

ಹನಗೋಡು: ಹನಗೋಡು ಹೋಬಳಿಯ ಶೆಟ್ಟಹಳ್ಳಿಯಲ್ಲಿ 16.67 ಕೋಟಿ ರೂ.ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್ಗೌಡ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ಜಿ.ಡಿ.ಹರೀಶ್ ಗೌಡ, ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿರುವ 10 ಎಕರೆ ಭೂಮಿ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆಯಾಗದೆ ತೊಂದರೆಯಾಗಿತ್ತು. ಅಂದಿನ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮರ ಕಡಿಯಲು ಅನುಮತಿ ಕೊಡಿಸಿದ್ದರೂ ಭೂಮಿ ವಿವಾದ ಇತ್ತು. ಹೀಗಾಗಿ ದಾಸನಪುರ, ಚಿಲ್ಕುಂದ, ತಿಪ್ಲಾಪುರ, ದಾಸನಪುರದಲ್ಲಿ ಪರ್ಯಾಯ ಭೂಮಿ ಗುರುತಿಸಲಾಗಿತ್ತಾದರೂ ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಮಂಜೂರಾಗಲಿಲ್ಲ. ಕೊನೆಗೆ ಶಾಲೆ ಬೇರೆಡೆಗೆ ಹೋಗುವ ಕಾರಣದಿಂದ ಧರ್ಮಾಪುರ ರೇಷ್ಮೆ ಫಾರ್ಮ್ ಸ್ಥಳದಲ್ಲಿ ನಿರ್ಮಿಸುವ ಉದ್ದೇಶ ಹೊಂದಲಾಗಿತ್ತಾದರೂ ಹನಗೋಡು ಭಾಗದ ಜನರು ವಿರೋಧಿಸಿದ್ದರು. ಇದನ್ನು ಮನಗಂಡು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಅವರು ನೀಡಿದ ಸಲಹೆ ಮೇರೆಗೆ ಮತ್ತೆ ಇಲ್ಲಿಯೇ ಭೂಮಿ ಮಂಜೂರಾಯಿತು. ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಿದರು.
ಹುಣಸೂರು ತಾಲೂಕಿನ ನೇರಳಕುಪ್ಪೆ (29ಕೋಟಿ ರೂ.), ಗಾವಡಗೆರೆ(129ಕೋಟಿ ರೂ.), ಕಲ್ಲೂರಪ್ಪನ ಬೆಟ್ಟ(6ಕೋಟಿ ರೂ.) ಹಾಗೂ ಕಾವೇರಿ ಹಿನ್ನೀರಿನಿಂದ ಮನುಗನಹಳ್ಳಿ (75ಕೋಟಿ ರೂ.) ಏತ ನೀರಾವರಿ ಯೋಜನೆಗಳು ಮಂಜೂರಾಗಿದ್ದು ವಿವಿಧ ಹಂತಗಳಲ್ಲಿದೆ ಎಂದರು.
ಗುಂಡಿ ಬಿದ್ದಿರುವ ಹನಗೋಡು-ಹುಣಸೂರು, ಪಂಚವಳ್ಳಿ, ಕೊಳುವಿಗೆ, ನೇಗತ್ತೂರು ರಸ್ತೆಗಳನ್ನು ಅನುದಾನಕ್ಕೆ ಅನುಗುಣವಾಗಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಭರತವಾಡಿ-ದೊಡ್ಡಹೆಜ್ಜೂರು ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಹನಗೋಡು-ಪಂಚವಳ್ಳಿ ರಸ್ತೆಯ ಅಬ್ಬೂರು ಬಳಿಯ ಮುಖ್ಯ ರಸ್ತೆಗೆ 6 ಕೋಟಿ ರೂ ವೆಚ್ಚದಡಿ ಹೊಸಸೇತುವೆ ಹಾಗೂ ಹೊನ್ನೇನಹಳ್ಳಿ ಬಳಿ 1.50 ಕೋಟಿ ರೂ. ವೆಚ್ಚದಡಿ ಸೇತುವೆ ನಿರ್ಮಿಸಲಾಗುತ್ತಿದೆ. ಕಚುವಿನಹಳ್ಳಿ ಗ್ರಾಮದ ಶಾಲೆಗೆ ಶಾಸಕರ ನಿಧಿಯಿಂದ ಒಂದು ಕೊಠಡಿ ನಿರ್ಮಿಸಿ ಕೊಡಲಾಗುವುದೆಂದು ಭರವಸೆ ನೀಡಿದರು.
ಹುಣಸೂರು ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು 74 ಕೋಟಿ ರೂ.ಅಂದಾಜುಪಟ್ಟಿ ಸಲ್ಲಿಸಲಾಗಿತ್ತು. ಈಬಗ್ಗೆ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದು ಇದೀಗ 60 ಕೋಟಿ ರೂ.ಅನುದಾನಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆಗೆ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಅಧ್ಯಕ್ಷ ಸುರೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಗೂರು ಬಸವರಾಜು, ಸುಭಾಷ್, ತಾ.ಪಂ.ಮಾಜಿ ಸದಸ್ಯ ಗಣಪತಿ, ಸತೀಶ್ ಪಾಪಣ್ಣ, ಬಿಳಿಕೆರೆ ಮಧು, ಸುರೇಶ್, ಮಹೇಶ್, ಪ್ರಭಾಕರ ಹೆಗ್ಗಡೆ, ಕಣಗಾಲು ಮಲ್ಲೇಶ್, ಉದಯ್, ದಾ.ರಾ.ಮಹೇಶ್, ನಾಗರಾಜಶೆಟ್ಟಿ, ಕ್ರೈಸ್ ಸಂಸ್ಥೆಯ ಎಇಇ ಹೇಮಲತಾ, ಗುತ್ತಿಗೆದಾರ ನಿತೀಶ್, ಮುಖ್ಯಶಿಕ್ಷಕ ವಿಕಾಸ್ ಇತರರಿದ್ದರು.