

ಬೆಟ್ಟದಪುರ: ಸಮಾಜದಲ್ಲಿ ಸಮಾನತೆ, ಸ್ವಾಭಿಮಾನ ಹಾಗೂ ದೇಶಪ್ರೇಮದ ಮೌಲ್ಯಗಳನ್ನು ಸಾರಿದ ಭಕ್ತ ಕನಕದಾಸರು ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬ್ಲೂ ಇಂಡಿಯಾ ಪಾರ್ಟಿ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮೌರ್ಯ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ದೇಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಭಕ್ತ ಕನಕದಾಸ ಜಯಂತಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕನಕದಾಸರು ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಮೂಢನಂಬಿಕೆ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ಜಾಗೃತಿ ಮೂಡಿಸಿದರು. ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಮಹಾನ್ ಕ್ರಾಂತಿಕಾರಿ. ಇಂತಹ ಮಹನೀಯರ ತತ್ವಾದರ್ಶ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು ಎಂದರು.
ಪಿರಿಯಾಪಟ್ಟಣ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಅಭಿವೃದ್ಧಿ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯದೆ ಜನರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ತಾಲೂಕಿನಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ವಂಶಪಾರಂಪರ್ಯ ರಾಜಕಾರಣಕ್ಕೆ ಕಡಿವಾಣ ಹಾಕಿ, ನಿಷ್ಪಕ್ಷಪಾತವಾಗಿ ಜನರ ಪರವಾಗಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಮತದಾರರು ಅವಕಾಶ ಕಲ್ಪಿಸಬೇಕು. ಹಣದ ಆಮಿಷಕ್ಕೆ ಒಳಗಾಗದೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಸ್ಪರ್ಧಿಸುವ ಉದ್ದೇಶವಿದ್ದು, ಸಾರ್ವಜನಿಕರು ಸಹಕಾರ ಮತ್ತು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ತಾತನಹಳ್ಳಿ ಕೃಷ್ಣಮೂರ್ತಿ, ಕೊಣಸೂರು ಶಿವರಾಜು, ಕಲ್ಲಪ್ಪ, ಕಾವೇರಮ್ಮ, ಯಶೋದಾ, ಗಿರಿಜಾ, ರಾಘವೇಂದ್ರ, ರಾಜೇಗೌಡ, ಕುಮಾರ, ಸುರೇಶ, ಮಲ್ಲೇಶ್, ಗ್ರಾಮದ ಡೇರಿ ಅಧ್ಯಕ್ಷ ಪುಟ್ಟರಾಜು, ಶಿವಕುಮಾರ್, ತಮ್ಮೇಗೌಡ, ಪುಟ್ಟಸ್ವಾಮಿ, ಮಂಜುನಾಥ್, ಮಣಿ, ರಾಜೇಗೌಡ, ದೊಡ್ಡತಮ್ಮೇಗೌಡ, ಮಹದೇವ್, ಚಂದ್ರೇಗೌಡ, ರಾಮಸ್ವಾಮಿ, ಕುಮಾರ, ಬಲರಾಮ, ರೇವಣ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.