7 ಕೆಜಿಯಷ್ಟು ಚಿನ್ನಾಭರಣ ಹೊತ್ತೊಯ್ದಿದ್ದಾರೆ

ವಿಷ್ಣುವರ್ಧನ್
ವಿಷ್ಣುವರ್ಧನ್
Published on

ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಮಾಹಿತಿ ಆರೋಪಿಗಳ ಬಂಧನಕ್ಕಾಗಿ ತನಿಖೆ ಚುರುಕು

ಹುಣಸೂರು: ನಗರದ ಬೈಪಾಸ್ ರಸ್ತೆಯಲ್ಲಿರುವ ಸ್ಕೈ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಂನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಸುಮಾರು 7 ಕೆಜಿಯಷ್ಟು ಚಿನ್ನಾಭರಣಗಳನ್ನು ದರೋಡೆಕೋರರು ಹೊತ್ತೊಯ್ದಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ನಗರದ ಡಿವೈಎಸ್‌ಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಅಧಿಕಾರಿಗಳ ಮತ್ತು ತನಿಖಾ ತಂಡಗಳೊಂದಿಗಿನ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶೋರೂಂನ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣವನ್ನು ಶೀಘ್ರ ಭೇದಿಸಲು 5 ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಇಬ್ಬರು ಡಿವೈಎಸ್‌ಪಿಗಳು, ಐವರು ಇನ್‌ಸ್ಪೆಕ್ಟರ್‌ಗಳು, 6 ಎಸ್‌ಐಗಳು, 30 ಕಾನ್‌ಸ್ಟೇಬಲ್‌ಗಳು ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಸಿಬ್ಬಂದಿ ಮಾಹಿತಿ ಕಲೆಹಾಕುತ್ತಿದ್ದಾರೆ. ಹುಣಸೂರು ನಗರ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ಕಷ್ಯಪ್ ತನಿಖಾಧಿಕಾರಿಯಾಗಿರುತ್ತಾರೆ. ಎಲ್ಲ ಕೋನಗಳಲ್ಲೂ ತನಿಖೆ ನಡಸಲಾಗುತ್ತಿದೆ. ಈವರೆಗೆ ವಾಹನಗಳ ಟ್ರೇಸ್‌ಔಟ್ ಆಗಿಲ್ಲ ಎಂದು ತಿಳಿಸಿದರು.
ಸುರಕ್ಷತೆ ಕುರಿತು ಸಭೆ ನಡೆಸಲಾಗಿತ್ತು: ಚಿನ್ನಾಭರಣ ಅಂಗಡಿಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು 6 ತಿಂಗಳ ಹಿಂದೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಲಿಖಿತ ರೂಪದಲ್ಲಿ ಮಾಹಿತಿ ಒದಗಿಸಿದ್ದೇವೆ. ಹುಣಸೂರು ಪ್ರಕರಣದಲ್ಲಿ ಶೋ ರೂಂನವರು ರಾತ್ರಿ ಪಾಳಿಗೆ ಮಾತ್ರ ಸೆಕ್ಯೂರಿಟಿಗಳನ್ನು ಇಟ್ಟುಕೊಂಡಿದ್ದು, ಹಗಲಿನ ವೇಳೆ ಇಟ್ಟುಕೊಂಡಿರುವುದಿಲ್ಲವೆನ್ನುವುದು ತಿಳಿದುಬಂದಿದೆ. ತನಿಖಾ ತಂಡದೊಂದಿಗೆ ಸತತ ಸಂಪರ್ಕ ಇಟ್ಟುಕೊಂಡಿದ್ದು ಕ್ಷಣಕ್ಷಣದ ಮಾಹಿತಿ ಕಲೆಹಾಕುತ್ತಿದ್ದೇವೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದರು. ಶೋರೂಂನವರ ಕರಾಮತ್ತು ಅಥವಾ ಇಲಾಖೆಯ ಕೆಲ ವ್ಯಕ್ತಿಗಳ ಕೈಚಳಕ ಯಾವುದೇ ಇದ್ದರೂ ತನಿಖೆ ವೇಳೆ ಎಲ್ಲವೂ ಹೊರಬರಲಿದೆ ಎಂದು ತಿಳಿಸಿದರು.
ಡಿವೈಎಸ್‌ಪಿ ರವಿ, ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net