ಈ ಸಲ ಅಂಬಾರಿ ಆನೆ ಯಾವುದು? ಹಿಂದಿಗಿಂತ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿರುವ ಪ್ರಶ್ನೆ ಇದು. ಯಾವ ಆನೆ ಅಂಬಾರಿ ಹೊರಲಿದೆ ಎಂಬುದು ತೀವ್ರ ಕೌತುಕ ಮೂಡಿಸಿದೆ.
‘ಪ್ರಶಾಂತ’ ಮತ್ತು ‘ಧನಂಜಯ’ ಆನೆಗಳು ಅಂಬಾರಿ ಹೊರುವ ಪೈಪೋಟಿಯಲ್ಲಿ ಮುಂಚೂಣಿಯಲ್ಲಿವೆ. ಉಭಯ ಆನೆಗಳ ಕುರಿತು ಹೆಚ್ಚಿನ ಒಲವು ಇದೆ. ಎರಡನೇ ಆಯ್ಕೆಯಲ್ಲಿ ‘ಸುಗ್ರೀವ’ ಮತ್ತು ‘ಏಕಲವ್ಯ’ ಆನೆಗಳಿವೆ. ಭಾರ ಹೊರಲು ಹಿಂಜರಿದಿರುವ 42 ವರ್ಷದ ‘ಮಹೇಂದ್ರ’ ಈ ರೇಸ್‌ನಿಂದ ಹೊರ ಬಿದ್ದಿದೆ. ಜಂಬೂ ಸವಾರಿ ತಾಮೀಮಿನ ಬಳಿಕ ಅ.19ರಂದು ಅಂತಿಮ ನಿರ್ಧಾರವಾಗಲಿದೆ.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂ ಸವಾರಿ ಜನಾಕರ್ಷಣೆ. ಚಿನ್ನದ ಅಂಬಾರಿಯನ್ನು ಹೊತ್ತ ಆನೆಯನ್ನು ನೋಡಲು ಜನ ಕಿಕ್ಕಿರಿದು ಸೇರುತ್ತಾರೆ. ಈವರೆಗೆ ಸುಮಾರು 12 ಆನೆಗಳು ಅಂಬಾರಿಯನ್ನು ಬೆನ್ನಿಗೇರಿಸಿಕೊಂಡು ವೈಭವದ ದಸರೆಗೆ ಸಾಕ್ಷಿಯಾಗಿವೆ.
ದುಬಾರೆ ಆನೆ ಶಿಬಿರದ ನಿವಾಸಿ ಪ್ರಶಾಂತ ಹೆಸರಿಗೆ ತಕ್ಕಂತೆ ಪ್ರಶಾಂತಮಯಿ. 1993ರಲ್ಲಿ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದಿರುವ ಇದು ಬಲಿಷ್ಠ ಆನೆ. ಸತತ 18 ವರ್ಷಗಳಿಂದಲೂ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ. ಸದ್ಯ ಪೈಪೋಟಿಯಲ್ಲಿರುವ ಆನೆಗಳ ಪೈಕಿ ಪ್ರಶಾಂತ ಹೆಚ್ಚು ಅನುಭವಿ. ಶಿಸ್ತುಬದ್ಧ ನಡೆಯ ಮೂಲಕ ಹೆಸರುವಾಸಿ. ಇದಕ್ಕೆ 54 ವರ್ಷ. ದಸರಾ ಅಲ್ಲದೆ, ಅರಣ್ಯ ಇಲಾಖೆಯ ವಿವಿಧ ಕಾರ್ಯಾಚರಣೆಗಳಲ್ಲೂ ಪ್ರಶಾಂತ ನಂಬಿಕಸ್ಥ.
