ದಸರೆ ವೈಭವ: ಝಗಮಗಿಸುವ ದೀಪಾಲಂಕಾರದ ಹಿಂದಿದೆ ಸೆಸ್ಕ್ ಪರಿಶ್ರಮ

642 ಜನರ ನಿಯೋಜನೆ ಸುಗಮ ನಿರ್ವಹಣೆಗಾಗಿ ಹಲವು ಕ್ರಮ
ದಸರೆ ವೈಭವ: ಝಗಮಗಿಸುವ ದೀಪಾಲಂಕಾರದ ಹಿಂದಿದೆ ಸೆಸ್ಕ್ ಪರಿಶ್ರಮ
ದಸರಾ ದೀಪಾಲಂಕಾರ ನಿರ್ವಹಣೆ ಕೆಲಸವನ್ನು ಸೆಸ್ಕ್ ಎಂಡಿ ಎಂ.ಎಸ್.ಅರ್ಚನಾ ಪರಿಶೀಲಿಸಿದರು. ಸುನೀಲ್ ಕುಮಾರ್ ಇನ್ನಿತರರಿದ್ದರು.The Splendor of Dasara: CESC’s Hard Work Lies Behind the Dazzling Illuminations
Published on: 

ಮೈಸೂರು: ದಸರಾ ವಿದ್ಯುತ್ ದೀಪಾಲಂಕಾರದ ಸೌಂದರ್ಯದಿಂದ ಲಕ್ಷಾಂತರ ಜನರು, ಪ್ರವಾಸಿಗರನ್ನು ಮೈಸೂರು ಆಕರ್ಷಿಸುತ್ತದೆ. ಆದರೆ, ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರದ ಸಂಭ್ರಮದ ಹಿಂದೆ ವಿದ್ಯುತ್ ವ್ಯವಸ್ಥೆಯ ನಿರ್ವಹಣೆಗಾಗಿ ಶ್ರಮಿಸುವ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿಯ ಪರಿಶ್ರಮ ಅಡಗಿದೆ.

ಅರಮನೆ ಮಾತ್ರವಲ್ಲದೆ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಸೃಷ್ಟಿಯಾಗುವ ಬೆಳಕಿನ ಚಿತ್ತಾರ ದಸರೆಯ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದೆ.

ಇದು ಕೇವಲ ಸೌಂದರ್ಯದ ಪ್ರದರ್ಶನ ಮಾತ್ರವೇ ಆಗಿರದೆ, ಸುಗಮ ನಿರ್ವಹಣೆಗೆ ತಾಂತ್ರಿಕ ಸಿದ್ಧತೆ, ಸಮನ್ವಯ, ನಿರಂತರ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ನಿರ್ವಹಿಸುತ್ತಿದೆ.

ದೀಪಾಲಂಕಾರಕ್ಕಾಗಿ ಈ ಬಾರಿ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 642 ಜನರನ್ನು ನಿಯೋಜಿಸಲಾಗಿದೆ. ಎನ್.ಆರ್.ಮೊಹಲ್ಲಾ ವಿಭಾಗದ 323, ವಿ.ವಿ. ಮೊಹಲ್ಲಾ ವಿಭಾಗದ 243, ಡೆಪ್ಯುಟೇಷನ್ ಮೂಲಕ ಬಂದಿರುವ 76 ಜನರು ಒಳಗೊಂಡಿದ್ದಾರೆ. ವಿದ್ಯುತ್ ದೀಪಾಲಂಕಾರದ ಕೆಲಸ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಈ ತಂಡಗಳು ಪ್ರಮುಖ ಪಾತ್ರ ವಹಿಸಲಿವೆ.

ಇವರೊಂದಿಗೆ ತಾಂತ್ರಿಕ ಮೇಲ್ವಿಚಾರಣೆಗಾಗಿ 16 ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು(ಎಇಇ), 50 ಸಹಾಯಕ ಇಂಜಿನಿಯರ್‌ಗಳು(ಎಇ), 56 ಕಿರಿಯ ಇಂಜಿನಿಯರ್‌ಗಳನ್ನು(ಜೆಇ) ನಿಯೋಜಿಸಲಾಗಿದೆ.

