ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ದಸರಾ ಜಂಬೂಸವಾರಿಯ ವೈಭವವನ್ನು ಕಣ್ತುಂಬಿಕೊಂಡು ಮಂತ್ರಮುಗ್ಧರಾದ ಜನತೆ, ಸೂರ್ಯಾಸ್ತದ ಬಳಿಕ ಆಯೋಜಿಸಿದ್ದ ಪಂಜಿನ ಕವಾಯತಿನ ಮಾಯಾಲೋಕದಲ್ಲಿ ಬಂಧಿಯಾದರು.
ಎರಡು ವರ್ಷಗಳ ಬಳಿಕ ಪಂಜಿನ ಕವಾಯತಿನಲ್ಲಿ ಪ್ರದರ್ಶನ ನೀಡಿದ ಎಎಸ್‌ಸಿ ಸೆಂಟರ್ ಬೆಂಗಳೂರು ತಂಡದ ಮೋಟಾರ್ ಸೈಕಲ್ ಸಾಹಸ ಪ್ರದರ್ಶನ ನೋಡುಗರಲ್ಲಿ ರೋಮಾಂಚನ ಮೂಡಿಸಿ, ಉಸಿರು ಬಿಗಿಹಿಡಿಯುವಂತೆ ಮಾಡಿದರೆ, ಪಂಜಿನ ಕವಾಯಿತಿನ ವೈಭವ ಹಾಗೂ ಡ್ರೋನ್ ಶೋ ಪ್ರೇಕ್ಷಕರ ಮನಸೂರೆಗೊಂಡವು. ಅಶ್ವದಳದ ಶೋ ಜಂಪಿಂಗ್ ಮತ್ತು ಟೆಂಟ್ ಪೆಗ್ಗಿಂಗ್ ಪ್ರದರ್ಶನಗಳು ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸಿದವು. ಇಷ್ಟೇ ಅಲ್ಲದೆ, ಕಲರ್ಸ್ ಆಫ್ ಇಂಡಿಯನ್ ಆರ್ಟ್ ಡ್ಯಾನ್ಸ್ ಪ್ರದರ್ಶನ ಹಾಗೂ ಸೌಂಡ್ಸ್ ಆ್ಯಂಡ್ ಲೈಟ್ಸ್ ಶೋ ಕೂಡ ಜನರನ್ನು ಆಕರ್ಷಿಸಿದವು. ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಪಂಜಿನ ಕವಾಯತಿನ ಅದ್ಭುತ ದೃಶ್ಯಾವಳಿಗಳಿಗೆ ಜನ ಸಾಕ್ಷಿಯಾದರು.
ಈ ಬಾರಿ ವಿಶೇಷವಾಗಿ ಮೋಟಾರ್ ಸೈಕಲ್ ಪ್ರದರ್ಶನ ನೋಡುಗರಲ್ಲಿ ರೋಮಾಂಚನ ಮೂಡಿಸಿತು. ಬೈಕ್‌ಗಳ ವೇಗ, ಚಾಲಕರ ಸಾಹಸ ಹಾಗೂ ಅಪಾಯಕಾರಿ ಸನ್ನಿವೇಶಗಳಲ್ಲಿಯೂ ತೋರುವ ನೈಪುಣ್ಯ ಪ್ರೇಕ್ಷಕರ ಉಸಿರು ಬಿಗಿಹಿಡಿಯುವಂತೆ ಮಾಡಿತು.
ಒಂದು ಕಾಲಿನಲ್ಲಿ ಬೈಕ್ ಚಲಾಯಿಸುವುದು, ಬೈಕ್ ಮೇಲೆ ಮಲಗಿಕೊಂಡು ಸಾಗುವುದು, ಎರಡೂ ಕಾಲುಗಳನ್ನು ಸೀಟಿನ ಮೇಲಿರಿಸಿ ಚಾಲನೆ ಮಾಡುವುದು, ಕೈಬಿಟ್ಟು ಬೈಕ್ ಚಲಾಯಿಸುವುದು ಸೇರಿದಂತೆ ವಿಭಿನ್ನ ಕಸರತ್ತುಗಳನ್ನು ಪ್ರದರ್ಶಿಸಿದರು. ನಾಲ್ಕು ದಿಕ್ಕುಗಳಿಂದ ಮುಖಾಮುಖಿಯಾಗಿ ಬೈಕ್‌ಗಳನ್ನು ಚಲಾಯಿಸುವುದು, ಎಂಟು ಬೈಕ್‌ಗಳನ್ನು ಪರಸ್ಪರ ಮುಖಾಮುಖಿಯಾಗಿ ಚಲಾಯಿಸುವುದು ನೋಡುಗರನ್ನು ಹುಬ್ಬೇರುವಂತೆ ಮಾಡಿತು.
