ಚಿಲ್ಕುಂದದಲ್ಲಿ ನಾಡಕಚೇರಿ ಸ್ಥಾಪನೆಯಾಗಲಿ

ಪ್ರಜಾಸೇವಾ ಆಂದೋಲನದಲ್ಲಿ ದಸಂಸ ಮನವಿ
ಹನಗೋಡು ಹೋಬಳಿಯ ಚಿಲ್ಕುಂದದಲ್ಲಿ ನಡೆದ ಪ್ರಜಾಸೇವಾ ಆಂದೋಲನಕ್ಕೆ ಗಣ್ಯರು ಚಾಲನೆ ನೀಡಿದರು, ತಹಸೀಲ್ದಾರ್ ರಾಜಶೇಖರಮೂರ್ತಿ, ಹೊಂಗಯ್ಯ, ಶರತ್‌ಕುಮಾರ್ ಇತರರು ಇದ್ದರು.
ಹನಗೋಡು ಹೋಬಳಿಯ ಚಿಲ್ಕುಂದದಲ್ಲಿ ನಡೆದ ಪ್ರಜಾಸೇವಾ ಆಂದೋಲನಕ್ಕೆ ಗಣ್ಯರು ಚಾಲನೆ ನೀಡಿದರು, ತಹಸೀಲ್ದಾರ್ ರಾಜಶೇಖರಮೂರ್ತಿ, ಹೊಂಗಯ್ಯ, ಶರತ್‌ಕುಮಾರ್ ಇತರರು ಇದ್ದರು.
Published on: 

ಹನಗೋಡು: ಹೋಬಳಿಯ ಚಿಲ್ಕುಂದ ದೊಡ್ಡ ಗ್ರಾಮವಾಗಿದ್ದು, ಈ ಭಾಗದ ಜನರ ಅನುಕೂಲಕ್ಕಾಗಿ ನಾಡ ಕಚೇರಿ ಸ್ಥಾಪಿಸಬೇಕೆಂದು ತಾಲೂಕು ದಸಂಸ ವತಿಯಿಂದ ಪ್ರಜಾಸೇವಾ ಆಂದೋಲನದಲ್ಲಿ ಮನವಿ ಸಲ್ಲಿಸಿದರು.

ಹನಗೋಡು ಹೋಬಳಿಯ ಚಿಲ್ಕುಂದದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನದಲ್ಲಿ ದಸಂಸದ ಅತ್ತಿಗುಪ್ಪೆರಾಮಕೃಷ್ಣ, ಸಿದ್ದೇಶ್, ಶಿವರಾಜು, ಚಿಕ್ಕಹುಣಸೂರು ರಾಜು ಮತ್ತಿತರರು ಹನಗೋಡಿನಲ್ಲಿರುವ ನಾಡ ಕಚೇರಿ 20 ಕಿ.ಮೀ. ದೂರದಲ್ಲಿದ್ದು, ಸಾರಿಗೆ ವ್ಯವಸ್ಥೆಯೂ ಇಲ್ಲ. ಈ ಭಾಗದ ಜನರು ಅಲ್ಲಿಗೆ ಹೋಗಲು ತೊಂದರೆಯಾಗುತ್ತಿದ್ದು, ಇಲ್ಲಿ ನಾಡ ಕಚೇರಿ ತೆರೆದಲ್ಲಿ ಸುತ್ತಮುತ್ತಲ ಗ್ರಾಮಗಳವರಿಗೆ ಅನುಕೂಲವಾಗಲಿದೆ ಎಂದರು.

ಅತ್ತಿಕುಪ್ಪೆ ಗ್ರಾಮದ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಇ-ಸ್ವತ್ತು ಸಿಕ್ಕಿಲ್ಲ ಹಾಗೂ ಗ್ರಾಮದಲ್ಲಿ 6.16 ಎಕರೆ ಸರ್ಕಾರಿ ಭೂಮಿ ಇದ್ದು, ಆಶ್ರಯ ನಿವೇಶನ ರಚಿಸಿ ಬಡವರಿಗೆ ವಿತರಿಸಬೇಕು. ಗ್ರಾಮದಲ್ಲಿ 10 ಎಕರೆ ಸರ್ಕಾರಿ ಭೂಮಿ ಅಕ್ರಮ ಪರಭಾರೆಯಾಗಿದ್ದು, ತೆರವುಗೊಳಿಸಬೇಕೆಂದು ಸಲ್ಲಿಸಿದ ಮನವಿಗೆ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ತಹಸೀಲ್ದಾರ್ ರಾಜಶೇಖರಮೂರ್ತಿ, ತಾ.ಪಂ.ಇಒ ಹೊಂಗಯ್ಯ ಭರವಸೆ ನೀಡಿದರು.

ಸರ್ಕಾರಿ ಫ್ರೌಢಶಾಲೆಗೆ ಖಾತೆ ಮಾಡಿ:

