

ಮೂಗೂರು: ಸಂವಿಧಾನ ದಿನಾಚರಣೆಯ ನಿಮಿತ್ತ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಕಲ್ಪಿತ ವಿಧಾನಮಂಡಲ ಅಧಿವೇಶನ ಆಯೋಜಿಸಲಾಗಿತ್ತು.
ಮೂಗೂರು ಗ್ರಾಪಂ ಸಹಯೋಗದೊಂದಿಗೆ ಆಯೋಜಿಸಿದ್ದ ಕಲಾಪದಲ್ಲಿ ವಿದ್ಯಾರ್ಥಿಗಳು ಸಭಾಪತಿ, ಮುಖ್ಯಮಂತ್ರಿ, ವಿಪಕ್ಷ ನಾಯಕ ಹಾಗೂ ಸಚಿವರಾಗಿ ಚರ್ಚೆ ನಡೆಸುವ ಮೂಲಕ ಸದನದ ಮಹತ್ವ ಅರಿತರು.
ವಿರೋಧ ಪಕ್ಷದ ನಾಯಕರು ಕೇಳಿದ ಪ್ರಶ್ನೆಗಳಿಗೆ ವಿವಿಧ ಇಲಾಖೆಯ ಸಚಿವರುಗಳು ಉತ್ತರಿಸಿದರು. ಚುಕ್ಕೆ ಗುರುತಿನ ಪ್ರಶ್ನೆಗಳು ಶೂನ್ಯ ವೇಳೆಯಲ್ಲಿ ಕೇಳಲಾದ ಪ್ರಶ್ನೆಗಳು ಗಮನ ಸೆಳೆದವು. ವಿದ್ಯಾರ್ಥಿಗಳ ಚಾಕಚಕ್ಯತೆ ಹಾಗೂ ಪ್ರಶ್ನೆಗಳಿಗೆ ಉತ್ತರಿಸಿದ ರೀತಿ ಗಮನಿಸಿದ ಗಣ್ಯರು ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ರೇಣುಕಾ, ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಮೂರ್ತಿ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳಾದ ನಾಗೇಶ್, ಉಪಪ್ರಾಂಶುಪಾಲ ಸಿ.ಪುಟ್ಟಸ್ವಾಮಿ, ಶಿಕ್ಷಕರಾದ ಕೇಶವ್, ಮಹದೇವ, ರಮೇಶ್, ಚಂದ್ರಪ್ರಭಾ, ನಿರ್ಮಲಾ, ರಂಗಯ್ಯ, ಮನುಕುಮಾರ್ ಇತರರು ಇದ್ದರು.