ದಸರೆಗೆ ಏಕೆ ಇಲ್ಲ ಎಸ್‌ಒಪಿ?

ಅವ್ಯವಸ್ಥೆ, ಗೊಂದಲ ತಡೆಗೆ ನಿರ್ದಿಷ್ಟ ಕಾರ್ಯಸೂಚಿ ರಚಿಸಿ ನಾಡಹಬ್ಬದ ಆರಂಭದಿಂದ ಅಂತ್ಯದ ವರೆಗೂ ಸ್ಪಷ್ಟ ಕೈಪಿಡಿಯಲ್ಲಿ ಇರಲಿ
ದಸರೆಗೆ ಏಕೆ ಇಲ್ಲ ಎಸ್‌ಒಪಿ?
ಮೈಸೂರಿನಲ್ಲಿ ನಡೆದ ಜಂಬೂ ಸವಾರಿ ಮೆರವಣಿಗೆWhy is there no SOP for Dasara?
Published on: 

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಲಕ್ಷಾಂತರ ಜನರು ಸೇರುವ, ಕೋಟ್ಯಂತರ ರೂ. ಸರ್ಕಾರಿ ಹಣವನ್ನು ನೀರಿನಂತೆ ಖರ್ಚು ಮಾಡುವ ಮೈಸೂರು ದಸರಾ ಮಹೋತ್ಸವಕ್ಕೆ ನಿರ್ದಿಷ್ಟವಾದ ‘ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್‌ಒಪಿ) ಏಕಿಲ್ಲ...?

ಈ ಕಾರಣಕ್ಕೆ ಗೊಂದಲ, ಗದ್ದಲ, ಅವ್ಯವಸ್ಥೆ, ಸಮಸ್ಯೆಗಳು ಪ್ರತಿ ವರ್ಷವೂ ರಾರಾಜಿಸುತ್ತಿವೆ. ಹೀಗಾಗಿ, ಈಗಲಾದರೂ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ.

ಯಾವುದೇ ಕೆಲಸವನ್ನು ಪ್ರತಿಯೊಬ್ಬರೂ ಪ್ರತಿ ಬಾರಿಯೂ ಒಂದೇ ರೀತಿಯಾಗಿ, ದೋಷವಿಲ್ಲದೆ ಮತ್ತು ಸುರಕ್ಷಿತವಾಗಿ ಮಾಡಲು ಎಸ್‌ಒಪಿ ಅಗತ್ಯ. ನಿರ್ದಿಷ್ಟ ಕೆಲಸವನ್ನು ಹಂತ ಹಂತವಾಗಿ ಹೇಗೆ ಮಾಡಬೇಕು ಎಂದು ಬರೆದಿಡಲಾದ ವಿವರವಾದ ಸೂಚನೆಗಳ ಕೈಪಿಡಿ ಇದು. ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆಯುವ ಪ್ರಕ್ರಿಯೆ, ರೆಸ್ಟೋರೆಂಟ್‌ನಲ್ಲಿ ಪಿಜ್ಜಾ ತಯಾರಿಸುವ ಹಂತಗಳೆಲ್ಲ ಎಸ್‌ಒಪಿ ವಿಧಾನಕ್ಕೆ ಒಳಪಟ್ಟಿವೆ. ಆದರೆ, ಶತಮಾನಗಳಿಂದ ನಡೆದುಕೊಂಡಿರುವ ನಾಡಹಬ್ಬಕ್ಕೆ ಈ ರೀತಿಯ ಎಸ್‌ಒಪಿ ಏಕೆ ಮಾಡಲಿಲ್ಲ ಎಂಬುದೇ ಆಶ್ಚರ್ಯ.

