ದಸರೆಗೆ ಹೊಸ ತಲೆಮಾರಿನ ಜೆನ್ ಜೀಗಳು ಫಿದಾ !

ಏರ್ ಶೋ, ಡ್ರೋನ್ ಶೋ, ಕಂಬಳ ಕ್ರೀಡೆಗೆ ಜೈ ಎಂದ ಯುವ ಸಮೂಹ ಕಳೆಗುಂದಿದ ಸಾಂಪ್ರದಾಯಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೆರವೇರಿದ ಜಂಬೂ ಸವಾರಿ
ದಸರೆಗೆ ಹೊಸ ತಲೆಮಾರಿನ ಜೆನ್ ಜೀಗಳು ಫಿದಾ !
ಮೈಸೂರಿನಲ್ಲಿ ನಡೆದ ಜಂಬೂ ಸವಾರಿ Gen Z captivated by Dasara!
Published on: 

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ದಸರಾದ ಸಾಂಪ್ರದಾಯಿಕ ಕಾರ್ಯಕ್ರಮಗಳು ತನ್ನ ಮೊನಚು ಕಳೆದುಕೊಳ್ಳುತ್ತಿವೆಯೇ...?

11 ದಿನಗಳ ಕಾಲ ಜನಸಾಗರವನ್ನು ಸೆಳೆದ ನಾಡಹಬ್ಬ ಮುಗಿದ ಬಳಿಕ ಇಂತಹವೊಂದು ಪ್ರಶ್ನೆ ಮೂಡಿದೆ. ಇವುಗಳ ಜಾಗದಲ್ಲಿ ಹೊಸ ಬಗೆಯ ಕಾರ್ಯಕ್ರಮಗಳು ವಿಜೃಂಭಿಸುತ್ತಿವೆ. ಸಾಂಪ್ರದಾಯಿಕ ಕಾರ್ಯಕ್ರಮಗಳ ಸತ್ವ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಿದೆ.

ಮಕ್ಕಳ ದಸರಾ, ಮಹಿಳಾ ದಸರಾ, ಪಾರಂಪರಿಕ ನಡಿಗೆ, ಕವಿಗೋಷ್ಠಿ, ರೈತ ದಸರಾ, ಯೋಗ ಚಾರಣದಲ್ಲಿ ಹಿಂದಿನ ಕಾಂತಿ ಈ ಸಲ ಕಾಣಲಿಲ್ಲ. ಮತ್ತೊಂದೆಡೆ, ಏರ್ ಶೋ, ಡ್ರೋನ್ ಶೋ, ಕಂಬಳ ಕ್ರೀಡೆ ಜನಸಮೂಹವನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ಜನರ ಸ್ಕೃತಿಪಟಲದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ. ಅದರಲ್ಲೂ ಹೊಸ ತಲೆಮಾರಿನ ಜೆನ್ ಜೀಗಳು ಫಿದಾ ಆಗಿದ್ದಾರೆ.

ಈ ಕಾರ್ಯಕ್ರಮಗಳ ದೃಶ್ಯಾವಳಿಗಳೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡುತ್ತಿವೆ. ಇದುವೇ ದಸರಾ ಕ್ರೇಜ್ ಹೆಚ್ಚಳಕ್ಕೆ ಕಾರಣವಾಯಿತು. ಜತೆಗೆ, ಇಂತಹ ಹೊಸಬಗೆಯ ಚಟುವಟಿಕೆಗಳಿಂದ ದಸರೆ ಪಥ ಬದಲಿಸುತ್ತಿರುವುದನ್ನೂ ಸಂಕೇತಿಸುತ್ತಿದೆ.

