ಎಲ್ಲ ಶಾಲೆಗಳಲ್ಲೂ ಸಂವಿಧಾನ ಪಾಠ ಅಳವಡಿಕೆ: ಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ

ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಸಂವಿಧಾನ ದಿನಾಚರಣೆ
ಎಲ್ಲ ಶಾಲೆಗಳಲ್ಲೂ ಸಂವಿಧಾನ ಪಾಠ ಅಳವಡಿಕೆ: ಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ
ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯಲ್ಲಿ ಜನರತ್ತ ಕೈ ಬೀಸಿದ ಸಿಎಂ ಡಿ.ಕೆ.ಶಿವಕುಮಾರ್Inclusion of lessons on the Constitution in all schools: CM D.K. Shivakumar announces
Published on: 

ಮೈಸೂರು: ಸಂವಿಧಾನ ಎನ್ನುವುದು ಕೇವಲ ಪುಸ್ತಕವಲ್ಲ, ಅದು ಪ್ರತಿಯೊಬ್ಬ ಭಾರತೀಯನ ಹಕ್ಕು, ಗೌರವ, ಸ್ವಾತಂತ್ರ್ಯ, ಸಮಾನತೆಯ ರಕ್ಷಾ ಕವಚ. ಅದರ ಆಶಯ, ಮೌಲ್ಯವನ್ನು ಬಾಲ್ಯದಿಂದಲೇ ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳ ಪಠ್ಯಕ್ರಮದಲ್ಲಿ ಸಂವಿಧಾನಕ್ಕೆ ಸಂಬಂಧಿಸಿದ ಪಾಠ ಅಳವಡಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಲಾಗುವುದು...

ಇದು, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರ ಭಾಷಣದ ಸಾರ.

ಶಾಲಾ ಮಕ್ಕಳಿಗೆ ಸಂವಿಧಾನದ ಆಶಯಗಳು, ಮೂಲಭೂತ ಹಕ್ಕುಗಳು, ಮೌಲ್ಯವನ್ನು ಬೋಧಿಸುವ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ಸಂವಿಧಾನವನ್ನು ಕೇವಲ ಓದುವುದಷ್ಟೇ ಅಲ್ಲ, ಅದರ ತತ್ವವನ್ನು ಜೀವನದಲ್ಲಿ ಪಾಲಿಸುವಂತಾಗಬೇಕು ಎಂಬುದು ಸರ್ಕಾರದ ಆಶಯ ಎಂದು ಪ್ರತಿಪಾದಿಸಿದರು.

ಸಂವಿಧಾನ ಭಾರತದ ಅಂತರಾತ್ಮ. ಪ್ರಜಾಪ್ರಭುತ್ವದ ಶಕ್ತಿ. ದೇಶದ 140 ಕೋಟಿ ಜನರ ಕನಸು, ಗೌರವ ಮತ್ತು ಹಕ್ಕು ಕಾಪಾಡುವ ರಾಷ್ಟ್ರೀಯ ಶಕ್ತಿ. ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತಿಳಿದುಕೊಳ್ಳಬೇಕು. ಅದರ ಮೌಲ್ಯ ಪುಸ್ತಕಕ್ಕೆ ಸೀಮಿತಗೊಳಿಸದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಮತದಾನದ ಹಕ್ಕು ರಕ್ಷಣೆಗೆ ಒಗ್ಗಟ್ಟು ಮುಖ್ಯ

ಮತದಾರರ ಪಟ್ಟಿಯಿಂದ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರ ಮತಗಳನ್ನು ಕಿತ್ತುಹಾಕಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ‘ನಮ್ಮ ಮತ ನಮ್ಮ ಹಕ್ಕು, ನಮ್ಮ ಮತ ನಮ್ಮ ಬದುಕು’ ಎಂಬ ಅರಿವಿನೊಂದಿಗೆ ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಲು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುವ ಪ್ರಯತ್ನಗಳನ್ನು ದೇಶ ಗಮನಿಸುತ್ತಿದೆ. ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಪ್ರಯತ್ನ ನಡೆದರೆ ಅದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ತಂದಂತೆ. ವ್ಯಕ್ತಿ ಪೂಜೆಗಿಂತ ಪ್ರಜಾಪ್ರಭುತ್ವದ ರಕ್ಷಣೆ ಮುಖ್ಯ. ಸಂವಿಧಾನ ಉಳಿದರೆ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಉಳಿಯಲಿದೆ ಎಂದು ಹೇಳಿದರು.

ಸಂವಿಧಾನ ನಮ್ಮೆಲ್ಲರ ನ್ಯಾಯದ ಆಧಾರ, ಸಮಾನತೆಯ ಬಂಡಾರ. ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಿದ ಪವಿತ್ರ ಗ್ರಂಥ ಎಂದು ಬಣ್ಣಿಸಿದರು.

ಸಂವಿಧಾನವೇ ಭಾರತದ ರಾಷ್ಟ್ರೀಯ ಗ್ರಂಥ, ಸಂವಿಧಾನವೇ ಭಾರತದ ಏಕೈಕ ಧರ್ಮ ಎಂಬ ಭಾವನೆಯೊಂದಿಗೆ ಅದನ್ನು ಉಳಿಸಿ ಬೆಳೆಸಬೇಕು. ಮನೆ ನಿರ್ಮಾಣಕ್ಕೆ ನೀಲಿನಕ್ಷೆ ಹೇಗೆ ಅಗತ್ಯವೋ, ಭವ್ಯ ಭಾರತದ ನಿರ್ಮಾಣಕ್ಕೂ ಸಂವಿಧಾನದ ಬುನಾದಿ ಅಷ್ಟೇ ಮುಖ್ಯ ಎಂದರು.

ಸಂವಿಧಾನದ ಆಶಯ ಸಮಾಜದ ಕಟ್ಟಕಡೆಯ ಪ್ರಜೆಗೂ ತಲುಪಬೇಕು. ಭೂಮಿ ಗ್ಯಾರಂಟಿ ಯೋಜನೆಯೂ ಇದೇ ಆಶಯದ ಭಾಗ. ಎಲ್ಲರಿಗೂ ಸಮಬಾಳು, ಸಮಾನ ಅವಕಾಶ ಕಲ್ಪಿಸುವುದಕ್ಕೆ ನಮ್ಮ ಸರ್ಕಾರ ಬದ್ಧ ಎಂದು ತಿಳಿಸಿದರು.

ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಕೇವಲ ಸರ್ಕಾರದ ಮೇಲಷ್ಟೇ ಇಲ್ಲ. ಪ್ರತಿಯೊಬ್ಬ ಭಾರತೀಯನ ಮೇಲೂ ಇದೆ. ಸ್ವಾತಂತ್ರ್ಯ ಎಂದರೆ ಕೇವಲ ಆಳ್ವಿಕೆ ನಡೆಸುವುದಲ್ಲ. ಶತಮಾನಗಳಿಂದ ಅಸಮಾನತೆಯಿಂದ ಬಳಲುತ್ತಿರುವ ಸಮಾಜದಲ್ಲಿ ಪರಿವರ್ತನೆ ತರುವುದು ಅದರ ನಿಜವಾದ ಉದ್ದೇಶ ಎಂದರು.