ಒಂದೇ ಬೈಕ್‌ನಲ್ಲಿ ಏಳು ಮಂದಿ ಕುಳಿತು ಸುದರ್ಶನ ಚಕ್ರದ ಆಕೃತಿಯಲ್ಲಿ ಚಲಾಯಿಸಿದ್ದು ವಿಶೇಷವಾಗಿತ್ತು. ಒಂದು ಚಕ್ರದಲ್ಲಿ ಬೈಕ್ ಚಲಾಯಿಸುವುದು, ಒಬ್ಬರ ಮೇಲೊಬ್ಬರು ಕುಳಿತು ಗನ್ ಹಿಡಿದು ಸಾಗುವುದು, ಬೈಕ್‌ನಲ್ಲಿಯೇ ವಿವಿಧ ವ್ಯಾಯಾಮಗಳನ್ನು ಪ್ರದರ್ಶಿಸುವುದು, ಒಂದೇ ಬೈಕ್‌ನಲ್ಲಿ ಮೂವರು ವಿವಿಧ ಕಸರತ್ತುಗಳನ್ನು ಮಾಡುವುದು ಹಾಗೂ ಬೈಕ್ ಮೇಲೆ ಏಣಿಯನ್ನು ಇರಿಸಿಕೊಂಡು ಚಾಲನೆ ಮಾಡುವುದು ಗಮನ ಸೆಳೆಯಿತು.
ಎರಡು ಬೈಕ್‌ಗಳಲ್ಲಿ ಐವರು ಒಟ್ಟಿಗೆ ಸಾಹಸ ಪ್ರದರ್ಶಿಸಿದ್ದು, ಬೆಂಕಿಯ ವೃತ್ತದ ಮೂಲಕ ಬೈಕ್ ಜಂಪ್ ಮಾಡಿದ್ದು, ಒಂದೇ ಬೈಕ್‌ನಲ್ಲಿ ಒಂಬತ್ತು ಮಂದಿ ಸಾಗಿದ್ದು ಪ್ರೇಕ್ಷಕರಲ್ಲಿ ರೋಮಾಂಚನ ಉಂಟು ಮಾಡಿದವು. ಐದು ಬೈಕ್‌ಗಳಲ್ಲಿ ಒಟ್ಟು 15 ಮಂದಿ ಏಕಕಾಲದಲ್ಲಿ ಕಸರತ್ತು ಪ್ರದರ್ಶಿಸಿದರು.
ಅಶ್ವಾರೋಹಿಗಳ ಶೋ ಜಂಪಿಂಗ್ ಮತ್ತು ಟೆಂಟ್ ಪೆಗ್ಗಿಂಗ್ ಪ್ರದರ್ಶನವೂ ಪ್ರೇಕ್ಷಕರಲ್ಲಿ ರೋಚಕ ಅನುಭವ ಮೂಡಿಸಿತು. ಸುರೇಶ್ ಮಳಲಿ, ಎಸ್.ಟಿ. ಶಾಸನೂರ, ವೀರೇಶ್, ರುದ್ರಪ್ಪ, ಎಂ.ಆರ್.ಸಂದೇಶ್, ಜಯಪ್ರಕಾಶ್ ಹಾಗೂ ಮಹೇಶ್ ಸೇರಿ ಇತರೆ ಅಶ್ವಾರೋಹಿಗಳು ವಿವಿಧ ಸಾಹಸ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಸಿಕ್ಸ್ ಬಾರ್ ಜಂಪ್, ಫೈರ್ ಬಾಕ್ಸ್ ಜಂಪ್, ಬಾಕ್ಸ್ ಜಂಪ್ ಹಾಗೂ ಟೆಂಟ್ ಪೆಗ್ಗಿಂಗ್‌ನ ವಿವಿಧ ಮಾದರಿಗಳು ಗಮನ ಸೆಳೆದವು.
