ದಸರಾ ‘ಯುವ ಸಂಭ್ರಮ’ದಲ್ಲಿ ಜಾನಪದ ಕಲೆ ಅನಾವರಣ

30 ಕಾಲೇಜಿನ ತಂಡಗಳಿಂದ ವೈವಿಧ್ಯಮಯ ಪ್ರದರ್ಶನ ವೇದಿಕೆ ಮೇಲೆ ಪೌರಾಣಿಕ, ಜಾನಪದ ಕಲೆಗಳು, ಸಾಮಾಜಿಕ ಜಾಗೃತಿ
ದಸರಾ ‘ಯುವ ಸಂಭ್ರಮ’ದಲ್ಲಿ ಜಾನಪದ ಕಲೆ ಅನಾವರಣ
ದಸರಾ ಮಹೋತ್ಸವ ಅಂಗವಾಗಿ ಮಾನಸಗಂಗೋತ್ರಿಯ ಬಯಲುರಂಗ ಮಂದಿರದಲ್ಲಿ ಆಯೋಜಿಸಿದ್ದ ಯುವ ಸಂಭ್ರಮ ಕಾರ್ಯಕ್ರಮFolk art showcased at Dasara ‘Yuva Sambhrama’
Published on: 

ಮೈಸೂರು: ಯುವ ಮನಸುಗಳ ಕಣ್ಮನ ಸೆಳೆದ ‘ಯುವ ಸಂಭ್ರಮ’ದಲ್ಲಿ ರಂಜನೆ, ಸಂಗೀತ, ನರ್ತನದ ಮಳೆಯೇ ಸುರಿಯಿತು.

ದಸರಾ ಮಹೋತ್ಸವ ಅಂಗವಾಗಿ ಮಾನಸಗಂಗೋತ್ರಿಯ ಬಯಲುರಂಗ ಮಂದಿರದಲ್ಲಿ ಆಯೋಜಿಸಿದ್ದ 8ನೇ ದಿನದ ಕಾರ್ಯಕ್ರಮವೂ ರಂಗುರಂಗಿನ ಸಂಗೀತೋತ್ಸವದಿಂದ ಗಮನ ಸೆಳೆಯಿತು. ಯುವಕ, ಯುವತಿಯರು ಹೆಚ್ಚೆದ್ದು ಕುಣಿದು ಸಂಭ್ರಮಿಸಿದರು.

ಸಂಜೆ ಹೊತ್ತಿನಲ್ಲಿ ಮಳೆ ಬರುವ ಮುನ್ಸೂಚನೆ ಗೋಚರವಾದರೂ, ವರ್ಷಧಾರೆ ಸುರಿಯಲಿಲ್ಲ. ಆದರೆ, ಯುವ ಸಂಭ್ರಮದಲ್ಲಿ ಸಂಗೀತದ ಮಳೆಯಲ್ಲಿ ಸಭಿಕರು ಮಿಂದೆದ್ದರು.

30 ಕಾಲೇಜಿನ ತಂಡಗಳಿಂದ ಪೌರಾಣಿಕ, ಜಾನಪದ ಕಲೆಗಳು, ಸಾಮಾಜಿಕ ಜಾಗೃತಿ, ಸಾಹಿತ್ಯ ಪರಂಪರೆಯನ್ನು ಸಾರುವ ವೈವಿಧ್ಯಮಯ ಪ್ರದರ್ಶನಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜು, ಮಂಡ್ಯದ ಶ್ರೀ ಗೀತಾ ಕಾಂಪೋಸಿಟ್ ಎಕ್ಸಲೆನ್ಸ್ ಪಿಯು ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು, ಮೈಸೂರಿನ ಜೆಎಸ್‌ಎಸ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ಜಿಎಸ್‌ಎಸ್‌ಎಸ್‌ಎಸ್ ಇಂಜಿನಿಯರಿಂಗ್ ಕಾಲೇಜು, ವಿಜಯನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಚಾಮರಾಜನಗರದ ಜೆಎಸ್‌ಎಸ್ ಪಿಯು ಮಹಿಳಾ ಕಾಲೇಜು, ವರಕೋಡಿನ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ನಿಲಯ ಹಾಗೂ ಅರಸೀಕೆರೆಯ ಶಕುಂತಲಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪೌರಾಣಿಕ ಕಥಾ ಭಾಗಗಳಿಗೆ ವೇದಿಕೆಯಲ್ಲಿ ನೃತ್ಯಗಳ ಮೂಲಕ ಜೀವತುಂಬಿದರು.

ಬೈರಾಪುರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬನ್ನೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ತಂಡಗಳು ಲಿಂಗ ಸಮಾನತೆಯೊಂದಿಗೆ ಮಹಿಳಾ ಸಬಲೀಕರಣ ಹಾಗೂ ಮಹಿಳಾ ಸ್ವಯಂ ರಕ್ಷಣಾ ಕಲೆ ಕುರಿತು ಅರ್ಥಪೂರ್ಣ ಜಾಗೃತಿ ನೃತ್ಯಗಳನ್ನು ಪ್ರಸ್ತುತ ಪಡಿಸಿದವು.

ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜು, ಕೊಳ್ಳೇಗಾಲದ ಜೆಎಸ್‌ಎಸ್ ಮಹಿಳಾ ಕಾಲೇಜಿನ ತಂಡಗಳು ಹಳೇ ಹಾಗೂ ಹೊಸ ಗೀತೆಗಳ ಸಂಯೋಜನೆಯೊಂದಿಗೆ ಕನ್ನಡದ ವೈಭವ ಸಾರಿದವು.

