

ತಿ.ನರಸೀಪುರ: ಮೈಸೂರು ನಗರದ ರೈಲ್ವೆ ನಿಲ್ದಾಣ ಮುಂಭಾಗವಿರುವ ಜೆ.ಕೆ. ಮೈದಾನದಲ್ಲಿ ಡಿ.20ರ ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಫೋಟೋಗ್ರಾಫರ್ಸ್ ಆ್ಯಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ರಜತ ಸಂಭ್ರಮದ ಪ್ರಯುಕ್ತ ವಸ್ತು ಪ್ರದರ್ಶನ ಮತ್ತು ಛಾಯಾಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಬಿ.ವಿಜಯ್ ಹೇಳಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಶುಕ್ರವಾರ ಮೈಸೂರು ಡಿಸ್ಟ್ರಿಕ್ಟ್ ಫೋಟೋ ಗ್ರಾಫರ್ಸ್ ಆ್ಯಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ 25ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿರುವ ರಜತ ಸಂಭ್ರಮಕ್ಕೆ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ವಸ್ತು ಪ್ರದರ್ಶನ ಮತ್ತು ಛಾಯಾ ಸಂಜೆಯ ಜತೆಗೆ ಹಲವು ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ಛಾಯಾಗ್ರಾಹಕರಿಗೆ ರೀಲ್ಸ್ ಶೂಟ್, ಎಡಿಟಿಂಗ್,10 ನಿಮಿಷಗಳ ಫೋಟೋ ಚಾಲೆಂಜ್, ಬೆಸ್ಟ್ ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್, ಫಾಸ್ಟೆಸ್ಟ್ ಗಿಂಬಲ್ಸ್ ಸೆಟ್ ಅಪ್, ಗೆಸ್ ಕ್ಯಾಮರಾ ಸೆಟ್ಟಿಂಗ್ ಇನ್ ಫೋಟೋಸ್, ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸೂಪರ್ ಸಿಕ್ಸ್ ಕ್ರಿಕೆಟ್ ಹಾಗೂ ಬ್ಯಾಂಡ್ಮಿಟನ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಎಸ್.ಕೆ.ಶಿವಕುಮಾರ್ ಮಾತನಾಡಿ, ತಾಲೂಕಿನ ವೃತ್ತಿನಿರತ ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಸಮಿತಿಯ ಕಾರ್ಯಕಾರಿ ಸದಸ್ಯರಾದ ರಾಜಣ್ಣ, ಲೋಕೇಶ್, ನಾರಾಯಣ, ತಾಲೂಕು ಸಂಘದ ನಿರ್ದೇಶಕರಾದ ನಂಜುಂಡ ಆರಾಧ್ಯ, ರಘುನಂದನ್, ಶ್ಯಾಮ್, ನಟರಾಜು, ಶಾಂತಕುಮಾರ್, ಮಲ್ಲೇಶ್, ಧನಂಜಯ, ಮಹದೇವಸ್ವಾಮಿ, ದರ್ಶನ್, ಚೇತನ್ ಇತರರು ಇದ್ದರು.