ಇವರೊಂದಿಗೆ ಮೀಟರ್ ರೀಡರ್‌ಗಳು, ಆಪರೇಟರ್‌ಗಳು, ಓವರ್‌ಸಿಯರ್‌ಗಳು, ಮೆಕಾನಿಕ್‌ಗಳು, ಸಹಾಯಕ ಸ್ಟೋರ್ ಕೀಪರ್‌ಗಳು, ಲೈನ್ ಮೆಕಾನಿಕ್‌ಗಳು, ಪವರ್‌ಮನ್‌ಗಳು ಸೇರಿದಂತೆ ವಿವಿಧ ವರ್ಗಗಳ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಇವರೊಂದಿಗೆ ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್. ಲೋಕೇಶ್, ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್, ಕಾರ್ಯಪಾಲಕ ಇಂಜಿನಿಯರ್‌ಗಳಾದ ಮಾದೇಶ್, ಸಂದೀಪ್ ಅವರು ದೀಪಾಲಂಕಾರದ ನಿರ್ವಹಣೆ, ಮೇಲ್ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಬೆಳಕಿನ ಹಿಂದೆ ತಾಂತ್ರಿಕ ಹೊಣೆ:

ದಸರಾದಲ್ಲಿ ವಿದ್ಯುತ್ ವ್ಯವಸ್ಥೆ ಸುಗಮವಾಗಿ, ಸುರಕ್ಷಿತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಮಹತ್ವದ ಜವಾಬ್ದಾರಿ. ದೀಪಾಲಂಕಾರದ ವ್ಯವಸ್ಥೆಗಳ ನಿರ್ವಹಣೆ, ತಾಂತ್ರಿಕ ಪರಿಶೀಲನೆ, ಮೇಲ್ವಿಚಾರಣೆ , ಸಮಸ್ಯೆಗಳು ಎದುರಾದಾಗ ಅವುಗಳಿಗೆ ತಕ್ಷಣ ಸ್ಪಂದಿಸುವ ಕಾರ್ಯಗಳಲ್ಲಿ ಸಿಬ್ಬಂದಿಯ ಸೇವೆ ಅಗತ್ಯವಾಗುತ್ತದೆ. ಇಂತಹ ದೊಡ್ಡ ಪ್ರಮಾಣದ ಕೆಲಸಗಳಲ್ಲಿ ತಾಂತ್ರಿಕ ಜ್ಞಾನ, ಸಮಯಪ್ರಜ್ಞೆ, ಸುರಕ್ಷತಾ ಕ್ರಮಗಳ ಪಾಲನೆ, ಪರಸ್ಪರ ಸಮನ್ವಯ ಮುಖ್ಯವಾಗಿವೆ.

ದಸರಾದಲ್ಲಿ ವಿದ್ಯುತ್ ದೀಪಾಲಂಕಾರ ಮೈಸೂರು ನಗರದ ಸೌಂದರ್ಯ ಹೆಚ್ಚಿಸಿ, ವಿಶಿಷ್ಟ ಅನುಭವ ನೀಡುತ್ತದೆ. ಈ ವೈಭವ, ಸಂಭ್ರಮವನ್ನು ಸಾಕಾರಗೊಳಿಸುವ ಕಾರ್ಯದಲ್ಲಿ ಸೆಸ್ಕ್‌ನ ಎಲ್ಲ ಅಧಿಕಾರಿಗಳು, ಸಿಬ್ಬಂದಿಯ ಕೊಡುಗೆ ಸ್ಮರಣೀಯವಾಗಿದೆ. ಕಣ್ಣಿಗೆ ಕಾಣುವ ಬೆಳಕಿನ ಹಿಂದೆ ಅಡಗಿರುವ ಕಾಣದ ಕೈಗಳ ಸೇವೆ ದಸರೆಯ ಸಂಭ್ರಮದ ಅವಿಭಾಜ್ಯ ಭಾಗವಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net