ದುಂದುವೆಚ್ಚ ಕಡಿವಾಣ ಹಾಕಿಲ್ಲ:

ಬರಗಾಲದ ಸಂದರ್ಭದಲ್ಲಿ ದುಂದುವೆಚ್ಚ ಕಡಿವಾಣ ಹಾಕಿಲ್ಲ. 11 ದಿನಗಳ ನಾಡಹಬ್ಬಕ್ಕಾಗಿ ಅಂದಾಜು 50 ಕೋಟಿ ರೂ. ನೀರಿನಂತೆ ವ್ಯಯ ಮಾಡಲಾಗಿದೆ. ಕಾರ್ಯಕ್ರಮಗಳನ್ನು ಇವೆಂಟ್ ಮ್ಯಾನೇಜ್‌ಮೆಂಟ್‌ಗೆ ವಹಿಸಿ ಅಧಿಕಾರಿಗಳು ಕೈತೊಳೆದುಕೊಂಡರು. ಜನರ ಸಹಭಾಗಿತ್ವ ಕಡಿಮೆಯಾಗಿ ಅಧಿಕಾರಗಳ ದರ್ಬಾರ್ ರಾರಾಜಿಸಿತು. ಕೊನೇ ಘಳಿಗೆಯಲ್ಲಿ ತರಾತುರಿ ಸಿದ್ಧತೆ ಈ ಸಲವೂ ತಪ್ಪಲಿಲ್ಲ. ಪ್ರಚಾರದ ಕೊರತೆಯಿಂದ ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಆಗಲಿಲ್ಲ.

ಈ ಬಾರಿ ಮಹಿಳಾ ಮತ್ತು ಮಕ್ಕಳ ದಸರಾ ಬಹಳ ಪೇಲವ ಎನಿಸಿದವು. ಹೊಸತನ, ವಿಭಿನ್ನತೆ ಇಲ್ಲದೆ ಹಿಂದಿನ ವರ್ಷದಂತೆ ಈ ಬಾರಿಯೂ ನಡೆದುಹೋಯಿತು. ಮಹಿಳಾ ದಸರಾವು ಅದೇ ನೃತ್ಯ, ನಾಟಕ, ಹಾಸ್ಯ, ಫ್ಯಾಷನ್ ಶೋ, ಸಾಂಸ್ಕೃತಿಕ ಕಾರ್ಯಕ್ರಮದಲ್ಲೇ ಕಳೆದು ಹೋಯಿತು. ಮಕ್ಕಳ ದಸರಾ ಕೂಡ ಇದಕ್ಕೆ ಭಿನ್ನವಾಗಿರಲಿಲ್ಲ.

ರೈತ ದಸರಾದಲ್ಲೂ ತಾಜಾತನ ಇರಲಿಲ್ಲ. ಅದೇ ಜಾನುವಾರಗಳ ಮೆರವಣಿಗೆ, ಸಭಾಕಾರ್ಯಕ್ರಮ ಈ ಸಲವೂ ಪುನರುಚ್ಚರಣೆಯಾಯಿತು. ಹಿಂದಿನ ಸಲ ಕೃಷಿ ವಸ್ತುಪ್ರದರ್ಶನದಲ್ಲಿ ಯಾವ್ಯಾವ ಮಳಿಗೆಗಳಲ್ಲಿ ಆಯಾಯ ಇಲಾಖೆ, ವಿಶ್ವವಿದ್ಯಾಲಯಗಳಿದ್ದವೋ ಅವುಗಳು ಈ ಸಲವೂ ಗೋಚರವಾದವು.