ವೇಗವಾಗಿ ಓಡುವ ಕುದುರೆಗಳ ಮೇಲೆ ಕುಳಿತುಕೊಂಡೇ ನೆಲದಲ್ಲಿ ನೆಟ್ಟಿದ್ದ ಗೂಟಗಳನ್ನು ಈಟಿಯಿಂದ ಕಿತ್ತುಕೊಳ್ಳುವ ಕೌಶಲ ನೋಡುಗರನ್ನು ಬೆರಗುಗೊಳಿಸಿತು. ಉರಿಯುವ ಪಂಜುಗಳನ್ನು ಈಟಿಯಿಂದ ಎತ್ತಿಕೊಳ್ಳುವುದು, ಒಬ್ಬೊಬ್ಬರಾಗಿ ಬಂದು ಗುರಿ ಸಾಧಿಸುವುದು ಹಾಗೂ ನಾಲ್ವರು ಏಕಕಾಲದಲ್ಲಿ ಪಂಜುಗಳನ್ನು ಎತ್ತಿಕೊಳ್ಳುವ ಪ್ರದರ್ಶನಗಳು ಮೈನವಿರೇಳಿಸಿದವು. ಎದುರು ದಿಕ್ಕಿನಿಂದ ನಡೆಸಿದ ಟೆಂಟ್ ಪೆಗ್ಗಿಂಗ್ ಪ್ರದರ್ಶನವೂ ರೋಚಕತೆಯನ್ನು ಹೆಚ್ಚಿಸಿತು.
ಸುಮಾರು 3,500 ಡ್ರೋನ್‌ಗಳನ್ನು ಬಳಸಿ ರೂಪಿಸಲಾದ 12 ವಿಭಿನ್ನ ವಿನ್ಯಾಸಗಳ ಡ್ರೋನ್ ಪ್ರದರ್ಶನ ಬನ್ನಿಮಂಟಪದ ಬಾನಂಗಳದಲ್ಲಿ ಬೆರಗು ಮೂಡಿಸಿತು. ಆಧುನಿಕ ತಂತ್ರಜ್ಞಾನದ ನೆರವಿನಿಂದ ಆಕಾಶದಲ್ಲಿ ಮೂಡಿಬಂದ ಆಕರ್ಷಕ ಆಕೃತಿಗಳು ಪ್ರೇಕ್ಷಕರ ಗಮನವನ್ನು ಮತ್ತೆ ಮತ್ತೆ ಸೆಳೆದವು.
ಸಿಎಂ ದಸರಾ ಹಬ್ಬದ ಶುಭಾಶಯಗಳನ್ನು ಕೋರುವ ಸಂದೇಶದೊಂದಿಗೆ ಆರಂಭವಾದ ಪ್ರದರ್ಶನದಲ್ಲಿ ರಾಷ್ಟ್ರಧ್ವಜ ಹಿಡಿದ ಸೈನಿಕ, ಹಾರುವ ಚಿಟ್ಟೆ, ಗರಿಬಿಚ್ಚಿದ ನವಿಲು ಹಾಗೂ ಗರ್ಜಿಸುವ ಸಿಂಹದ ಆಕೃತಿಗಳು ಮೂಡಿಬಂದವು. ಕರ್ನಾಟಕದ ನಕ್ಷೆಯಲ್ಲಿ ಗ್ಯಾರಂಟಿ ಯೋಜನೆ, ಸುದರ್ಶನ ಚಕ್ರ, ನಟರಾಜನ ರೂಪ, ನಂದಿ ಹಾಗೂ ಅಂಬಾರಿ ಆನೆಯ ಆಕೃತಿಗಳು ವಿಶೇಷ ಆಕರ್ಷಣೆಯಾಗಿದ್ದವು.
