ನಾಡಿನ ಪ್ರಗತಿಗೆ ಪ್ರತಿಯೊಬ್ಬರು ಸಂಕಲ್ಪ ಮಾಡಿ: ಗವಿಶ್ರೀ ಅಭಿಮತ

ನಾನು ದಸರಾ ಉದ್ಘಾಟಿಸುವಷ್ಟು ದೊಡ್ಡವನಲ್ಲ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಿ ಶಿಕ್ಷಣದ ಬೆಳವಣಿಗೆಯೇ ಸಮಾಜದ ಪ್ರಗತಿಗೆ ಭದ್ರ ಬುನಾದಿ
ನಾಡಿನ ಪ್ರಗತಿಗೆ ಪ್ರತಿಯೊಬ್ಬರು ಸಂಕಲ್ಪ ಮಾಡಿ:  ಗವಿಶ್ರೀ ಅಭಿಮತ
ಮೈಸೂರು ದಸರಾ ಉದ್ಘಾಟಿಸಿ ಮಾತನಾಡಿದ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ.Everyone should resolve to work for the progress of the land: Gavisri's view
Published on: 

ಮೈಸೂರು: ಕರುನಾಡಿನ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು ಎಂದು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕರೆಕೊಟ್ಟರು

ಬಸವಣ್ಣ, ಕನಕದಾಸರು, ಸಂಗೊಳ್ಳಿ ರಾಯಣ್ಣಯವರಂತೆ ಪ್ರತಿಯೊಬ್ಬರೂ ಅಸಾಧಾರಣ ವ್ಯಕ್ತಿಯಾಗಿ ರೂಪುಗೊಳ್ಳಬೇಕು. ಇದಕ್ಕಾಗಿ ದೊಡ್ಡ ಕೆಲಸವಲ್ಲ. ಸಣ್ಣ ಕೆಲಸವೇ ಸಾಕು.ಅದನ್ನು ನಿರ್ವಹಿಸಲು ಸಂಕಲ್ಪ ಮಾಡಬೇಕು. ಇದರಿಂದ ಇಡೀ ನಾಡು ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಹಣ್ಣು ಮಾರಾಟ ಮಾಡುತ್ತಲೇ ಶಾಲೆ ನಿರ್ಮಿಸಿ ಮಕ್ಕಳ ಶಿಕ್ಷಣಕ್ಕೆ ನೆರವಾದ ಹರೇಕಳ ಹಾಜಬ್ಬ ಅವರ ಸಾಧನೆಯನ್ನು ಸ್ಮರಿಸಿದ ಶ್ರೀಗಳು, ಅವರಿಂದ ಪ್ರೇರಣೆ ಪಡೆದು ಪ್ರತಿಯೊಬ್ಬರೂ ತಮ್ಮ ಊರಿನ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಶಿಕ್ಷಣದ ಬೆಳವಣಿಗೆಯೇ ಸಮಾಜದ ಪ್ರಗತಿಗೆ ಭದ್ರ ಬುನಾದಿಯಾಗಿದೆ ಎಂದೂ ಹೇಳಿದರು.

ಎಷ್ಟೇ ತಂತ್ರಜ್ಞಾನ ಬಂದರು ಊಟವನ್ನು ಡೌನ್‌ಲೋಡ್ ಮಾಡಲು ಆಗಲ್ಲ. ಊಟ ಬರಬೇಕಾದರೆ ರೈತರ ಬೆವರು ಭೂಮಿಗೆ ಇಳಿಯಬೇಕು. ಈ ನಾಡಿನ ಜಲಾಶಯಗಳು ಈ ನಾಡಿನ ಅನ್ನದ ತಟ್ಟೆಗಳು. ಜಲ ಮೂಲ ಹಾಳು ಮಾಡಬೇಡಿ. ಸರ್ಕಾರಗಳು ಈ ನಾಡಿನ ನೀರು, ಭೂಮಿ ರಕ್ಷಿಸಬೇಕು. ಮಣ್ಣು, ನೀರು, ಗಾಳಿ ಕೆಡಿಸಬಾರದು. ಮಣ್ಣು, ನೀರು, ಗಾಳಿ ಕೊಟ್ಟಿದ್ದು ಸರ್ಕಾರವಲ್ಲ. ನಮ್ಮ ಪ್ರಕೃತಿ ನಮಗೆ ಕೊಟ್ಟಿದ್ದು. ಜೀವಿಸುವ ಹಕ್ಕು ಎಲ್ಲರಿಗೂ ಇದೆ. ಕೆರೆಗಳ ಸಂರಕ್ಷಣೆ ಮಾಡಿ ಎಂದು ಕರೆಕೊಟ್ಟರು.

