ಮೈಸೂರು: ಸಮಾಜದಲ್ಲಿ ಭ್ರಷ್ಟರು, ತಪ್ಪಿತಸ್ಥರನ್ನು ಗೌರವಿಸಲಾಗುತ್ತಿದೆ ಎಂಬುದು ನೋವಿನ ಸಂಗತಿ ಎಂದು ನಿವೃತ್ತ ಲೋಕಾಯುಕ್ತ, ನ್ಯಾ. ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.
ಮೈಸೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್ಐಇ) ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಒಳ್ಳೆಯವರನ್ನು ಗುರುತಿಸಿ, ಸನ್ಮಾನಿಸುತ್ತಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತಿತ್ತು. ವ್ಯಕ್ತಿಯೊಬ್ಬ ತಪ್ಪು ಮಾಡಿದರೆ ಅವರ ಮನೆಯವರನ್ನು ಇತರರು ಮಾತನಾಡಿಸುತ್ತಿರಲಿಲ್ಲ. ಇದರಿಂದ ತಪ್ಪು ಮಾಡಬಾರದು ಎಂಬ ಸಂದೇಶ ಹೋಗುತ್ತಿತ್ತು. ಆದರೀಗ ಅಧಿಕಾರ ಹಾಗೂ ಶ್ರೀಮಂತಿಕೆ ಇದ್ದವರನ್ನು ಗೌರವಿಸಲಾಗುತ್ತಿದೆ. ಇದು ವ್ಯಕ್ತಿಗಳ ತಪ್ಪಲ್ಲ, ಸಮಾಜದ ತಪ್ಪು. ಸಮಾಜದ ಭಾವನೆಯಲ್ಲಿ ಬದಲಾವಣೆ ಬರಬೇಕಿದೆ ಎಂದರು.
ಹಿಂದೆ ದುರಾಸೆ ಇರುತ್ತಿರಲಿಲ್ಲ. ಮಕ್ಕಳಿಗೆ ನೀತಿ ಪಾಠ ಹೇಳಿಕೊಡಲಾಗುತ್ತಿತ್ತು. ಈಗ ನೀತಿ ಪಾಠವೇ ಇಲ್ಲ. ಸಾಮಾಜಿಕ ಮೌಲ್ಯ ಮುಖ್ಯವಾಗಬೇಕು. ತೃಪ್ತಿ ಇದ್ದಲ್ಲಿ ಮನುಷ್ಯ ತಪ್ಪು ಮಾಡುವುದಿಲ್ಲ. ಅದೇ ರೀತಿ ಮಾನವೀಯತೆ ಇದ್ದಲ್ಲಿ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಇರುತ್ತದೆ ಎಂದರು.
ಮಾಜಿ ಮೇಯರ್ ಪುರುಷೋತ್ತಮ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಾಹಿತಿ ಹನೂರು ಚನ್ನಪ್ಪ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಇಒ ಸಿ.ಜಿ. ಕೃಷ್ಣ, ಸಿಎಫ್ಟಿಆರ್ಐ ವಿಜ್ಞಾನಿ ಶಿವಸ್ವಾಮಿ, ಶಿಕ್ಷಣ ಕ್ಷೇತ್ರದ ಮೋಹನಕುಮಾರ್ ಶಾಸ್ತ್ರಿ, ಉದ್ಯಮಿ ಎಂ.ಸಿ.ಸದಾನಂದ, ಸಂಜೀವಿನಿ ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಂಸ್ಥಾಪಕ ಅಧ್ಯಕ್ಷೆ ಲತಾ ರಂಗನಾಥ್, ಸಮಾಜ ಸೇವಕಿ ನಂದಿನಿ, ಸಮಗ್ರ ಕೃಷಿಯ ಅನಿತಾ ನಾರಾಯಣ, ಸಾಹಿತಿ ಎಂ.ರಾಮಾನುಂಜಪ್ಪ, ಸರ್ಕಾರಿ ಸೇವೆಯ ಗಿರೀಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಕಸಾಪ ಜಿಲ್ಲಾ ಉಪಾಧ್ಯಕ್ಷರಾದ ಡೈರಿ ವೆಂಕಟೇಶ್, ಜಾಕೀರ್ ಹುಸೇನ್, ತಾಲೂಕಾಧ್ಯಕ್ಷ ಅಧ್ಯಕ್ಷ ಎ.ಸಿ. ಮಂಜುನಾಥ್ ಇತರರಿದ್ದರು.