ಚಾಮುಂಡೇಶ್ವರಿ ತಾಯಿಯ ಭವ್ಯ ಆಕೃತಿ ಬಾನಂಗಳದಲ್ಲಿ ಮೂಡಿಬಂದಾಗ, ಹಿನ್ನೆಲೆಯಲ್ಲಿನ ನಂದಿನಿ ನಂದಿನಿ ಗೀತೆ ಭಕ್ತಿಭಾವವನ್ನು ಹೆಚ್ಚಿಸಿತು. ಬೆಳಕು, ತಂತ್ರಜ್ಞಾನ ಹಾಗೂ ಸಂಗೀತದ ಸಮ್ಮಿಲನ ಡ್ರೋನ್ ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿತು.
ಭಾರತದ ಬಹುಸಂಸ್ಕೃತಿ, ಬಹುಭಾಷೆ ಹಾಗೂ ವೈವಿಧ್ಯಮಯ ಕಲಾಪರಂಪರೆಯನ್ನು ಬಿಂಬಿಸಿದ ಕಲರ್ಸ್ ಆಫ್ ಇಂಡಿಯಾ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು. ದೇಶದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಸುಮಾರು 450 ಕಲಾವಿದರು ನೃತ್ಯದ ಮೂಲಕ ಭಾರತದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದರು. ಭಜರಂಗಿ ಮೋಹನ್ ಅವರ ಮಾರ್ಗದರ್ಶನದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡರು.
ರಾಜಪರಂಪರೆಯಲ್ಲಿ ಆರಂಭಗೊಂಡಿದ್ದ ಪಂಜಿನ ಕವಾಯತು ಪ್ರಜಾಪ್ರಭುತ್ವದ ಕಾಲಘಟ್ಟದಲ್ಲಿಯೂ ತನ್ನ ವೈಭವವನ್ನು ಉಳಿಸಿಕೊಂಡು, ಹೊಸ ಜಾಗೃತಿ ಹಾಗೂ ಸಂದೇಶಗಳೊಂದಿಗೆ ಪ್ರೇಕ್ಷಕರ ಮುಂದೆ ಅನಾವರಣಗೊಂಡಿತು. 300 ಪೊಲೀಸ್ ಸಿಬ್ಬಂದಿ ಭಾಗವಹಿಸಿ ಪಂಜುಗಳ ಬೆಳಕಿನಲ್ಲಿ ನಾವೆಲ್ಲ ಒಂದೇ ಎಂಬ ಸಂದೇಶ ಸಾರುವ ಜತೆಗೆ ‘ಜೈ ಚಾಮುಂಡಿ’, ‘ಸಂವಿಧಾನವೇ ಶಕ್ತಿ’ ಆಕೃತಿಗಳನ್ನು ನಿರ್ಮಿಸಿದರು. ಬಳಿಕ ವಿವಿಧ ವ್ಯಾಯಾಮಗಳನ್ನು ಪ್ರದರ್ಶಿಸಿ, ಶಿಸ್ತು ಮತ್ತು ಸಾಮೂಹಿಕ ಸಮನ್ವಯವನ್ನು ತೋರಿಸಲಾಯಿತು.