ಕರ್ನಾಟಕವು ರೈತರ, ಕಾರ್ಮಿಕರಿಂದ ಬೆವರಿನಿಂದ, ಹೋರಾಟಗಾರರು ತ್ಯಾಗದಿಂದ, ಕವಿಗಳು ಸಂತರಿಂದ ಕಟ್ಟಿದ ನಾಡು ಇದು. ಈ ನಾಡು ಯಾರೋ ಕಟ್ಟಿದ್ದಲ್ಲ, ನಾವೆಲ್ಲರೂ ಸೇರಿ ಕಟ್ಟಿ ಕೊಂಡಿದ್ದು. ಕತ್ತಲೆ ದೂರ ಮಾಡಲು ಕತ್ತಲೆಯೊಂದಿಗೆ ಗುದ್ದಾಡಬಾರದು. ದೀಪ ಹಚ್ಚಿದರೆ ಕತ್ತಲೆ ಮಾಯ ಆಗುತ್ತದೆ. ಇದೇ ತತ್ವವನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ಊರಿನ ಕೆರೆ ಕಟ್ಟೆ ರಕ್ಷಣೆ ಮಾಡಬೇಕು. ಸಾಲು ಮರದ ತಿಮ್ಮಕ್ಕನ ಇತಿಹಾಸ ಓದಿದರೆ ಸಾಲದು. ನಾವು ಒಂದು ಸಸಿ ನೆಡಬೇಕು. ತಾಯಂದಿರು ಕನ್ನಡ ಕಟ್ಟಬೇಕು. ತಾಯಂದಿರು ಮಗು ಮುಂದೆ ಒಂದು ವಚನ, ಒಂದು ಕವಿತೆ ಓದಿ. ಫೇಸ್‌ಬುಕ್ ನೋಡುವುದನ್ನು ತಾಯ್ತಂದೆ ಕಲಿಸಬೇಡಿ ಎಂದು ಕಿವಿಮಾತು ಹೇಳಿದರು.

ನಾನು ದಸರಾ ಉದ್ಘಾಟಿಸುವಷ್ಟು ದೊಡ್ಡವನಲ್ಲ. ಮಹಾನುಭಾವರು ಹಚ್ಚಿದ ದೀಪ ಆರದಿರಲಿ ಎಂಬ ಪ್ರಾರ್ಥನೆಯೊಂದಿಗೆ ಚಾಮುಂಡೇಶ್ವರಿಯ ಸನ್ನಿಧಿಗೆ ಬಂದಿದ್ದು, ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರ ಮುಖದಲ್ಲಿ ನಗು ಮೂಡಲಿ, ಜನರು ಸುಖ-ಶಾಂತಿಯಿಂದ ಬದುಕಲಿ ಎಂದು ತಾಯಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಮೈಸೂರಿನ ದಸರಾ ಭೂತ, ವರ್ತಮಾನ ಮತ್ತು ಭವಿಷ್ಯಗಳ ತ್ರಿವೇಣಿ ಸಂಗಮ. ಜಾತಿಯನ್ನು ನೋಡಿ ಸಮಾಜವನ್ನು ಕಟ್ಟುವುದಕ್ಕಿಂತ ನೀತಿ ಆಧಾರವಾಗಿಟ್ಟುಕೊಂಡು ಸಮಾಜವನ್ನು ನಿರ್ಮಿಸಬೇಕು. ಮನುಷ್ಯನನ್ನು ಮನುಷ್ಯನಂತೆ ಪ್ರೀತಿಸುವುದೇ ನಿಜವಾದ ಮಾನವ ಧರ್ಮ. ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬ ತತ್ವ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.

---------

ಹೊಸ ಸೇರ್ಪಡೆ

ಮೈಸೂರು ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಸ್ವಚ್ಛತೆ ಮತ್ತು ಶಿಸ್ತಿಗೆ ಹೆಸರಾದ ನಗರ. ಇಂತಹ ಐತಿಹಾಸಿಕ ನಗರದಲ್ಲಿ ನಡೆಯುವ ದಸರಾ ಮಹೋತ್ಸವದ ವೈಭವದ ಹಿಂದೆ ಸಾವಿರಾರು ಕಾಣದ ಕೈಗಳ ಪರಿಶ್ರಮವಿದೆ. ಒಂದು ಕಾಲದಲ್ಲಿ ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿ ಜನಸಾಮಾನ್ಯರ ಉತ್ಸವವಾಗಿದೆ ಎಂದು ಶ್ರೀಗಳು ಬಣ್ಣಿಸಿದರು.