ಜಂಬೂ ಸವಾರಿ ಮುನ್ನ ನಡೆದ ನಂದಿಧ್ವಜ ಪೂಜೆ ಸಂದರ್ಭದಲ್ಲಿ ಸಚಿವರಾದ ಶಿವರಾಜ ಎಸ್.ತಂಗಡಗಿ, ಕೆ.ಎಸ್.ಬಸವಂತಪ್ಪ, ಪಿ.ಎಂ.ನರೇಂದ್ರಸ್ವಾಮಿ ತಡೆದ ವಿಚಾರ ಹೆಚ್ಚು ಸದ್ದು ಮಾಡುತ್ತಿದ್ದು, ತೀವ್ರ ಮುಜುಗರಕ್ಕೆ ಒಳಗಾಗಿರುವ ರಾಜ್ಯ ಸರ್ಕಾರವು ಬಿಸಿ ತುಪ್ಪವಾಗಿರುವ ಈ ವಿಚಾರವನ್ನು ಸಮರ್ಥಸಿಕೊಳ್ಳಲು ಆಗದೆ, ಖಂಡಿಸಲು ಆಗದ ಸ್ಥಿತಿಯಲ್ಲಿ ಹೊಯ್ದಡುತ್ತಿದೆ. ಆದರೆ, ಪ್ರತಿ ವರ್ಷ ಇಂತಹ ಅನೇಕ ಘಟನೆಗಳು ಮರುಕಳಿಸುತ್ತಿವೆ.

ದಸರಾದ ಯಾವ ಹಂತದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಯಾವ ವಿಧಾನ ಅನುಸರಿಸಬೇಕು? ಯಾವುದನ್ನು ಕೈಬಿಡಬೇಕು ಎಂಬ ನಿರ್ದಿಷ್ಟ ಶಿಷ್ಟಾಚಾರವೇ ಇಲ್ಲ. ದಸರಾ ಉದ್ಘಾಟನೆಯಿಂದ ಹಿಡಿದು ಜಂಬೂ ಸವಾರಿ, ಪಂಜಿನ ಕವಾಯತು ಕಾರ್ಯಕ್ರಮದ ವರೆಗೂ ಹೇಗೆ ಆಯೋಜಿಸಬೇಕೆಂಬ ಕೈಪಿಡಿಯೇ ಇಲ್ಲ.

ಯಾವುದೇ ಪಕ್ಷದ ಸರ್ಕಾರ ಬಂದಾಗಲೂ ಇಷ್ಟ ಬಂದಂತೆ ಬದಲಾವಣೆ ಮಾಡಿಕೊಳ್ಳಲಾಗುತ್ತದೆ. ಜಿಲ್ಲಾ ಹಂತದಲ್ಲೂ ಜಿಲ್ಲಾಧಿಕಾರಿ, ಜಿಪಂ ಸಿಇಒ, ನಗರ ಪೊಲೀಸ್ ಆಯುಕ್ತರು ಸಹ ಅವರಿಗೆ ಅನಿಸಿದಂತೆ ವರ್ತಿಸುತ್ತಾರೆ. ಹೀಗಾಗಿ, ಗೊಂದಲ, ಅವ್ಯವಸ್ಥೆ, ಸಮಸ್ಯೆಗಳು, ಗಲಾಟೆಗಳು ಆಗುತ್ತಿವೆ. ಇದರ ವ್ಯತರೀಕ್ತ ಪರಿಣಾಮ ದಸರಾದ ಮೇಲೆ ನೇರವಾಗಿ ಬೀರುತ್ತಿದೆ.

ರಾಜಕೀಯ ದರ್ಬಾರ್‌ಗೆ ಅನುಕೂಲ:

ಆಯಾ ಕಾಲಘಟ್ಟ ಅಧಿಕಾರದಲ್ಲಿರುವ ಪಕ್ಷಗಳು ದಸರಾವನ್ನು ತಮಗೆ ಹೇಗೆ ಬೇಕೋ ಆಗೆ ತಿರುಚಿವೆ, ಇಲ್ಲವೇ ಬದಲಿಸಿಕೊಂಡಿವೆ. ರಾಜಕಾರಣಿಗಳು ಮೆರೆಯಲು, ತಮ್ಮ ದರ್ಬಾರ್‌ಗೆ ಅನುಕೂಲವಾಗಲು, ತಮ್ಮ ಪ್ರಚಾರದ ವೇದಿಕೆಯಾಗಿಯೂ ನಾಡಹಬ್ಬ ಇತ್ತೀಚಿನ ದಶಕಗಳಲ್ಲಿ ಹೆಚ್ಚು ದುರ್ಬಳಕೆಯಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಎಸ್‌ಒಪಿ ಅಗತ್ಯವಾಗಿದೆ.