ನಂತರ ‘ಜೈ ಅಭಿಮನ್ಯು’ ಆಕೃತಿಯ ಮೂಲಕ ಅಭಿಮನ್ಯುವಿನ ಸಾಹಸವನ್ನು ಸ್ಮರಿಸಲಾಯಿತು. ‘ಡ್ರಗ್ಸ್ ಬೇಡ ಬ್ರೋ’ ಎಂಬ ಸಂದೇಶದ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ‘ಕರ್ನಾಟಕ ಪೊಲೀಸ್, ‘ನಮ್ಮ ರೈತ ನಮ್ಮ ಹೆಮ್ಮೆ’ ಎಂಬ ಆಕೃತಿಗಳು ಪೊಲೀಸ್ ಇಲಾಖೆಯ ಸೇವೆ ಹಾಗೂ ರೈತರ ಮಹತ್ವವನ್ನು ಸಾರಿದವು. ‘ಪೊಲೀಸ್ ಹುತಾತ್ಮರಿಗೆ ನಮನ’ ಸಲ್ಲಿಸುವ ಆಕೃತಿ ಭಾವುಕ ಕ್ಷಣಕ್ಕೆ ಸಾಕ್ಷಿಯಾದರೆ,
ಪ್ರಧಾನ ದಳಪತಿ ಕೆ.ಎನ್. ಸುರೇಶ್ ನೇತೃತ್ವದಲ್ಲಿ ನಡೆದ ಪರೇಡ್ ಗಮನ ಸೆಳೆಯಿತು. ಅಶ್ವಾರೋಹಿ ದಳಗಳು, ನಗರ ಮತ್ತು ಜಿಲ್ಲಾ ಸಶಸ್ತ್ರ ಪಡೆಗಳು, ರೈಲ್ವೆ ರಕ್ಷಣಾ ದಳ, ಕೆಎಸ್‌ಆರ್‌ಪಿ, ಎನ್‌ಸಿಸಿ, ಪೊಲೀಸ್ ಪಬ್ಲಿಕ್ ಸ್ಕೂಲ್, ಜವಾಹರ ನವೋದಯ ಶಾಲೆ, ಭಾರತ್ ಸ್ಕೌಟ್ಸ್, ಭಾರತ್ ಗೈಡ್ಸ್, ಭಾರತ ಸೇವಾದಳ ಹಾಗೂ ಪೊಲೀಸ್ ಬ್ಯಾಂಡ್ ಸೇರಿದಂತೆ ವಿವಿಧ ತುಕಡಿಗಳು ಪಥಸಂಚಲನದಲ್ಲಿ ಭಾಗವಹಿಸಿದವು. ಪೊಲೀಸ್ ಬ್ಯಾಂಡ್‌ನಿಂದ ವಿವಿಧ ದೇಶಭಕ್ತಿ ಗೀತೆಗಳನ್ನು ನುಡಿಸಲಾಯಿತು. ಇದಕ್ಕೂ ಮುನ್ನ ಮೂರು ಸುತ್ತುಗಳಲ್ಲಿ ಒಟ್ಟು 27 ಕುಶಾಲತೋಪುಗಳನ್ನು ಸಿಡಿಸಲಾಯಿತು. ಬಳಿಕ ಡಿಎನ್‌ಎ ತಂಡದಿಂದ ವಂದೇ ಮಾತರಂ ಗೀತೆ ಪ್ರಸ್ತುತಪಡಿಸಲಾಯಿತು. ಬ್ಯಾಂಡ್ ತಂಡ ರಾಷ್ಟ್ರಗೀತೆಯನ್ನು ನುಡಿಸಿದರೆ, ಡಿಎನ್‌ಎ ತಂಡ ನಾಡಗೀತೆಯನ್ನು ಹಾಡಿತು.
ನಾಡಹಬ್ಬ ದಸರಾ ಪ್ರಯುಕ್ತ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪಂಜಿನ ಕವಾಯತಿನಲ್ಲಿ ವಿವಿಧ ತಂಡಗಳಿಂದ ರಾಜ್ಯಪಾಲರಾದ ಡಾ.ಸುಧಾ ಯಾದವ್ ಗೌರವ ವಂದನೆ ಸ್ಪೀಕರಿಸಿದರು. ರಮಾದೇವಿ ಅವರ ಬಳಿಕ ಗೌರವ ವಂದನೆ ಸ್ಪೀಕರಿಸಿದ ಎರಡನೇ ಮಹಿಳಾ ರಾಜ್ಯಪಾಲರು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಸಚಿವರಾದ ಬಸವರಾಜ ರಾಯರೆಡ್ಡಿ, ಯು.ಟಿ. ಖಾದರ್, ಶಿವರಾಜ ತಂಗಡಗಿ, ಬಾಲಕೃಷ್ಣ, ಶಾಸಕರಾದ ತನ್ವೀರ್ ಸೇಠ್, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ ಹಾಗೂ ಇತರರು ಇದ್ದರು. ನೆದರ್‌ಲ್ಯಾಂಡ್, ಅಮೆರಿಕ, ಬ್ರಿಟನ್, ಚೀನಾ, ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ರಾಯಭಾರಿಗಳು ಇದ್ದರು.