ಸಿದ್ಧಾರ್ಥನಗರದ ಕಾವಾ ಕಾಲೇಜಿನಲ್ಲಿ ಆಯೋಜಿಸಿದ್ದ ಲಲಿತಕಲೆ, ಕರಕುಶಲಕ್ಕೆ ಸಂಬಂಧಿಸಿದ ಕಲಾಮೇಳ, ಕಲಾಜಾತ್ರೆ ಜನಸಾಮಾನ್ಯರನ್ನು ಆಕರ್ಷಿಸಲಿಲ್ಲ. ಬರೀ ಆ ಕ್ಷೇತ್ರದವರು ಮಾತ್ರ ಭಾಗಿಯಾದರು. ಉತ್ತಮ ಕಾರ್ಯಕ್ರಮವೊಂದು ಜನಸಮೂಹದಿಂದ ದೂರವಾಗಿಯೇ ಉಳಿದುಬಿಟ್ಟಿತ್ತು. ನಂಜರಾಜ ಬಹಾಹದೂರ್ ಛತ್ರದ ಬಳಿ ಹಿಂದೆ ನಡೆದಿದ್ದ ಕಲಾಜಾತ್ರೆ ಜನಾಕರ್ಷಿಸಿತ್ತು. ಗಂಗೋತ್ರಿಯಲ್ಲಿ ಆಯೋಜಿಸಿದ್ದ ಚಿತ್ರಕಲಾಸಂತೆ ದಸರಾಕ್ಕೂ ಮುನ್ನ ಬೇಗನೇ ಮಾಡಿ ಮುಗಿಸಲಾಯಿತು. ಪ್ರಚಾರದ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಜನರೂ ಸೇರಲಿಲ್ಲ.

ಮರೆಯಾದ ನವ್ಯತೆ- ಮಾನ್ಯತೆ:

ದಸರಾ ಮುನ್ನ ಆಯೋಜಿಸಿದ್ದ ‘ಯುವ ಸಂಭ್ರಮ’ದಲ್ಲಿ ವಿವಿಧ ಕಾಲೇಜುಗಳ ತಂಡಗಳ ಪ್ರದರ್ಶನದಲ್ಲಿ ಗುಣಮಟ್ಟ ಇರಲಿಲ್ಲ. ಬರೀ ಅಬ್ಬರ ಸಂಗೀತ, ನೃತ್ಯವೇ ರಾರಾಜಿಸಿತು. ಹೆಚ್ಚಿನ ಮಹತ್ವ ಇರುವ ದಸರಾ ಕವಿಗೋಷ್ಠಿಯನ್ನು ಎಲ್ಲರಿಗೂ ಅವಕಾಶ ಕಲ್ಪಿಸುವ ಸಲುವಾಗಿ 5 ದಿನ ವಿಸ್ತರಣೆ ಮಾಡಿ ಅದರ ಮಹತ್ವ ಕಳೆಯುವಂತೆ ಮಾಡಿತು. ಪಾರಂಪರಿಕ ನಡಿಗೆ, ಪಾರಂಪರಿಕ ಸೈಕಲ್ ಸವಾರಿ, ಪಾರಂಪರಿಕ ಉಡುಗೆಯಲ್ಲಿ ದಂಪತಿಗಳ ಪಾರಂಪರಿಕ ಟಾಂಗಾ ಸವಾರಿಯಲ್ಲೂ ನವ್ಯತೆ ಇರಲಿಲ್ಲ.

ದಸರಾದಲ್ಲಿ ಪ್ರಮುಖ ಸಾಂಸ್ಕೃತಿಕ ವೇದಿಕೆಯಾಗಿರುವ ಅರಮನೆ ಆವರಣದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿಗಬೇಕಾದ ಮಹತ್ವ, ಮಾನ್ಯತೆ ಕೊಡಲಿಲ್ಲ. ಶಾಸ್ತ್ರೀಯ ಸಂಗೀತ, ನೃತ್ಯ, ವಾದನಕ್ಕಿಂತ ಫ್ಯೂಷನ್‌ನಂತಹ ಅನ್ಯ ಪ್ರಕಾರಕ್ಕೆ ಈ ಸಲ ಆದ್ಯತೆ ಕೊಡಲಾಯಿತು. ಬಾಲಿವುಡ್‌ನ ಶ್ಯಾನ್, ರಘುದೀಕ್ಷಿತ್‌ನಂತಹ ಸಿನಿಮಾರಂಗದವರಿಗೆ ಅವಕಾಶ ಕಲ್ಪಿಸಿಕೊಡಲಾಯಿತು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ಸಂಗೀತಗಾರರನ್ನು ಕರೆಸಲಿಲ್ಲ.