ಉದ್ಘಾಟಕರ ಆಯ್ಕೆಯಲ್ಲೂ ರಾಜಕೀಯ:

ದಸರಾ ಉದ್ಘಾಟಕರ ಆಯ್ಕೆಯಲ್ಲೂ ರಾಜಕೀಯ ಲೆಕ್ಕಾಚಾರ ಎದ್ದುಕಾಣುತ್ತಿದೆ. ಅಧಿಕಾರದಲ್ಲಿರುವ ಪಕ್ಷಗಳು, ತಮ್ಮ ಸಿದ್ಧಾಂತ, ಪಾರ್ಟಿಯ ಪರ ಇರುವ ಗಣ್ಯರನ್ನು ಆಯ್ಕೆ ಮಾಡಿರುವ ಉದಾಹರಣೆಗಳೂ ಇವೆ. ಅರಮನೆಯ ವೇದಿಕೆ, ಯುವ ದಸರಾದಲ್ಲಿ ಪ್ರದರ್ಶನ ನೀಡುವ ಕಲಾವಿದರ ಆಯ್ಕೆಯಲ್ಲೂ ಯಾವುದೇ ಮಾನದಂಡಗಳಿಲ್ಲ. ಕೈಗೆ ಸಿಕ್ಕವರು, ಅಧಿಕಾರಿಗಳಿಗೆ ಕಮಿಷನ್ ಕೊಡುವ ಕಲಾವಿದರನ್ನೇ ಕರೆತರವುದು ಹೆಚ್ಚು. ಕಲಾವಿದರ ಪುನರಾವರ್ತನೆ, ಒಂದೇ ದಸರಾದಲ್ಲಿ ವಿವಿಧೆಡೆ ಕಾರ್ಯಕ್ರಮ ನೀಡುವ ಪ್ಯಾಕೇಜ್... ಹೀಗೆ ವಿವಿಧ ಹಂತದಲ್ಲಿ ನಡೆಯುವ ಅವಾಂತರಕ್ಕೆಲ್ಲ ಕಡಿವಾಣ ಹಾಕಬೇಕಿದೆ.

ದಸರಾಕ್ಕೆ ಸಂಬಂಧವಿಲ್ಲದ ಕಾರ್ಯಕ್ರಮಗಳನ್ನು ತುರುಕುವ ಮೂಲಕ ಸರ್ಕಾರಿ ಹಣವನ್ನು ಪೋಲು ಮಾಡುವುದು ಮಾಮೂಲಿ ಎನಿಸಿದೆ. ಹೊಸ ಹೊಸ ಕಾರ್ಯಕ್ರಮ ಸೇರ್ಪಡೆಯೂ ಪ್ರತಿ ವರ್ಷವೂ ನಡೆಯುತ್ತಿದೆ. ಇದರಿಂದ ಬಜೆಟ್ ಸರಿಸುಮಾರು 50ರಿಂದ 60 ಕೋಟಿ ರೂ.ಗೆ ಏರಿಕೆಯಾಗಿದೆ. ಇದಕ್ಕೆ ಮೂಗುದಾರ ಹಾಕಲೇ ಬೇಕು. ಸಾಂಪ್ರದಾಯಿಕತೆ, ಪಾರಂಪರಿಕತೆಗೆ ಚ್ಯುತಿಯಾಗದಂತೆ ನಿರ್ವಹಿಸುವ ಮೂಲಕ ದಸರೆಗೆ ಇನ್ನಷ್ಟು ಸೊಬಗು ತುಂಬುವ ಕಡೆಗೆ ರಾಜ್ಯ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಿದೆ.

ಒಂದೇ ದೃಷ್ಟಿಕೋನದಲ್ಲಿ ಕೆಲಸವಾಗಲಿ:

ವಿಶ್ವವಿಖ್ಯಾತ ಉತ್ಸವವಾಗಿರುವ ದಸರೆಗಾಗಿ ಪ್ರತಿವರ್ಷ ಲಕ್ಷಾಂತರ ದೇಶ-ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಇಷ್ಟೊಂದು ಬೃಹತ್ ಮಟ್ಟದ ಮಹೋತ್ಸವವನ್ನು ಯಾವುದೇ ಗೊಂದಲ, ತೊಂದರೆ, ಅಪಘಾತಗಳಿಲ್ಲದೆ ಸುಸೂತ್ರವಾಗಿ ನಡೆಸಲು ಎಸ್‌ಒಪಿಯನ್ನು ವಿವಿಧ ವಿಭಾಗಗಳಲ್ಲಿ ಅಳವಡಿಕೆ ಮುಖ್ಯವಾಗಿದೆ.

ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಹೊಣೆಗಾರಿಕೆ ನಿಗದಿ ಪಡಿಸಬೇಕು. ಜತೆಗೆ, ಸಮನ್ವಯದಿಂದ ಎಲ್ಲ ಅಧಿಕಾರಿಗಳು ಒಂದೇ ದೃಷ್ಟಿಕೋನದಲ್ಲಿ ಕೆಲಸ ಮಾಡಲು ಸಜ್ಜುಗೊಳಿಸಬೇಕು. ಅಧಿಕಾರಿಗಳು ವರ್ಗವಾದರೂ ಕೆಲಸದಲ್ಲಿ ಯಾವುದೇ ಬದಲಾವಣೆಯಾಗದಂತೆ ಎಸ್‌ಒಪಿ ಅನುಸಾರವೇ ನಡೆಯುವಂತೆ ನೋಡಿಕೊಳ್ಳಬೇಕಿದೆ. ಕೊನೇ ಹಂತದಲ್ಲಿ ಆತುರದ ಸಿದ್ಧತೆಗೆ ತಿಲಾಂಜಲಿ ಹೇಳಿ, ಕನಿಷ್ಠ ಆರು ತಿಂಗಳಿಂದ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ವರ್ಷಕ್ಕೆ ಮುನ್ನವೇ ದಸರಾದ ಇವೆಂಟ್ ಕ್ಯಾಲೆಂಡರ್ ಪ್ರಕಟಿಸಿ ದೇಶ-ವಿದೇಶಿ ಪ್ರವಾಸಿಗರು ದಸರೆಗೆ ಬರಲು ಪ್ರವಾಸಯೋಜನೆ ರೂಪಿಸಿಕೊಳ್ಳಲು ಅನುವು ಮಾಡಿಕೊಡಬೇಕಿದೆ.

ಗೊಂದಲ ನಿವಾರಿಸಿ:

ಕ್ರೀಡೆ, ಆಹಾರ ಮೇಳ, ಸಾಂಸ್ಕೃತಿಕ ಸೇರಿದಂತೆ ಆಯಾಯ ಕಾರ್ಯಕ್ರಮ ಆಯೋಜನೆ ಕುರಿತು ನುರಿತ, ತಜ್ಞರ ಸಮಿತಿ ರಚಿಸಿ ಅವರಿಂದ ಸಲಹೆ, ಅಭಿಪ್ರಾಯ ಪಡೆದುಕೊಂಡು ಎಸ್‌ಒಪಿ ತಯಾರಿಸಬೇಕು. ಹೀಗೆ ಪ್ರತಿ ಹಂತದಲ್ಲೂ ದಸರಾದ ಆರಂಭದಿಂದ ಅಂತ್ಯದ ವರೆಗೂ ನಿರ್ದಿಷ್ಟ ಕಾರ್ಯಸೂಚಿ ರೂಪಿಸಿ ಗೊಂದಲ ನಿವಾರಿಸಬೇಕಿದೆ. ಇಡೀ ಉತ್ಸವವನ್ನೇ ಅತ್ಯಂತ ಶಿಸ್ತುಬದ್ಧ, ಯಶಸ್ವಿಯಾಗಿ ಆಯೋಜಿಸುವ ಮೂಲಕ ಜನತಾ ದಸರಾವಾಗಿ ವರ್ತಿಸಬೇಕಿದೆ.

ಎಸ್‌ಒಪಿ ಅಳವಡಿಕೆ ಹೇಗಿರಬೇಕು?

* ಜಂಬೂಸವಾರಿ, ಗಜಪಡೆ ನಿರ್ವಹಣೆ

* ಆನೆಗಳ ತಾಲೀಮು, ಆರೋಗ್ಯ ಮತ್ತು ಸುರಕ್ಷತೆ

* ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವೇದಿಕೆ ನಿರ್ವಹಣೆ

* ಜನಸಂದಣಿ ಮತ್ತು ಸಂಚಾರ ನಿರ್ವಹಣೆ

* ಟಿಕೆಟಿಂಗ್ ವ್ಯವಸ್ಥೆ ನಿರ್ವಹಣೆ, ನಕಲಿ ಟಿಕೆಟ್ ತಡೆ

* ವಾಹನ ಪಾರ್ಕಿಂಗ್, ತಂತ್ರಜ್ಞಾನದ ಬಳಕೆ

* ಜನರ ಆರೋಗ್ಯ ಮತ್ತು ತುರ್ತು ಸೇವೆಗಳು

* ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆ

* ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net