ದೇಶಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

ಶಾಸಕ ಕೆ.ವೆಂಕಟೇಶ್ ಅಭಿಮತ
ಪಿರಿಯಾಪಟ್ಟಣ ತಾಲೂಕಿನ ರಾವಂದೂರಿನಲ್ಲಿ ಪ್ರಥಮ ವರ್ಷದ  ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಾಸಕ ಕೆ. ವೆಂಕಟೇಶ್ ಹಾಗೂ ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಉದ್ಘಾಟಿಸಿದರು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರಿನಲ್ಲಿ ಪ್ರಥಮ ವರ್ಷದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಾಸಕ ಕೆ. ವೆಂಕಟೇಶ್ ಹಾಗೂ ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಉದ್ಘಾಟಿಸಿದರು.
Published on: 

ರಾವಂದೂರು: ವಿಶ್ವಕರ್ಮ ಈ ಜಗತ್ತಿನ ಏಕೈಕ ಸೃಷ್ಟಿಕರ್ತ. ಅವರಿಲ್ಲದಿದ್ದರೆ ಈ ದೇಶ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇಶಕ್ಕೆ ಪಂಚ ಕಸುಬುಗಳಲ್ಲಿ ಪರಿಣತಿ ಹೊಂದಿದ ವಿಶ್ವಕರ್ಮರ ಕೊಡುಗೆ ಅಪಾರ ಎಂದು ಶಾಸಕ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದ ರಾಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಹೋಬಳಿಮಟ್ಟದ ಪ್ರಥಮ ವರ್ಷದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶ-ವಿದೇಶಗಳಲ್ಲಿ ಆಕರ್ಷಿಸುವಂತಹ ಗುಡಿ ಗೋಪುರಗಳು, ಚರ್ಚ್‌ಗಳು, ಮಸೀದಿಗಳು, ಅರಮನೆಗಳ ನಿರ್ಮಾಣ ಹಾಗೆಯೇ ರಾಜ ಮಹಾರಾಜರು ಬಳಸುತ್ತಿದ್ದ ವಿಮಾನಗಳ ನಿರ್ಮಾತೃ ಕೂಡ ವಿಶ್ವಕರ್ಮನಾಗಿದ್ದಾನೆ. ಇಡೀ ದೇಶಕ್ಕೆ ಬೆನ್ನೆಲುಬಾಗಿರುವ ರೈತರಿಗೆ ಅವಶ್ಯಕತೆಯ ಪರಿಕರಗಳನ್ನು ಪಂಚಕಸುಬುಗಳ ಮುಖಾಂತರ ಮಾಡಿಕೊಡುವ ವಿಶ್ವಕರ್ಮ ಬುದ್ಧಿವಂತಿಕೆ ಮತ್ತು ಕೃತಜ್ಞತೆಯುಳ್ಳ ಸಾಕಾರಮೂರ್ತಿಯಾಗಿದ್ದಾನೆ. ಆದ್ದರಿಂದ ನಾವು ಕೂಡ ಸಮಾಜಕ್ಕೆ ಗೌರವ ಕೊಟ್ಟು ಅವರ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದ್ದೇನೆ ಎಂದರು.

ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ನಮ್ಮ ದೇಶವು ರಾಜ ಮಹಾರಾಜರ ಕಾಲದಿಂದಲೂ ಕಲೆ ಮತ್ತು ಸಾಂಸ್ಕೃತಿಕತೆ ತನ್ನದೆ ಆದ ಕೊಡುಗೆ ನೀಡಿದೆ. ನಾಡು ಕಂಡ ಸರ್ ಎಂ.ವಿಶ್ವೇಶ್ವರಯ್ಯ ಅವರು ಬುದ್ಧಿವಂತಿಕೆ ಮೂಲಕ ತಮ್ಮದೇ ಆದ ಕೊಡುಗೆಯನ್ನು ರಾಷ್ಟ್ರ ಹಾಗೂ ದೇಶಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.

ಸಮುದಾಯದ ಹಿರಿಯ ಮುಖಂಡ ಹಿರಣ್ಣಯ್ಯ ಮಾತನಾಡಿ, ನಮ್ಮ ಸಮಾಜವು ತೀರ ಹಿಂದುಳಿದ ವರ್ಗವಾಗಿದ್ದು ರಾಜಕೀಯ ಹಾಗೂ ಶೈಕ್ಷಣಿಕವಾಗಿ ನಮ್ಮ ಜನಾಂಗಕ್ಕೆ ಸೂಕ್ತ ಸ್ಥಾನಮಾನ ಇದುವರೆಗೂ ದೊರೆತಿಲ್ಲ. ವಿಶ್ವಕರ್ಮ ನಿಗಮ ಮಂಡಳಿ ಪ್ರತಿ ವರ್ಷ ವಿವಿಧ ಸಾಲ ಸೌಲಭ್ಯಗಳನ್ನು ನೀಡಲು ಮುಂದಾದರೂ ಕಡಿಮೆ ಅನುದಾನದಿಂದ ಕೆಲವರಿಗೆ ಮಾತ್ರ ಅವಕಾಶ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಶಾಸಕರು ಸದನದಲ್ಲಿ ವಿಶ್ವಕರ್ಮ ನಿಗಮ ಮಂಡಳಿಗೆ ಅತಿ ಹೆಚ್ಚು ಅನುದಾನ ನೀಡುವಂತೆ ಧ್ವನಿ ಎತ್ತಬೇಕೆಂದು ಶಾಸಕರಲ್ಲಿ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕಾಳಿಕಾಂಬ ವಿಶ್ವಕರ್ಮ ಸೇವಾ ಸಮಾಜ ಸಂಘವನ್ನು ಗಣ್ಯರು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಮಂಜಾ ಚಾರ್, ಮುಖಂಡರಾದ ತಿರು ನೀಲಕಂಠ, ಕುಮಾರ್, ವಿಜಯ್, ಗ್ರಾಪಂ ಮಾಜಿ ಅಧ್ಯಕ್ಷ ಆರ್.ಎಸ್.ವಿಜಯಕುಮಾರ್, ಆರ್.ವಿ. ವಿಶ್ವನಾಥ್, ಡಿ.ಎನ್.ನಂದೀಶ್, ಚಂದ್ರೇಗೌಡ, ಲೋಪಾಲಯ್ಯ, ಸೈನಿಕ ಶಿವು, ಪಾರುಪತ್ತೆಗಾರ ದಿನೇಶ್, ಶಿವಪ್ರಸಾದ್, ಆರ್.ಸಿ. ವಿನಯ್, ಬಸವಣ್ಣ ಸಂಘದ ಗೌರವಾಧ್ಯಕ್ಷ ಮುರುಗೇಂದ್ರ ಆಚಾರ್, ಉಪಾಧ್ಯಕ್ಷ ಭಾಸ್ಕರಾಚಾರ್ಯ, ಪ್ರಧಾನ ಕಾರ್ಯದರ್ಶಿ ಎಸ್.ಸಿ.ದಿವಾಕರ, ಖಜಾಂಚಿ ಸಂಜಯ್‌ಕುಮಾರ್ ಹಾಗೂ ನಿರ್ದೇಶಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net