ಮನಗೆದ್ದ ಡಾಗ್ ಶೋ:

ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ ಚೇತೋಹಾರಿ ಎನಿಸಿತು. ಮಳೆಯಿಂದ ಕೆಸರುಮಯವಾಗಿದ್ದ ಜೆ.ಕೆ.ಮೈದಾನದಲ್ಲಿ ಅವ್ಯವಸ್ಥೆ ಪ್ರಾಣಿಪ್ರಿಯರು, ಸಾರ್ವಜನಿಕರಿಗೆ ಬೇಸರ ತರಿಸಿತು. ಮಳೆ ಬಂದರೆ ಪ್ರತಿ ವರ್ಷವಾಗುವ ಅವಾಂತರವಾಗುತ್ತದೆ. ಆದರೆ, ಸ್ಥಳ ಬದಲಾವಣೆಗೆ ಜಿಲ್ಲಾಡಳಿತ ಮನಸ್ಸು ಮಾಡುತ್ತಿಲ್ಲ.

ದಸರೆಗೆ ಹೊಸ ಕಳೆ ತಂದ ಕಂಬಳ:

ದಸರಾದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ತುಳುನಾಡಿನ ಕಂಬಳ ಮೈಸೂರಿನವರ ಮನಗೆದ್ದಿತು. ಕರಾವಳಿ ಕ್ರೀಡೆ ಆಯೋಜನೆಗೆ ಉಂಟಾಗಿದ್ದ ವಿರೋಧವೂ ಠುಸ್ ಪಟಾಕಿಯಾಯಿತು. ಎರಡು ದಿನವೂ ಸಹಸ್ರಾರು ಜನರು ಇಲ್ಲಿಗೆ ಭೇಟಿ ನೀಡಿ ಕಂಬಳದ ಕೋಣಗಳ ರೋಚಕತೆಯನ್ನು ಕಣ್ತುಂಬಿಕೊಂಡರು. ಇದು ದಸರೆಗೆ ಹೊಸ ಚೈತನ್ಯ ತುಂಬಿತು.

ಏರ್ ಶೋಗೂ ಫಿದಾ:

ವಾಯಪಡೆಯ ಸೂರ್ಯಕಿರಣ ತಂಡದ 9 ವಿಮಾನಗಳ ಕೇವಲ ಅರ್ಧಗಂಟೆಯ ವೈಮಾನಿಕ ಪ್ರದರ್ಶನ ಸಹ ಜನಸಮೂಹವನ್ನು ಮನಸೂರೆಗೊಳಿಸಿತು. ಎರಡು ದಿನವೂ ಬನ್ನಿಮಂಟಪದ ಮೈದಾನ ತುಂಬಿ ಹೋಗಿ, ಹೊರ ಭಾಗದಲ್ಲೇ ಹೆಚ್ಚಿನ ಜನಸಾಗರ ನೆರೆದಿದ್ದು ಇದರ ಜನಪ್ರಿಯತೆಗೆ ಸಾಕ್ಷಿ. ‘ಸಾರಂಗ’ ಹೆಲಿಕಾಪ್ಟರ್‌ಗಳ ವೈಮಾನಿಕ ಪ್ರದರ್ಶನ, ಯೋಧರ ಸಾಹಸ ಕಸರತ್ತು ಸಹ ಇದ್ದಿದ್ದರೆ ಇನ್ನಷ್ಟು ರೋಚಕತೆ ದೊರೆಯುತ್ತಿತ್ತು.

