ಕಾಮಗಾರಿ ವಿಳಂಬ ‘ಏತ ನೀರಾವರಿ ಅನಿಶ್ಚಿತ’

ಮಂದಗತಿ ಕಾಮಗಾರಿಯಿಂದ ರೈತರಲ್ಲಿ ಆತಂಕ
 ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆ ಮರು ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದು.
ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆ ಮರು ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದು.
Published on: 

ಪಿರಿಯಾಪಟ್ಟಣ: ತಾಲೂಕಿನ 150ಕ್ಕೂ ಹೆಚ್ಚಿನ ಕೆರೆಗಳಿಗೆ ನೀರು ತುಂಬಿಸುವ ಮಹತ್ವಕಾಂಕ್ಷಿ ಯೋಜನೆಯ ಮಂದಗತಿ ಕಾಮಗಾರಿ ರೈತರಲ್ಲಿ ಆತಂಕ ಮೂಡಿಸಿದೆ.

ಅಂತರ್ಜಲ ಮಟ್ಟ ಹೆಚ್ಚಿಸಬೇಕು, ಕೃಷಿ ಚಟುವಟಿಕೆಗೆ ನೀರಿನ ಕೊರತೆಯಾಗಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ 2013ರಿಂದ 2018ರ ಅವಧಿಯಲ್ಲಿ ಕೆ.ವೆಂಕಟೇಶ್ ಶಾಸಕರಾಗಿದ್ದಾಗ ತಾಲೂಕಿನ ಗಡಿಭಾಗದಲ್ಲಿರುವ ಮುತ್ತಿನ ಮುಳ್ಳುಸೋಗೆ ಬಳಿ ಕಾವೇರಿ ನದಿಯಿಂದ ಏತ ನೀರಾವರಿ ಪದ್ಧತಿ ಮೂಲಕ ನೀರನ್ನು ಮೇಲೆತ್ತಿ ಕೆರೆಗಳನ್ನು ಭರ್ತಿ ಮಾಡುವ ಈ ಯೋಜನೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳು ವರ್ಷವಿಡೀ ಭರ್ತಿಯಾಗಿದ್ದಲ್ಲಿ ಅಂತರ್ಜಲ ಮಟ್ಟ ಸುಧಾರಿಸಿ ಬೋರ್‌ವೆಲ್ಗಳಲ್ಲಿ ಯಥೇಚ್ಛವಾಗಿ ನೀರು ಲಭಿಸಲಿದೆ ಎನ್ನುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದಾಜು 290 ಕೋಟಿ ರೂ. ವೆಚ್ಚದ ಯೋಜನೆಗೆ ಸರ್ಕಾರದ ಮಂಜೂರಾತಿ ಪಡೆದು ಸಿದ್ದರಾಯ್ಯ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು.

2018 ವಿಧಾನಸಭಾ ಚುನಾವಣೆಯಲ್ಲಿ ಕೆ.ವೆಂಕಟೇಶ್ ಸೋಲು ಅನುಭವಿಸುವ ಜತೆಗೆ ಕಾಂಗ್ರೆಸ್ ಸರ್ಕಾರವೂ ಅಧಿಕಾರ ವಂಚಿತವಾಗಿದ್ದರಿಂದ ಈ ಯೋಜನೆಗೆ ಹಿನ್ನಡೆಯಾಯಿತು. 2018-2023ರವರೆಗೆ ಪಿರಿಯಾಪಟ್ಟಣ ಶಾಸಕರಾಗಿದ್ದ ಕೆ.ಮಹದೇವ್ ಅವರು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಒತ್ತಡ ಹಾಕುವ ಮೂಲಕ ಈ ಯೋಜನೆಗೆ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಿದ್ದರು. ಬಳಿಕ ಬಂದ ಬಿಜೆಪಿ ಸರ್ಕಾರದಲ್ಲಿ ಈ ಯೋಜನೆಗೆ ಹಣ ಬಿಡುಗಡೆ ವಿಳಂಬವಾಯಿತು. ಇದರಿಂದ ಕಾಮಗಾರಿ ವೇಗವೂ ಕುಂಠಿತವಾಯಿತು. 2023ರ ಮೇ ತಿಂಗಳಿನಲ್ಲಿ ಮತ್ತೊಮ್ಮೆ ಕೆ.ವೆಂಕಟೇಶ್ ಶಾಸಕರಾಗಿ ಪುನಾರಾಯ್ಕೆಯಾಗುವ ಜತೆಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲದರೂ ಈ ಯೋಜನೆ ಕಾಮಗಾರಿ ಚುರುಕುಗೊಳಿಸಿ ಶೀಘ್ರದಲ್ಲಿ ಮುಕ್ತಾಯಗೊಂಡು ತಾಲೂಕಿನ 150ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಯಬಹುದು ಎಂಬ ಸಾರ್ವಜನಿಕರ ನಿರೀಕ್ಷೆಯೂ ಹುಸಿಯಾಗಿದೆ.