ಚಿಲ್ಕುಂದ ಗ್ರಾಮದ ಮುಖಂಡ ಪ್ರೇಮಕುಮಾರ್ ಮಾತನಾಡಿ, ನಮ್ಮೂರಿನ ಸರ್ಕಾರಿ ಫ್ರೌಢಶಾಲೆಗೆ ಸಂಬಂಧಿಸಿದಂತೆ ದಾಖಲೆ ಇಲ್ಲ. ಸರ್ವೇ ಮಾಡಿಸಿ, ಒತ್ತುವರಿ ತೆರವುಗೊಳಿಸಿ, ಖಾತೆ ಮಾಡಿಕೊಡಬೇಕು. ಗ್ರಾಮ ಪರಿಮಿತಿಯ ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸ್ಥಳದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾಗಿದ್ದು, ತೆರವುಗೊಳಿಸಿ, ಗ್ರಾಮದ ದೊಡ್ಡ ಕೊಳದ ಬಳಿ ರಸ್ತೆ ಒತ್ತುವರಿ ಬಿಡಿಸಬೇಕು. ಹೊಸ ಪಂಚಾಯಿತಿ ಕಟ್ಟಡ ನಿರ್ಮಿಸಲು ಸ.ನಂ.321ರಲ್ಲಿ 25ಗುಂಟೆ ಭೂಮಿ ಗುರುತಿಸಿದ್ದು, ಕಟ್ಟಡ ನಿರ್ಮಿಸಬೇಕು. ಗ್ರಾಮದಲ್ಲಿ 20 ಪೌರಕಾರ್ಮಿಕ ಕುಟುಂಬ ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿದ್ದು ದಾಖಲೆ ಮಾಡಿಕೊಟ್ಟು, ಸರ್ಕಾರದ ಮನೆ ನಿರ್ಮಿಸಿಕೊಳ್ಳಲು ಕ್ರಮವಹಿಸಬೇಕು. ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕು. ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿರುವ ಚಿಲ್ಕುಂದಲ್ಲಿ ಹೈಟೆಕ್ ಬಸ್‌ನಿಲ್ದಾಣ ನಿರ್ಮಿಸಬೇಕೆಂಬ ಮನವಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತಾಗಿ ಕ್ರಮವಹಿಸಲು ತಹಸೀಲ್ದಾರ್ ನಿರ್ದೇಶಿಸಿದರು.

ಭೂಮಿ ದುರಸ್ತುಗೊಳಿಸಿ: ಹಬ್ಬನಕುಪ್ಪೆ, ಹೊಸಹಳ್ಳಿ ಗ್ರಾಮದ ಭೂಮಿ ದುರಸ್ತು ಮಾಡಿಕೊಡುವಂತೆ ಹಾಗೂ ಈ ಭಾಗದಲ್ಲಿ ಪಂಪ್‌ಸೆಟ್ ಕೇಬಲ್‌ಕಳ್ಳತನ ಹೆಚ್ಚುತ್ತಿದ್ದು ಕ್ರಮವಾಗಬೇಕು. ಹಬ್ಬನಕುಪ್ಪೆಗೆ ಮತ್ತಷ್ಟು ಬಸ್‌ಸೇವೆ ಅವಶ್ಯವಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಪ್ರೇಮಕುಮಾರ್ ಮನವಿ ಮಾಡಿದರೆ, ಹೊಸಳ್ಳಿ ತಮ್ಮೇಗೌಡ ಚಿಲ್ಕುಂದ ಗ್ರಾ.ಪಂ.ನ ಮಳಿಗೆಗಳ ಹರಾಜು ಮಾಡದೆ ಲಕ್ಷಾಂತರ ರೂ. ನಷ್ಟವಾಗಿದ್ದು ಕ್ರಮವಾಗಬೇಕೆಂದರು.

ಆದ್ಯತೆ ಮೇರೆಗೆ ದುರಸ್ತು ಕಾರ್ಯ ನಡೆಸಲಾಗುವುದು, ಕಳ್ಳತನ ಬಗ್ಗೆ ಪೊಲೀಸರಿಗೆ ಕ್ರಮವಹಿಸಲು ಸೂಚಿಸಲಾಗುವುದು. ಗ್ರಾ.ಪಂ. ಮಳಿಗೆ ಹರಾಜು ಸಂಬಂಧ ನ್ಯಾಯಾಲಯದಲ್ಲಿದ್ದು, ತೀರ್ಪಿನ ನಂತರ ಕ್ರಮವಹಿಸಲಾಗುವುದೆಂದು ಇಒ ತಿಳಿಸಿದರು.

29 ಅರ್ಜಿ ಸಲ್ಲಿಕೆ: ಆಂದೋಲನದಲ್ಲಿ 29 ಅರ್ಜಿಗಳು ಸಲ್ಲಿಕೆಯಾದವು. ಗ್ರಾ.ಪಂ. ವತಿಯಿಂದ ಇ-ಸ್ವತ್ತು ನೀಡುತ್ತಿಲ್ಲ, ಸ್ವಚ್ಛತಾ ಕಾರ್ಯವಾಗುತ್ತಿಲ್ಲವೆಂಬ ಗ್ರಾಮಸ್ಥರ ದೂರಿಗೆ ಸರ್ಕಾರ ಇ-ಸ್ವತ್ತು ನೀಡಲು ನಿರ್ದೇಶಿಸಿದ್ದು, ಅದರಂತೆ ಕ್ರಮವಹಿಸಲಾಗುವುದು. ಸ್ವಚ್ಛತೆ, ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡುವಂತೆ ಇಒ ಹೊಂಗಯ್ಯ ಪಿಡಿಒ ರವಿ ಅವರಿಗೆ ಸೂಚಿಸಿದರು.

ತಹಸೀಲ್ದಾರ್ ರಾಜಶೇಖರಮೂರ್ತಿ ಆಂದೋಲನ ಉದ್ಘಾಟಿಸಿದರು. ಇಒ ಹೊಂಗಯ್ಯ, ಉಪತಹಸೀಲ್ದಾರ್ ಶರತ್‌ಕುಮಾರ್, ರಾಜಸ್ವನಿರೀಕ್ಷಕ ನಂದೀಶ್, ಬಿಇಒ ಕಾಳನಾಯಕ, ಗ್ರಾ.ಪಂ.ಆಡಳಿತಾಧಿಕಾರಿ ನವೀನ್, ಪಿಡಿಒ ರವಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.