ಜನ ಮೆಚ್ಚಿದ ಡ್ರೋನ್ ಶೋ;

ಸೆಸ್ಕ್ ವತಿಯಿಂದ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ 4 ದಿನ ಆಯೋಜಿಸಿದ್ದ ಡ್ರೋನ್ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಆಗಸದಲ್ಲಿ ವಿವಿಧ ವಿನ್ಯಾಸಗಳ ಚಿತ್ತಾರ ಮೂಡಿಸಿದ ಇದು ಕಳೆದ ಎರಡ್ಮೂರು ವರ್ಷದಿಂದ ದಸರೆಗೆ ಹೊಸ ರೂಪಕೊಟ್ಟಿದೆ.

ಶಿಸ್ತುಬದ್ಧ ಜಂಬೂ ಸವಾರಿ:

ಜಂಬೂ ಸವಾರಿ ಈ ಸಲ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನಡೆಯಿತು. ಸ್ತಬ್ಧಚಿತ್ರಗಳು, ಕಲಾತಂಡಗಳು ಸಾಗುವ ರಾಜಪಥದಲ್ಲಿ ಅನಗತ್ಯ ವ್ಯಕ್ತಿಗಳು, ಉಪಸಮಿತಿಯ ಸದಸ್ಯರು, ಅಧಿಕಾರಿಗಳ ಓಡಾಟದ ಕಿರಿಕಿರಿ ತಪ್ಪಿಸಿದ್ದು ಮೆರವಣಿಗೆ ಸುಸೂತ್ರವಾಗಿ ವೀಕ್ಷಿಸಲು ಅನುವಾಯಿತು. ಅಗತ್ಯಕ್ಕಿಂತ ಹೆಚ್ಚು ಪಾಸ್ ವಿತರಣೆ ಮಾಡಿ ಜಿಲ್ಲಾಡಳಿತ ಪಜೀತಿಗೆ ಸಿಲುಕಿಕೊಂಡು ಒದ್ದಾಡಿತು. ಗೋಲ್ಡ್ ಕಾರ್ಡ್, ದುಡ್ಡುಕೊಟ್ಟು ಟಿಕೆಟ್ ಪಡೆದವರನ್ನೂ ಅರಮನೆ ಒಳಗೆ ಬಿಡಲಿಲ್ಲ. ಪೊಲೀಸರ ದರ್ಪ ಎಲೆ ಮೀರಿತ್ತು. ಭದ್ರತೆ ನೆಪದಲ್ಲಿ ಸಾರ್ವಜನಿಕರಿಗೆ ಇನ್ನಿಲ್ಲದಂತೆ ತೊಂದರೆ ಕೊಟ್ಟರು.

ಜೀವ ತುಂಬಿದ ಹೊಸತನ:

ಕೆಲ ವಿಶೇಷತೆಗಳು ದಸರೆಗೆ ಹೊಸತನ ತಂದುಕೊಟ್ಟಿತು. ಜಂಬಸವಾರಿಯಲ್ಲಿ ಹೊರರಾಜ್ಯಗಳ ಸ್ತಬ್ಧಚಿತ್ರಗಳು, ಭಾರತೀಯ ರಕ್ಷಣಾ ಪಡೆಗಳ ಭಾಗಿ, ಕೇಂದ್ರ ಸರ್ಕಾರದ ಸಾರ್ವಜನಿಕ ಕಂಪನಿಗಳು, ತೆಲಂಗಾಣ, ಕೇರಳದ ಸಿಎಂಗಳ, ಸಿನಿ ತಾರೆಯರು, ಕ್ರೀಡಾ ಸಾಧಕರು ಭಾಗಿಯಾಗಿ ಮೆಗುರು ತುಂಬಿದರು. ವಿದೇಶ ರಾಯಭಾರಿಗಳನ್ನು ಆಹ್ವಾನಿಸಿ ನಾಡಿನ ಸಂಸ್ಕೃತಿ ಪರಿಚಯಿಸಿಕೊಡಲಾಯಿತು.