45 ವರ್ಷ ವಯಸ್ಸಿನ ‘ಧನಂಜಯ’ ಸದ್ಯ ಅಂಬಾರಿ ತಾಲೀಮಿನಲ್ಲಿ ತ್ವರಿತವಾಗಿ ಹೆಜ್ಜೆ ಹಾಕಿ ಒಲವು ಗಳಿಸಿದೆ. 8 ವರ್ಷದಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ಕಳೆದ ವರ್ಷ ನಿಶಾನೆ ಆನೆಯಾಗಿ ಉತ್ಸವವನ್ನು ಮುನ್ನಡೆಸಿತ್ತು.2013ರಲ್ಲಿ ಸೆರೆ ಹಿಡಿದಿರುವ ಇದು ದುಬಾರೆ ಆನೆ ಶಿಬಿರದ ನಿವಾಸಿ.
ಸುಗ್ರೀವ ಸಹ ದುಬಾರೆ ಶಿಬಿರದ ನಿವಾಸಿ. ಕಳೆದ ಮೂರು ದಸರಾದಲ್ಲಿ ಭಾಗಿಯಾಗಿದ್ದು, ಅರಣ್ಯವಾಸದಿಂದ ಅರಮನೆ ವರೆಗೂ ಪ್ರತಿ ಹಂತದಲ್ಲೂ ಸ್ಥಿರ ನಡವಳಿಕೆ ವರ್ತಿಸಿದೆ. ಈ ಬಾರಿಯ ತಾಲೀಮಿನಲ್ಲೂ ಮರದ ಅಂಬಾರಿ ಹೊತ್ತು ಅಭ್ಯಾಸ ನಡೆಸಿ ಗಮನ ಸೆಳೆದಿದೆ.
ಆರೋಗ್ಯಪೂರ್ಣವಾಗಿರುವ ಏಕಲವ್ಯ ವಾಹನ, ಪಟಾಕಿ ಶಬ್ದಕ್ಕೆ ಅಂಜದ ಆನೆ. ಸೆರೆ ಹಿಡಿದ ಅತ್ಯಂತ ಕಡಿಮೆ ಅವಧಿಯಲ್ಲೇ ದಸರಾದಲ್ಲಿ ಭಾಗಿಯಾಗಲು ಅದೃಷ್ಟ ಪಡೆದ ಆನೆ ಇದು. 2022ರಲ್ಲಿ ಮೂಡಿಗೆರೆ ಬಳಿ ಸೆರೆ ಹಿಡಿದ ಈ ಸಲಗ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಳಗಿದೆ. ಇದಕ್ಕೆ 41 ವರ್ಷ. 3ನೇ ಬಾರಿ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ.
ಅಂಬಾರಿ ರೇಸ್‌ನಿಂದ ಧೈರ್ಯಶಾಲಿ ಮಹೇಂದ್ರ ಆನೆ ಹೊರಬಿದ್ದಿದೆ. ಮರದ ಅಂಬಾರಿ ಅರ್ಧಕ್ಕೆ ಇಳಿಸಿದ ಮಹೇಂದ್ರ ನಿರಾಶೆ ಮೂಡಿಸಿದೆ. ಹೀಗೆ ಎರಡು ಸಲ ಭಾರ ಹೊರಲು ನಿರಾಸಕ್ತಿ ತೋರಿದೆ. ಶ್ರೀರಂಗಪಟ್ಟಣದಲ್ಲಿ 4 ಸಲ ಅಂಬಾರಿ ಹೊತ್ತಿದ್ದ ಈ ಆನೆ ನಡೆಯಿಂದ ಅಭಿಮನ್ಯು ಉತ್ತರಾಧಿಕಾರಿ ಮಾಡಲು ಅರಣ್ಯ ಇಲಾಖೆಗೆ ಹಿಂಜರಿಯುವಂತೆ ಮಾಡಿದೆ.ಕಳೆದೊಂದು ತಿಂಗಳಿಂದಲೂ ನಗರದಲ್ಲಿ ನಿತ್ಯ ಜಂಬೂ ಸವಾರಿ ಅಭ್ಯಾಸ ನಡೆಯುತ್ತಿದೆ. ಪ್ರಮುಖ ಗಂಡಾನೆಗ0ಳಿಗೂ ಅಂಬಾರಿ ಹೊರುವ ತಾಲೀಮು ನೀಡಲಾಗುತ್ತಿದೆ.