ಮೊದಲ ಅವಧಿಯಲ್ಲಿ ಮೂರು ವರ್ಷಗಳ ಕಾಲ ಸಚಿವರೂ ಆಗಿದ್ದ ಕೆ.ವೆಂಕಟೇಶ್ ಅವರು ಆದಷ್ಟು ಶೀಘ್ರವಾಗಿ ಯೋಜನೆಯನ್ನು ಸಂಪೂರ್ಣಗೊಳಿಸಿ 150 ಕೆರೆಗಳಿಗೆ ನೀರು ಹರಿಸಬೇಕೆಂದು ಹರಸಾಹಸಪಟ್ಟರೂ ಪೂರ್ಣ ಪ್ರಮಾಣದಲ್ಲಿ ಫಲಪ್ರದವಾಗಿಲ್ಲ.

ಎಡದಂಡೆ ಚಾನೆಲ್ನಿಂದ ನೀರು : ತಾಲೂಕಿನ ಮುತ್ತಿನ ಮುಳ್ಳುಸೋಗೆ ಬಳಿ ಹರಿಯುತ್ತಿರುವ ಕಾವೇರಿ ನದಿಯಿಂದ ಮಳೆಗಾಲದಲ್ಲಿ ಏತ ನೀರಾವರಿ ಪದ್ಧತಿ ಮೂಲಕ ನೀರನ್ನು ಮೇಲತ್ತಿ ಮಂಟಿಬಿಳುಗುಳಿಯಲ್ಲಿ ನಿರ್ಮಿಸಿರುವ ಡೆಲವರಿ ಟ್ಯಾಂಕ್‌ಗೆ ಹರಿಸಲಾಗುತ್ತದೆ. ಅಲ್ಲಿಂದ ಎಡದಂಡೆ ಮತ್ತು ಬಲದಂಡೆ ಎಂಬ ಎರಡು ಚಾನೆಲ್ಗಳ ಮೂಲಕ ಪೈಪ್‌ಗಳ ಮೂಲಕ ಸಂಪರ್ಕ ಕಲ್ಪಿಸಿರುವ ಕೆರೆಗಳಿಗೆ ನೀರು ಹರಿಸುವುದು ಯೋಜನೆಯ ಉದ್ದೇಶ. ಈಗ ನದಿಯಿಂದ ಡೆಲಿವರಿ ಟ್ಯಾಂಕ್ ವರೆಗೆ ನೀರನ್ನು ತರಲಾಗಿದೆ. ಎಡದಂಡೆ ಚಾನೆಲ್ಗಳಲ್ಲಿ ನೀರು ಹರಿಸಿ ಹೆಬ್ಬಾಗಿಲು, ರಾಮನಾಥ ತುಂಗಾ, ಕಿರನಲ್ಲಿ ಗ್ರಾಮಗಳವರೆಗೆ ಕೆರೆ ತುಂಬಿಸಲಾಗುತ್ತಿದೆ. ಆದರೆ ಬಲದಂಡೆ ಚಾನೆಲ್ಗಳ ವ್ಯಾಪ್ತಿಯಲ್ಲಿ ಇನ್ನೂ ಪೈಪ್‌ಗಳ ಮರು ಅಳವಡಿಕೆ ಕಾಮಗಾರಿ ಸಂಪೂರ್ಣಗೊಳ್ಳದಿರುವುದು ರೈತರ ಬೇಸರಕ್ಕೆ ಕಾರಣವಾಗಿದೆ.

ಗುತ್ತಿಗೆದಾರನ ಎಡವಟ್ಟು:ಈ ಯೋಜನೆಯ ಕಾಮಗಾರಿ ಗುತ್ತಿಗೆ ಪಡೆದಿರುವ ಕೊಲ್ಲಾಪುರದ ಲಕ್ಷ್ಮೀ ಸಿವಿಲ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಭೂಮಿಯೊಳಗೆ ಪೈಪ್‌ಗಳ ಅಳವಡಿಕೆ ಸಂದರ್ಭದಲ್ಲಿ ವಿವಿಧೆೆಡೆ ಮಾಡಿರುವ ಎಡವಟ್ಟುಗಳು ಇದೀಗ ಗೋಚರವಾಗುತ್ತಿದೆ. ಈಗ ಅದೇ ಗುತ್ತಿಗೆದಾರನ ಕೈಯಲ್ಲಿ ದುರಸ್ತಿ ಕೆಲಸ ಮಾಡಿಸಲಾಗುತ್ತಿದೆ.

ಪ್ರತಿಭಟನೆಯ ಹಾದಿ ಹಿಡಿದ ರೈತರು:ಯೋಜನೆ ಆರಂಭಗೊಂಡು ಸುಮಾರು ಒಂಬತ್ತು ವರ್ಷಗಳಾದರೂ ಇದುವರೆಗೂ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸದಿರುವುದು ತಾಲೂಕಿನ ಅನ್ನದಾತರನ್ನು ಈಗ ಪ್ರತಿಭಟನೆಯ ಹಾದಿ ಹಿಡಿಯುವಂತೆ ಮಾಡಿದೆ. ಈ ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ವಿಪಕ್ಷಗಳ ನಾಯಕರು ಸಾಲು ಸಾಲು ಪ್ರತಿಭಟನೆಗಳ ಜತೆಗೆ ಪಾದಯಾತ್ರೆಯ ಮೂಲಕವೂ ಸರ್ಕಾರ ಹಾಗೂ ಸ್ಥಳೀಯ ಶಾಸಕರಿಗೆ ಬಿಸಿ ಮುಟ್ಟಿಸ ತೊಡಗಿದ್ದಾರೆ. ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಸೋಮವಾರ ಬೆಂಬಲಿತ ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟಿಸಿ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net