ಮದ್ದೂರಿನ ಸರ್ಕಾರಿ ಪಿಯು ಬಾಲಕಿಯರ ಕಾಲೇಜು, ಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ನಾಡಿನ ಸಂಗೀತ, ಕಲೆ, ವಾಸ್ತುಶಿಲ್ಪ ಹಾಗೂ ಶಾಸ್ತ್ರೀಯ ಕಲೆಗಳ ಸೌಂದರ್ಯವನ್ನು ನೃತ್ಯರೂಪಕದ ಮೂಲಕ ಪ್ರದರ್ಶಿಸಿದರು.

ಕೆ.ಆರ್.ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ಯುವಜನತೆಯ ಪಾತ್ರ ಕುರಿತು ಜಾಗೃತಿ ಮೂಡಿಸಿದರೆ, ಕೆ.ಆರ್.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಯುವಜನರ ಆತ್ಮಹತ್ಯೆ ತಡೆ ಹಾಗೂ ಮಾನಸಿಕ ಒತ್ತಡ ನಿರ್ವಹಣೆ ಕುರಿತು ಅತ್ಯಂತ ಸಂವೇದನಾಶೀಲ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು.

ಹೆಜ್ಜೆ ಹಾಕಿದ ನಾಗಲಕ್ಷ್ಮೀ ಚೌಧರಿ:

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ವೇದಿಕೆಯಲ್ಲಿ ನರ್ತನ ಮಾಡಿ ಗಮನ ಸೆಳೆದರು. ಇವರೊಂದಿಗೆ ಸರ್ಕಾರಿ ಅಧಿಕಾರಿಗಳು ಸಹ ಹೆಜ್ಜೆ ಹಾಕಿ ಸಂಭ್ರಮಿಸಿದರು. ವೇದಿಕೆಯಲ್ಲಿ ಪ್ರದರ್ಶನಗೊಂಡ ಮಹಿಳಾ ಸಮಸ್ಯೆ ಕುರಿತು ಮನತಟ್ಟಿದ ನೃತ್ಯರೂಪಕಕ್ಕೆ ಕಣ್ಣೀರು ಸಹ ಹಾಕಿದರು.

ಸ್ವಾವಲಂಬನೆಯ ಬದುಕು ಕಂಡುಕೊಂಡಿರುವ ಮಹಿಳಾ ಪ್ರತಿನಿಧಿಗಳಾದ ಆಶಾ ಕಾರ್ಯಕರ್ತೆಯರು, ಪೊಲೀಸ್, ನರ್ಸ್‌ಗಳು, ಅಂಗನವಾಡಿ ಕಾರ್ಯಕರ್ತೆ ಸೇರಿದಂತೆ ವೃತ್ತಿನಿರತ ಮಹಿಳೆಯರನ್ನು ಸಾಂಕೇತಿಕವಾಗಿ ಸನ್ಮಾನಿಸ ಗೌರವಿಸಲಾಯಿತು.

ದುಶ್ಚಟಗಳಿಗೆ ಬಲಿಯಾಗಬೇಡಿ:

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಮಾತನಾಡಿ, ಹೆಣ್ಣುಮಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿಗಳಾದಾಗ ಮಾತ್ರ ಸಮಾಜದ ನೈಜ ಅಭಿವೃದ್ಧಿ ಸಾಧ್ಯ, ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೆ, ಧೈರ್ಯದಿಂದ ಸಾಗಬೇಕು ಎಂದು ಹೇಳಿದರು.

ಮಹಿಳೆಯರು ಶಿಕ್ಷಣ ಪಡೆದು ಸ್ವಾಭಿಮಾನಿ ಜೀವನ ನಡೆಸಬೇಕು. ಹೆಣ್ಣುಮಕ್ಕಳು ಸಮಾಜದಲ್ಲಿ ಕೊಡುವ ಕೈಯಾಗಿ ಬೆಳೆಯಬೇಕೇ ಹೊರತು, ಬೇಡುವ ಕೈಯಾಗಬಾರದು. ಡಾ. ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟವನ್ನು ನೆನಪಿಟ್ಟುಕೊಳ್ಳಬೇಕು ಯಾವ ಸಮಾಜದಲ್ಲಿ ಮಹಿಳೆಯರು ಶಿಕ್ಷಿತರಾಗುತ್ತಾರೋ, ಆ ಸಮಾಜ ಮಾತ್ರ ಮುನ್ನಡೆಯಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ದುಶ್ಚಟಗಳಿಗೆ ಬಲಿಯಾಗದೆ, ಶೈಕ್ಷಣಿಕ ಪ್ರಗತಿ ಹಾಗೂ ಪಾಲಕರ ಕನಸುಗಳನ್ನು ಈಡೇರಿಸುವುದಕ್ಕೆ ಆದ್ಯತೆ ನೀಡಬೇಕು. ಯಾವುದೇ ಆಕರ್ಷಣೆ ಅಥವಾ ಅಡೆತಡೆಗಳು ಎದುರಾದರೂ ಓದಿನಿಂದ ಗಮನ ಬೇರೆಡೆಗೆ ಹರಿಯಬಾರದು ಎಂದುಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net