

ತಿ.ನರಸೀಪುರ: ತಾಲೂಕಿನ ಯಡದೊರೆ ಟೋಲ್ ಸಮೀಪ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ, ಯುವಕರಿಬ್ಬರು ಮೃತಪಟ್ಟಿದ್ದಾರೆ. ಈ ವೇಳೆ ಪಕ್ಕದಲ್ಲೇ ಚಲಿಸುತ್ತಿದ್ದ ಆಟೋರಿಕ್ಷಾ ಪಲ್ಟಿಯಾಗಿದ್ದು, ಅದರಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೊಳ್ಳೇಗಾಲ ತಾಲೂಕು ದೊಡ್ಡಿಂದವಾಡಿ ಗ್ರಾಮದ ಬಿ.ಜಯಶಂಕರ್ (29) ಹಾಗೂ ಸತ್ತೇಗಾಲದ ಚೆನ್ನಿಪುರದೊಡ್ಡಿ ಗ್ರಾಮದ ಎಲ್.ಶಿವಮೂರ್ತಿ (28) ಮೃತರು.
ಇಬ್ಬರು ಕೆಲಸದ ನಿಮಿತ್ತ ಮೈಸೂರಿಗೆ ಬೈಕ್‌ನಲ್ಲಿ ತೆರಳಿ, ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಚಲಾಯಿಸುತ್ತಿದ್ದ ಬಿ.ಜಯಶಂಕರ್ ಕಾರಿನ ಮುಂಭಾಗಕ್ಕೆ ಹಾರಿ ಬಿದ್ದಿದ್ದಾನೆ. ಪರಿಣಾಮ ಗ್ಲಾಸ್‌ಗೆ ತಲೆಗೆ ಬಡಿದು ತೀವ್ರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಕುಳಿತಿದ್ದ ಶಿವಮೂರ್ತಿ ಎಡಗೈ ಮುರಿದು ತಲೆ ಮತ್ತು ಮೂಗಿನಲ್ಲಿ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸ್ಥಳೀಯರು ಆಸ್ಪತೆಗೆ ಸಾಗಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ತಿ.ನರಸೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರ ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತ ದೇಹಗಳನ್ನು ನೀಡಲಾಯಿತು.
ಸಾರ್ವಜನಿಕರ ಆಕ್ರೋಶ: ಗಾಯಾಳುಗಳನ್ನು ಸಕಾಲಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಬಾರದ ಕಾರಣ ಸ್ಥಳದಲ್ಲಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಗಾಯಾಳುವನ್ನು ಆಂಬುಲೆನ್ಸ್‌ನಲ್ಲೇ ಕರೆದೊಯ್ಯಬೇಕು ಎಂದು ಪಟ್ಟುಹಿಡಿದು ವಾಹನಗಳನ್ನು ತಡೆದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.