ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ

ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಭರವಸೆ
ತಿ.ನರಸೀಪುರ ತಾಲೂಕಿನ ಕಿರಗಸೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಉದ್ಘಾಟಿಸಿದರು. ಡಾ.ಕೆ.ರಂಗಸ್ವಾಮಿ, ಪಿ.ಎನ್.ಚರಿತ, ಎನ್.ಕೆ.ಕೆಂಪರಾಜು, ಎಂ.ರಾಜಣ್ಣ, ಶಾಂತ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ಕಿರಗಸೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಉದ್ಘಾಟಿಸಿದರು. ಡಾ.ಕೆ.ರಂಗಸ್ವಾಮಿ, ಪಿ.ಎನ್.ಚರಿತ, ಎನ್.ಕೆ.ಕೆಂಪರಾಜು, ಎಂ.ರಾಜಣ್ಣ, ಶಾಂತ ಇತರರು ಇದ್ದರು. Prompt solutions to people's problems
Published on: 

ತಿ.ನರಸೀಪುರ: ಸಾರ್ವಜನಿಕರಿಂದ ಸಲ್ಲಿಕೆಯಾಗುವ ಅರ್ಜಿಗಳಿಗೆ 28 ದಿನಗಳೊಳಗಾಗಿ ಪರಿಹಾರ ಕಲ್ಪಿಸಿ, ನಿಗದಿತ ಅವಧಿಯಲ್ಲಿ ಸಮಸ್ಯೆ ಪರಿಸಲಾಗುವುದು ಎಂದು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ತಿಳಿಸಿದರು.

ತಾಲೂಕಿನ ಕಿರಗಸೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಸೂಕ್ತ ಕಾರಣಗಳನ್ನು ಉಲ್ಲೇಖಿಸಿ ಲಿಖಿತ ಹಿಂಬರಹ ನೀಡಲಾಗುವುದು ಎಂದರು.

ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸಿ ಸ್ಥಳೀಯ ಮಟ್ಟದಲ್ಲಿಯೇ ಪರಿಹಾರ ಒದಗಿಸುವ ಉದ್ದೇಶದಿಂದ ಸರ್ಕಾರ ಪ್ರಜಾಸೇವಾ ಆಂದೋಲನವನ್ನು ಜಾರಿಗೊಳಿಸಿದೆ. ಈ ಹಿಂದೆ ಹೋಬಳಿ ಮಟ್ಟದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ಇದೀಗ ಗ್ರಾಮ ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸಲಾಗಿದೆ ಎಂದು ಹೇಳಿದರು.

ಪಿಂಚಣಿ ವಿಚಾರದಲ್ಲಿ ಸಂಶಯಾಸ್ಪದ ಪ್ರಕರಣಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಪಿಂಚಣಿದಾರರ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಜಮೆಯಾಗುತ್ತಿತ್ತೋ ಅದೇ ಖಾತೆಗೆ ಹಣ ಪಾವತಿಯಾಗಲಿದೆ ಎಂದು ಹೇಳಿದರು

ಪಹಣಿ ತಿದ್ದುಪಡಿ, ಪೌತಿ ಖಾತೆ, ಕಂದಾಯ ದಾಖಲೆಗಳಲ್ಲಿನ ಹೆಸರು ಬದಲಾವಣೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಾರ್ವಜನಿಕರು ಅಗತ್ಯ ದಾಖಲೆ ಹಾಗೂ ಸ್ಪಷ್ಟ ವಿವರಗಳೊಂದಿಗೆ ಲಿಖಿತ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಅರ್ಜಿಯಲ್ಲಿ ಸಮಸ್ಯೆಯ ಸಂಪೂರ್ಣ ವಿವರಗಳನ್ನು ಸ್ಪಷ್ಟವಾಗಿ ನಮೂದಿಸುವುದು ಮುಖ್ಯ. ಅಸ್ಪಷ್ಟವಾಗಿ ಅರ್ಜಿ ಸಲ್ಲಿಸಿದರೆ ಸಮಸ್ಯೆಯ ಸ್ವರೂಪ ತಿಳಿದುಕೊಂಡು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ವಿಷಯವನ್ನು ಸಮಗ್ರವಾಗಿ ಬರೆದು ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಬಳಿಕ ಕಡ್ಡಾಯವಾಗಿ ಸ್ವೀಕೃತಿ ಪತ್ರ ನೀಡಲಾಗುವುದು. ಇದರಿಂದ ಅರ್ಜಿ ಸಲ್ಲಿಸಿದ ಬಗ್ಗೆ ಸಾರ್ವಜನಿಕರಿಗೆ ಅಧಿಕೃತ ದಾಖಲೆ ದೊರೆಯಲಿದೆ ಎಂದು ತಿಳಿಸಿದರು.

