ಮೈಸೂರು: ಶಿಕ್ಷಣ ಕ್ರಾಂತಿಯ ಮೂಲಕ ಸಮಾಜದ ಕತ್ತಲೆ ಹೋಗಲಾಡಿಸಿದ ಯುಗಪುರುಷ ನಾರಾಯಣ ಗುರು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಣ್ಣಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಸಮಿತಿಯಿಂದ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ಶ್ರೀನಾರಾಯಣಗುರು ಜಯಂತಿ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಗೌರವದಿಂದ ಬದುಕಲು ವಿದ್ಯೆ ಅಗತ್ಯ ಎಂಬುದನ್ನು ಮನಗಂಡು ನಮಗೆ ಶಿಕ್ಷಣದ ಬಾಗಿಲು ತೆರೆದುಕೊಟ್ಟ ಮಹಾನ್ ಕ್ರಾಂತಿಕಾರಿ ಬ್ರಹ್ಮಶ್ರೀ ನಾರಾಯಣ ಗುರುಗಳು. ಕೇರಳದಲ್ಲಿ ಜನ್ಮತಾಳಿದ ಅವರು ಶಾಲೆಗಳನ್ನು ದೊಡ್ಡದು ಮಾಡಿ, ದೇವಸ್ಥಾನಗಳ ಆಡಂಬರವನ್ನು ಚಿಕ್ಕದು ಮಾಡಿ’ ಎಂಬ ಕ್ರಾಂತಿಕಾರಿ ಸಂದೇಶ ನೀಡಿದರು. ಮೂಢನಂಬಿಕೆಗಳಿಗಿಂತ ಅರಿವು ನೀಡುವ ಶಿಕ್ಷಣವೇ ಶ್ರೇಷ್ಠವೆಂಬುದನ್ನು ಜಗತ್ತಿಗೆ ಸಾರಿದರು ಎಂದು ಹೇಳಿದರು.
ಇಂತಹ ಮಹಾನ್ ಮಾನವತಾವಾದಿ ನಾರಾಯಣ ಗುರುಗಳ ವಿಚಾರಧಾರೆ ಹಾಗೂ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಲು ಮಂಗಳೂರಿನಲ್ಲಿ ಅಧ್ಯಯನ ಪೀಠಗಳನ್ನು ಸ್ಥಾಪಿಸಿ ಸಂಶೋಧನೆಗೆ ಪ್ರೋತ್ಸಾಹ ನೀಡುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಶ್ರೀನಾರಾಯಣ ಗುರುಗಳ ಜೀವನ, ಅವರ ಸಾಹಿತ್ಯ ಮತ್ತು ಸಾಮಾಜಿಕ ಕೊಡುಗೆಗಳ ಬಗ್ಗೆ ಕಡ್ಡಾಯವಾಗಿ ಅಧ್ಯಯನ ಸಾಮಗ್ರಿಗಳನ್ನು ಅಳವಡಿಸಿ, ಯುವಜನರಲ್ಲಿ ಸೌಹಾರ್ದ ಬೆಳೆಸಲಾಗುವುದು ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸಿದ ಈ ಮಹಾನ್ ಚೇತನದ ಕೊಡುಗೆಯನ್ನು ಮುಂಬರುವ ಯುವ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ನಮಗೆಲ್ಲರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಡುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ್ದಾರೆ. ಸಮಾಜದಲ್ಲಿದ್ದ ಜಾತೀಯತೆ, ಅಸ್ಪೃಶ್ಯತೆ ಹಾಗೂ ತಾರತಮ್ಯಗಳ ವಿರುದ್ಧ ಹೋರಾಡಿ, ಇಂದಿಗೂ ಸಮಾಜದ ಶೂದ್ರ ಹಾಗೂ ಹಿಂದುಳಿದ ವರ್ಗಗಳಿಗೆ ಗೌರವಯುತ ಜೀವನ ಮತ್ತು ಸಾಮಾಜಿಕ ನೆಲೆಯನ್ನು ಕಲ್ಪಿಸಿಕೊಟ್ಟ ಕೀರ್ತಿ ಶ್ರೀನಾರಾಯಣ ಗುರುಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ನಾರಾಯಣ ಗುರುಗಳು ಸಮಾಜದಲ್ಲಿದ್ದ ತಾರತಮ್ಯ, ಅಸ್ಪಶ್ಯತೆ ಹಾಗೂ ಕಂದಾಚಾರಗಳನ್ನು ತೊಡೆದುಹಾಕಿ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ತತ್ವದ ಮೇಲೆ ಸಮಾನತೆಯ ಸಮಾಜವನ್ನು ಕಟ್ಟಲು ಶ್ರಮಿಸಿದವರು ಎಂದು ಹೇಳಿದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, 19ನೇ ಶತಮಾನದ ಉತ್ತರಾರ್ಧ ಮತ್ತು 20ನೇ ಶತಮಾನದ ಆರಂಭದಲ್ಲಿ, ಸಮಾಜದಲ್ಲಿದ್ದ ಜಾತೀಯತೆ, ಅಸ್ಪಶ್ಯತೆ ಹಾಗೂ ಮೂಢನಂಬಿಕೆಗಳ ವಿರುದ್ಧ ಶಸ್ತ್ರ ಹಿಡಿಯದೆ, ಶಾಂತಿ ಮತ್ತು ಜ್ಞಾನದ ಮಾರ್ಗದಲ್ಲೇ ಮಹಾನ್ ಕ್ರಾಂತಿ ಮಾಡಿದವರು ನಾರಾಯಣ ಗುರುಗಳು ಎಂದು ಹೇಳಿದರು.
ಶೋಷಿತ ಹಾಗೂ ಕೆಳವರ್ಗದ ಜನರಿಗಾಗಿ ಅರವಿಪ್ಪುರಂ ಎಂಬಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವ ಮೂಲಕ ಗುರುಗಳು ಇಡೀ ದೇಶಕ್ಕೇ ಸವಾಲೆಸೆದು ನಾವು ಸ್ಥಾಪಿಸಿದ್ದು, ಈಳವ ಮಾನವರ ಶಿವನನ್ನು ಎಂದು ಹೇಳಿ, ದೇವಸ್ಥಾನಗಳ ಬಾಗಿಲನ್ನು ಎಲ್ಲರಿಗೂ ತೆರೆದರು ಎಂದು ಹೇಳಿದರು.
ನಾರಾಯಣ ಗುರುಗಳ ವಿಚಾರಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು, ಜಾತಿ-ಮತಗಳ ತಾರತಮ್ಯ ಇಲ್ಲದ ಸಮಾನತೆಯ ಸಮಾಜ ಕಟ್ಟುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.
ಶಿವಮೊಗ್ಗ ನಾರಾಯಣ ಗುರು ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀರೇಣುಕಾನಂದ ಸ್ವಾಮೀಜಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಮೈಸೂರು ಪೇಯಿಂಟ್ಸ್ ಆ್ಯಂಡ್ ವಾರ್ನಿಸ್ ಲಿಮಿಟೆಡ್ ಅಧ್ಯಕ್ಷ ಎಚ್.ಡಿ.ಗಣೇಶ್, ಕಾವೇರಿ ಜಲಾನಯನ ಯೋಜನೆಯ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮರಿಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಮೋಹನ ಚಂದ್ರಗುತ್ತಿ ಇತರರು ಇದ್ದರು.