

ತಿ.ನರಸೀಪುರ: ಸೇವಾ ಸಂಕಲ್ಪ ಅಭಿಯಾನದಡಿ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ವರುಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪಟ್ಟಣದ ಬೈರಾಪುರದಲ್ಲಿ ಗುರುವಾರ ಆಯೋಜಿಸಿದ್ದ ಸೇವಾ ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳಿಗೆ ನೋಟ್‌ಪುಸ್ತಕ ಹಾಗೂ ಪೆನ್ಸಿಲ್ ವಿತರಿಸಿ ಮಾತನಾಡಿದರು.
ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಬಾಲ್ಯದಿಂದಲೇ ಅವರಲ್ಲಿ ಸೇವಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಪಕ್ಷದ ಪದಾಧಿಕಾರಿಗಳು ಹಾಗೂ ಮಹಿಳಾ ಮೋರ್ಚಾದ ಸಹಕಾರದಿಂದ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಳಿಕ ಬೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ವಿವಿಧ ವಿನ್ಯಾಸಗಳ ರಂಗೋಲಿ ಬಿಡಿಸಿದರು. ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಉಪ್ಪಿಟ್ಟಮ್ಮ ಸೊಪ್ಪಿಟ್ಟಮ್ಮ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಮೋದಿ ಅವರ ಜನ್ಮದಿನದ ಅಂಗವಾಗಿ ದೇಶಾದ್ಯಂತ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ವರುಣ ಮಂಡಲ ಬಿಜೆಪಿ ಅಧ್ಯಕ್ಷ ನಗರ್ಲೆ ಮಹದೇವಸ್ವಾಮಿ ಮಾತನಾಡಿ, ಜನ್ಮದಿನವನ್ನು ಕೇವಲ ಕಟೌಟ್‌ಗಳನ್ನು ಅಳವಡಿಸಿ ಆಚರಿಸುವುದಕ್ಕಿಂತ ಸಮಾಜಕ್ಕೆ ಉಪಯುಕ್ತವಾದ ಸೇವಾ ಕಾರ್ಯಗಳ ಮೂಲಕ ಆಚರಿಸುವುದು ಮುಖ್ಯ ಎಂದರು.
ಸೇವಾ ಸಂಕಲ್ಪ ಅಭಿಯಾನದಡಿ ಒಂದು ತಿಂಗಳ ಕಾಲ ದೇವಾಲಯಗಳು, ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಮಕ್ಕಳಲ್ಲಿ ಬಾಲ್ಯದಿಂದಲೇ ಸೇವಾ ಮನೋಭಾವ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವರುಣ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶರತ್ ಪುಟ್ಟಬುದ್ದಿ, ವರುಣ ಪ್ರಧಾನ ಕಾರ್ಯದರ್ಶಿ ಆಲಗೂಡು ವೆಂಕಟರಮಣ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಭಾಗ್ಯಾ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಲ್ಲೇಶ್, ರೈತ ಮೋರ್ಚಾ ಅಧ್ಯಕ್ಷ ಮಹೇಶ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರೂಪಶ್ರೀ, ಪದ್ಮಾ, ಪುಷ್ಪಲತಾ, ಕಾಂತಮ್ಮ, ರಾಜೇಶ್ವರಿ, ನಳಿನಿ, ಕರೋಹಟ್ಟಿ ರಾಜಶೇಖರ್, ಹೇಮಾವತಿ, ಮಹೇಶ್, ಮಹಿಳಾ ಮೋರ್ಚಾದ ಪದಾಧಿಕಾರಿಗಳು ಹಾಗೂ ವಿವಿಧ ಘಟಕಗಳ ಮುಖಂಡರು, ಕಾರ್ಯಕರ್ತರು ಇದ್ದರು.