ಸ್ಮಶಾನ ಅಭಿವೃದ್ಧಿ, ರಸ್ತೆ ನಿರ್ಮಾಣ, ಚರಂಡಿ ಹಾಗೂ ಸೇತುವೆ ನಿರ್ಮಾಣದಂತಹ ಬೃಹತ್ ಮೂಲಸೌಕರ್ಯ ಕಾಮಗಾರಿಗಳಿಗೆ ಸರ್ಕಾರದ ಅನುದಾನದ ಅಗತ್ಯವಿದೆ. ಇಂತಹ ಕಾಮಗಾರಿಗಳನ್ನು 28 ದಿನಗಳೊಳಗೆ ಪೂರ್ಣಗೊಳಿಸುವುದು ಸಾಧ್ಯವಿಲ್ಲ. ಹೀಗಾಗಿ ಸಂಬಂಧಪಟ್ಟ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿ, ಅನುದಾನ ಬಿಡುಗಡೆಯಾದ ನಂತರ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು. ಅಗತ್ಯವಿದ್ದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೂ ತಂದು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

23 ಅರ್ಜಿಗಳ ಸ್ವೀಕಾರ: ಕಿರಗಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಒಟ್ಟು 23 ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಂದಾಯ ಇಲಾಖೆಗೆ 6, ಗ್ರಾಮ ಪಂಚಾಯಿತಿಗೆ 7, ಸೆಸ್ಕ್ ಇಲಾಖೆಗೆ 6, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 1 ಹಾಗೂ ನೀರಾವರಿ ಇಲಾಖೆಗೆ 3 ಅರ್ಜಿಗಳು ಸಲ್ಲಿಕೆ.

ತಾಪಂ ಇಒ ಡಾ.ಕೆ. ರಂಗಸ್ವಾಮಿ, ಜಿ.ಪಂ ಎಇಇ ಪಿ.ಎನ್.ಚರಿತ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ರಾಜಣ್ಣ, ಸಿಡಿಪಿಒ ಗೋವಿಂದರಾಜು, ಸಮಾಜ ಕಲ್ಯಾಣಾಧಿಕಾರಿ ಕೆ.ಡಿ.ವಿನುತನ್, ಸೆಸ್ಕ್ ಎಇಇ ಕೆ.ವಿ.ವಿರೇಶ್, ನೀರಾವರಿ ಇಲಾಖೆಯ ಎಇಇ ದಿನೇಶ್, ರೇಷ್ಮೆ ಇಲಾಖೆಯ ಕೆಂಪರಾಜು ಮತ್ತು ರಾಜುನಾಯ್ಕ, ಸಹಕಾರ ಇಲಾಖೆಯ ಹಸೀನಾ, ಕಾರ್ಮಿಕ ಇಲಾಖೆಯ ಸದಾನಂದ, ಕಸಬಾ ಕೃಷಿ ಅಧಿಕಾರಿ ಕಾವ್ಯಾ, ಸಂಜೀವ್, ಎಡಿಎಂ ಮಂಜುಳಾ, ಶಿರಸ್ತೇದಾರ್ ನಾಗಲಕ್ಷ್ಮೀ, ಪಿಡಿಒ ಧರಣೇಶ್, ಕಂದಾಯ ನಿರೀಕ್ಷಕ ಮಹೇಂದ್ರ ಹಾಗೂ ಗ್ರಾಮ ಆಡಳಿತಾಧಿಕಾರಿಗಳಾದ ರೋಹಿತ್ ಮುಚ್ಚಡಿ, ಶ್ರೀನಿವಾಸಮೂರ್ತಿ, ಗಂಗಮ್ಮ, ವೆಂಕಟೇಶ್, ವಿಕಾಸ್, ಅಶ್ವಿನಿ ಮತ್ತು ಲಕ್ಷ್ಮೀ ಇದ್ದರು.