ದಸರಾದಲ್ಲಿ ಪ್ರಯಾಣಿಕರ ದಟ್ಟಣೆ: ಹೆಚ್ಚುವರಿ 700 ಬಸ್ ವ್ಯವಸ್ಥೆ

ಪ್ರವಾಸಿಗರು ಹೆಚ್ಚಳ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯಿಂದ ಕ್ರಮ ಅ.15ರಿಂದ ವಿಶೇಷ ಬಸ್‌ಗಳ ಸಂಚಾರ
ದಸರಾದಲ್ಲಿ ಪ್ರಯಾಣಿಕರ ದಟ್ಟಣೆ: ಹೆಚ್ಚುವರಿ 700 ಬಸ್ ವ್ಯವಸ್ಥೆ
ಮೈಸೂರು ಬಸ್ ನಿಲ್ದಾಣPassenger rush during Dasara: Arrangements for 700 additional buses
Published on: 

ಮೈಸೂರು: ದಸರಾ ಸಂದರ್ಭದಲ್ಲಿ ಮೈಸೂರಿಗೆ ವಿವಿಧೆಡೆಯಿಂದ ಬರುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ 700 ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಶೇಷ ಬಸ್‌ಗಳ ಪೂರ್ಣ ಪ್ರಮಾಣದ ಕಾರ್ಯಾಚರಣೆ ಅ.15ರಿಂದ ಆರಂಭವಾಗಲಿದೆ. ದಸರಾ ಮಹೋತ್ಸವ ಅ.11ರಿಂದ ಆರಂಭವಾಗಲಿದೆಯಾದರೂ, ಪ್ರಯಾಣಿಕರ ಸಂಚಾರ 2-3 ದಿನದ ನಂತರ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಅ.15ರಿಂದ ವಿಶೇಷ ಬಸ್‌ಗಳ ಸಂಚಾರ ಅಗತ್ಯವಿರುವ ಮಾರ್ಗಗಳಲ್ಲಿ ಸಂಚರಿಸಲಿವೆ.

ಮೈಸೂರು ಗ್ರಾಮಾಂತರ ವಿಭಾಗದಿಂದ ಎಂದಿನಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳೊಂದಿಗೆ ಹೆಚ್ಚುವರಿ ಬಸ್‌ಗಳು ಓಡಾಡಲಿವೆ.

ಮೈಸೂರು ಗ್ರಾಮಾಂತರ ಮಾತೃ ವಿಭಾಗದಿಂದ 150, ಬೆಂಗಳೂರು ಕೇಂದ್ರೀಯ ಮಾತೃ ವಿಭಾಗದಿಂದ 80, ಮೈಸೂರು ನಗರ ವಿಭಾಗದಿಂದ 60, ಮಂಡ್ಯದಿಂದ 70, ಹಾಸನದಿಂದ 50, ಚಾಮರಾಜನಗರದಿಂದ 70, ಬೆಂಗಳೂರು ದಕ್ಷಿಣದಿಂದ 55, ತುಮಕೂರಿನಿಂದ 45, ಮಧುಗಿರಿಯಿಂದ 20, ಕೋಲಾರದಿಂದ 50, ಚಿಕ್ಕಬಳ್ಳಾಪುರದಿಂದ 50 ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಇದರೊಂದಿಗೆ ನಿತ್ಯ ಸಂಚರಿಸುವ ಬಸ್‌ಗಳೂ ಇರಲಿವೆ.

ದಸರಾ ವಿಶೇಷ ಕರ್ತವ್ಯಕ್ಕೆ ನಿಯೋಜಿಸುವ ಬಸ್‌ಗಳು ಸುಸ್ಥಿತಿಯಲ್ಲಿರುವ ಹಾಗೂ ಕಡಿಮೆ ಕಿಲೋಮೀಟರ್ ಕ್ರಮಿಸಿರುವ ಬಸ್‌ಗಳನ್ನೇ ಕಳುಹಿಸುವಂತೆ ಕೋರಲಾಗಿದೆ. ಅಲ್ಲದೆ, ಮೂರು ವರ್ಷ ಅನುಭವವಿರುವ ಕಾಯಂ ಆಗಿರುವ ಹಾಗೂ ಜಾತ್ರಾ ವಿಶೇಷ ಕಾರ್ಯಾಚರಣೆಯಲ್ಲಿ ಅನುಭವವಿರುವ ಚಾಲಕ, ನಿರ್ವಾಹಕರನ್ನು ಇಟಿಎಂ ಸಹಿತ ಕಳುಹಿಸಿಕೊಡುವಂತೆ ವಿನಂತಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net