ಕೃತಕ ಬುದ್ಧಿಮತ್ತೆ ವೈದ್ಯಕೀಯ ಅಭ್ಯಾಸದ ಭಾಗವಾಗಲಿ: ವಿಶ್ರಾಂತ ಕುಲಪತಿ ಚಂದ್ರಶೇಖರ್ ಶೆಟ್ಟಿ ಅನಿಸಿಕೆ

ರಾಜ್ಯಮಟ್ಟದ ನೇತ್ರವಿಜ್ಞಾನ ಸಮ್ಮೇಳನ
ಕೃತಕ ಬುದ್ಧಿಮತ್ತೆ ವೈದ್ಯಕೀಯ ಅಭ್ಯಾಸದ ಭಾಗವಾಗಲಿ:  ವಿಶ್ರಾಂತ ಕುಲಪತಿ ಚಂದ್ರಶೇಖರ್ ಶೆಟ್ಟಿ ಅನಿಸಿಕೆ
ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ 45ನೇ ವಾರ್ಷಿಕ ರಾಜ್ಯಮಟ್ಟದ ನೇತ್ರವಿಜ್ಞಾನ ಸಮ್ಮೇಳನವನ್ನು ವಿಶ್ರಾಂತ ಕುಲಪತಿ ಚಂದ್ರಶೇಖರ್ ಶೆಟ್ಟಿ ಉದ್ಘಾಟಿಸಿದರು. ಡಾ.ಕೆ.ವಿ.ಶಿವರಾಮ್, ಡಾ.ಬಿ.ಮಂಜುನಾಥ್, ಡಾ.ಡಿ.ನಾರಾಯಣಪ್ಪ ಇನ್ನಿತರರಿದ್ದರು.Let Artificial Intelligence Become Part of Medical Practice: Views of Retired Vice-Chancellor Chandrashekar Shetty
Published on: 

ಮೈಸೂರು: ಆಧುನಿಕ ವೈದ್ಯಕೀಯ ತಂತ್ರಜ್ಞಾನದ ನೆರವಿನಿಂದ ಕಣ್ಣಿನ ಕಾಯಿಲೆಗಳನ್ನು ಕೆಲವೇ ಕ್ಷಣಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗಿದೆ. ಯುವ ವೈದ್ಯರು ಈ ತಂತ್ರಜ್ಞಾನಗಳ ಸಾಧ್ಯತೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಚಂದ್ರಶೇಖರ್ ಶೆಟ್ಟಿ ಹೇಳಿದರು.

ನೇತ್ರವಿಜ್ಞಾನ ಸೊಸೈಟಿ, ಮೈಸೂರು ನೇತ್ರವಿಜ್ಞಾನ ಟ್ರಸ್ಟ್ ಸಹಯೋಗದಲ್ಲಿ ನಗರದ ಬನ್ನಿಮಂಟಪದಲ್ಲಿರುವ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ 45ನೇ ವಾರ್ಷಿಕ ನೇತ್ರವಿಜ್ಞಾನ ಸಮ್ಮೇಳನದಲ್ಲಿ ಮಾತನಾಡಿದರು.

ವಿವಿಧ ಸ್ಕಾೃನಿಂಗ್ ಉಪಕರಣಗಳು, ಕೃತಕ ಬುದ್ಧಿಮತ್ತೆ ಮತ್ತು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನಗಳು ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಪರಿವರ್ತನೆ ತರಲಿದ್ದು, ಯುವ ವೈದ್ಯರು ಇದಕ್ಕೆ ಸಜ್ಜಾಗಬೇಕು. ಜತೆಗೆ ವೃತ್ತಿಪರ ನೈತಿಕತೆ, ಸಹಾನುಭೂತಿ, ಮಾನವೀಯತೆ, ಕರುಣೆಯ ಮೌಲ್ಯವನ್ನೂ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು

ಕೃತಕ ಬುದ್ಧಿಮತ್ತೆ ಬಳಕೆಯಿಂದ ವೈದ್ಯರ ಉದ್ಯೋಗ, ವೈದ್ಯಕೀಯ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೆ ಸವಾಲು ಎದುರಾಗಬಹುದೆಂಬ ಆತಂಕವಿದೆ. ಆದರೆ, ಅದನ್ನು ಭಯದಿಂದ ನೋಡುವ ಬದಲು ವೈದ್ಯಕೀಯ ಅಭ್ಯಾಸದ ಭಾಗವಾಗಿ ಸ್ವೀಕರಿಸಬೇಕು. ತಂತ್ರಜ್ಞಾನದ ಸಕಾರಾತ್ಮಕ ಅಂಶವನ್ನು ಅಳವಡಿಸಿಕೊಂಡು ನಿರಂತರವಾಗಿ ಜ್ಞಾನವನ್ನು ನವೀಕರಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಇದೀಗ ಎಲ್ಲೆಡೆ ಆರೋಗ್ಯಕರ ಹಾಗೂ ದೀರ್ಘಾಯುಷ್ಯದ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದೇಶದ ಆರೋಗ್ಯ ವ್ಯವಸ್ಥೆಯ ಪ್ರಗತಿಯಲ್ಲಿ ವೈದ್ಯಕೀಯ ಶಿಕ್ಷಣ, ತಂತ್ರಜ್ಞಾನ, ಸಂಪನ್ಮೂಲಗಳು, ನುರಿತ ಮಾನವ ಸಂಪನ್ಮೂಲಗಳ ಪಾತ್ರ ಮಹತ್ವದ್ದಾಗಿದೆ. ಕಳೆದ ಎರಡು-ಮೂರು ದಶಕಗಳಲ್ಲಿ ಭಾರತ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಈ ಬೆಳವಣಿಗೆಯ ವೇಗಕ್ಕೆ ಹೊಸ ತಲೆಮಾರಿನ ವೈದ್ಯರು ಹೊಂದಿಕೊಳ್ಳುವುದು ಈಗಿನ ಅಗತ್ಯವಾಗಿದೆ ಎಂದರು.

ನೇತ್ರವಿಜ್ಞಾನ ಕ್ಷೇತ್ರದಲ್ಲಿ ದೇಶಾದ್ಯಂತ 40 ಸಾವಿರಕ್ಕೂ ಅಧಿಕ ನೇತ್ರ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 4,300 ಜನರು ಸಮ್ಮೇಳನಕ್ಕೆ ನೋಂದಾಯಿಸಿಕೊಂಡಿರುವುದು ಈ ಕ್ಷೇತ್ರದ ಬೆಳವಣಿಗೆ ಹಾಗೂ ವೈದ್ಯರಲ್ಲಿ ಇರುವ ಆಸಕ್ತಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಕರ್ನಾಟಕ ನೇತ್ರವಿಜ್ಞಾನ ಸೊಸೈಟಿ ಅಧ್ಯಕ್ಷ ಡಾ.ಕೆ.ವಿ.ಶಿವರಾಮ್, ಜೆಎಸ್‌ಎಸ್ ಎಎಚ್‌ಇಆರ್ ಕುಲಸಚಿವ ಡಾ.ಬಿ.ಮಂಜುನಾಥ್, ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ನಾರಾಯಣಪ್ಪ, ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಇನ್ನಿತರರು ಪಾಲ್ಗೊಂಡಿದ್ದರು.