ಯುವ ದಸರಾ ಬಲು ದುಬಾರಿ:

5 ದಿನಗಳ ಯುವ ದಸರಾಕ್ಕೆ 13 ಕೋಟಿ ರೂ. ಖರ್ಚು ಮಾಡಿದ್ದು ಬಲು ದುಬಾರಿ ಎನಿಸಿತು. ಮಳೆ ಕಾಟಕ್ಕೆ ಯುವ ದಸರಾ ಸರಿಯಾಗಿ ನಡೆಸಲು ಆಗಲಿಲ್ಲ. ತ್ರಿಮೂರ್ತಿ ಸಂಗೀತಗಾರರಾದ ಶಂಕರ್-ಎಹಸಾನ್-ಲಾಯ್, ದುರಂಧರ್ ಸಿನಿಮಾದ ಬೆಡಗಿ ಜಾಸ್ಮಿನ್ ಸ್ಯಾಂಡ್ಲಾಸ್ ರಸಸಂಜೆ ಕಾರ್ಯಕ್ರಮ ಈ ಸಲದ ಹೈಲೈಟ್ಸ್. ಉಳಿದ ಸಂಗೀತ ಕಾರ್ಯಕ್ರಮಗಳು ಅಷ್ಟಕ್ಕೆ ಅಷ್ಟೇ.!

ಜೀವಕಳೆ ತುಂಬಿದ ಫುಡ್ ಮೇಳ, ಫ್ಲವರ್ ಶೋ:

ಎವರ್ ಗ್ರೀನ್‌ನಾಗಿರುವ ಆಹಾರ ಮೇಳ, ಫಲಪುಷ್ಪ ಪ್ರದರ್ಶನದಿಂದ ದಸರೆಗೆ ಈ ಸಲವೂ ನವೋಲ್ಲಾಸ, ಜೀವಕಳೆ ದೊರೆಯಿತು. 11 ದಿನವೂ ಸೇರಿದ್ದ ಜನಸಾಗರ ನೆಚ್ಚಿನ ಖಾದ್ಯ ಸೇವನೆ ಮಾಡಿ ಸಂಭ್ರಮಿಸಿತು. ನಾಡಹಬ್ಬಕ್ಕೆ ಬಂದವರು ಇಲ್ಲಿಗೆ ಒಮ್ಮೆ ಭೇಟಿಕೊಟ್ಟು ಹೋಗಿದ್ದು ವಿಶೇಷ. ಫಲಪುಷ್ಪ ಪ್ರದರ್ಶನವು ದಸರೆಗೆ ಹೂವಿನ ಪರಿಮಳ ಬೀರುವಂತೆ ಮಾಡಿತು. ಅರಮನೆ ನಗರಿ ಹೊಳಪಿನ ಗರಿ ಮೂಡಿಸಿತು ಬೆಳಕಿನ ಅಲಂಕಾರ. ದೀಪಾಲಂಕಾರ ಮೆರುಗು ಕೊಟ್ಟು, ವಿವಿಧ ಊರುಗಳ ಜನರನ್ನೂ ಸೆಳೆಯಿತು. ಈ ಮೂರು ಕಾರ್ಯಕ್ರಮಗಳು ಪ್ರತಿ ಸಲದಂತೆ ನಾಡಹಬ್ಬಕ್ಕೆ ಚೈತನ್ಯ ತುಂಬಿ ಮಿನುಗುವಂತೆ ಮಾಡಿತು.

22 ಎಂವೈಎಸ್ 3

ಜಂಬೂ ಸವಾರಿ ಮೆರವಗೆ.

22 ಎಂವೈಎಸ್ 4

ಮಳೆಯಲ್ಲಿ ಯುವ ದಸರಾ ವೀಕ್ಷಣೆ ಮಾಡಿದ ಪ್ರೇಕ್ಷಕರು.

22 ಎಂವೈಎಸ್ 5

ದಸರಾದಲ್ಲಿ ಮೊದಲ ಬಾರಿಗೆ ನಡೆದ ಕಂಬಳ ಕ್ರೀಡೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net