಚ್ಚಿನ ಅರಿವು ಮತ್ತು ಅಳವಡಿಕೆಯನ್ನು ಉತ್ತೇಜಿಸಲು ಉದ್ಯಮಕ್ಷೇತ್ರ ಮತ್ತು ಶೈಕ್ಷಣಿಕ ವಲಯ ಸಾಂಘಿಕವಾಗಿ ಕೆಲಸ ಮಾಡಬೇಕು ಎಂದರು.

ಬಿಐಎಸ್ ಬೆಂಗಳೂರಿನ ನಿರ್ದೇಶಕಿ ವಿನೋದಿನಿ ಕಿಶೋರ್, ಜಂಟಿ ನಿರ್ದೇಶಕ ವಿಜಯ್ ಕುಮಾರ್, ಮ್ಯಾನುಫ್ಯಾಕ್ಚರಿಂಗ್ ಎಕ್ಸಲೆನ್ಸ್ ಸಿಸ್ಟಮ್ಸ್ ಮುಖ್ಯಸ್ಥ ಜಿ.ಆರ್.ವಿನಯ್, ಜೆಕೆ ಟಯರ್ ಕಂಪನಿಯ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯ ಮುಖ್ಯಸ್ಥ ಕೆ.ಎಲ್. ಶಿವಕುಮಾರ್, ನಿರ್ವಹಣೆಯ ಜನರಲ್ ಮ್ಯಾನೇಜರ್ ಪ್ರಕಾಶ್ ರಾವ್, ಕೇನ್ಸ್ ಟೆಕ್ನಾಲಜಿಯ ಸಹಾಯಕ ವ್ಯವಸ್ಥಾಪಕ ಎನ್.ಎ.ಅಶ್ವಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net