ಮೈಸೂರು ರಾಜಮನೆತನದ ಕೊಡುಗೆಯನ್ನು ಸ್ಮರಿಸಿದ ಶ್ರೀಗಳು, ಮೈಸೂರು ದಸರಾ ಪರಂಪರೆಯನ್ನು ರಾಜಮನೆತನದ ಇತಿಹಾಸದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಿದ ಹಾಗೂ ರೈತರ ಬದುಕು ಹಸನಾಗಲು ಹಲವು ಅಭಿವೃದ್ಧಿ ಕಾರ್ಯ ಕೈಗೊಂಡ ಮಹನೀಯರ ಕೊಡುಗೆ ನಾಡಿನ ಪ್ರಗತಿಗೆ ಮಹತ್ವದ್ದಾಗಿದೆ. ರಾಣಿ ಕೆಂಪರಾಜಮ್ಮ ಅವರು ತಮ್ಮ ಆಭರಣಗಳನ್ನು ಒತ್ತೆಯಿಟ್ಟು ಅಣೆಕಟ್ಟು ನಿರ್ಮಾಣಕ್ಕೆ ನೆರವು ನೀಡಿದ ತ್ಯಾಗದ ಪರಂಪರೆ ನಮಗೆಲ್ಲ ಪ್ರೇರಣೆಯಾಗಿದೆ ಎಂದರು.

ಮೈಸೂರು ದಸರಾ ಕೇವಲ ಉತ್ಸವವಲ್ಲ. ಅದು ನಾಡಿನ ಸಂಸ್ಕೃತಿ, ಪರಂಪರೆ, ಮಾನವೀಯತೆ ಮತ್ತು ಸಾಮರಸ್ಯದ ಸಂಕೇತ. ರೈತರ ಬದುಕು ಹಸನಾಗಬೇಕು, ಪರಿಸರ ಸಂರಕ್ಷಿಸಲ್ಪಡಬೇಕು, ಶಿಕ್ಷಣ ಎಲ್ಲರಿಗೂ ದೊರೆಯಬೇಕು ಹಾಗೂ ಸಮಾಜದಲ್ಲಿ ಪ್ರೀತಿ ಮತ್ತು ಸಹಬಾಳ್ವೆ ಬೆಳೆಯಬೇಕು ಎಂದೂ ಕರೆ ನೀಡಿದರು.

ಶಿವಕುಮಾರ ಸ್ವಾಮೀಜಿಗಳ ಸೇವೆ ಮಾದರಿ:

ಕನ್ನಡ ನಾಡಿನ ಜನರು ಸಾಧುಸಂತರಿಗೆ ಗೌರವ ನೀಡುವವರು, ವೀರರಿಗೆ ವೀರರಾಗಿರುವವರು ಹಾಗೂ ಪ್ರೀತಿಗೆ ಪ್ರೀತಿಯಿಂದಲೇ ಪ್ರತಿಕ್ರಿಯಿಸುವವರು. ಹತ್ತು ಮಕ್ಕಳನ್ನು ಸಾಕುವುದೇ ಕಷ್ಟವಾಗಿದ್ದ ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹ ನೀಡಿದ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಕರ್ನಾಟಕವನ್ನು ರೈತರ ಬೆವರು, ಕಾರ್ಮಿಕರ ದುಡಿಮೆ, ವಿಜ್ಞಾನಿಗಳ ಜ್ಞಾನ ಮತ್ತು ಸಾಧುಸಂತರ ಪ್ರಾರ್ಥನೆಗಳು ರೂಪಿಸಿವೆ ಎಂದು ತಿಳಿಸಿದರು.

ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಶಿವರಾಜ ತಂಗಡಗಿ, ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಅಜಯ್ ಸಿಂಗ್, ರಿಜ್ವಾನ್ ಅರ್ಷದ್, ಪುಟ್ಟರಂಗಶೆಟ್ಟಿ, ಕೆ.ಎಸ್.ಬಸವಂತಪ್ಪ, ಶಾಸಕರಾದ ಜಿ.ಟಿ.ದೇವೇಗೌಡ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ಎ.ಆರ್.ಕೃಷ್ಣಮೂರ್ತಿ, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ಸಂಸದ ಸುನಿಲ್ ಬೋಸ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net