‘ಸಂತಶ್ರೇಷ್ಠ ಕನಕ’ ಸಮಾಜ ಸುಧಾರಕ

* ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಬಣ್ಣನೆ * ಕನಕದಾಸರ 539ನೇ ಜಯಂತ್ಯುತ್ಸವ
The program organized at Kalamandira was inaugurated by dignitaries. Dr. Shivanandpuri Swamiji, Dr. Yathindra Siddaramaiah, K. Harish Gowda, Dr. D. Thimmaiah, M.K. Somashekar and others were present.
ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಡಾ.ಶಿವಾನಂದಪುರಿ ಸ್ವಾಮೀಜಿ, ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ಹರೀಶ್‌ಗೌಡ, ಡಾ.ಡಿ.ತಿಮ್ಮಯ್ಯ, ಎಂ.ಕೆ.ಸೋಮಶೇಖರ್ ಇತರರಿದ್ದರು.
Published on: 

ತಮ್ಮ ಸಾಹಿತ್ಯ, ಕೀರ್ತನೆ ಹಾಗೂ ವೈಚಾರಿಕ ಚಿಂತನೆಗಳ ಮೂಲಕ ಸಮಾಜದಲ್ಲಿನ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ ಮಹಾನ್ ಸಮಾಜ ಸುಧಾರಕ ಸಂತಶ್ರೇಷ್ಠ ಕನಕದಾಸರು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಪಾಲಿಕೆ ಹಾಗೂ ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ದಾಸಶ್ರೇಷ್ಠ ಸಂತಕವಿ ಶ್ರೀ ಕನಕದಾಸರ 539ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

15-16ನೇ ಶತಮಾನದಲ್ಲಿ ಬದುಕಿದ್ದ ಕನಕದಾಸರ ಚಿಂತನೆ, ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರು ಕೇವಲ ಭಕ್ತಿಗೀತೆಗಳನ್ನು ರಚಿಸಿದವರಲ್ಲ, ತಮ್ಮ ಸಾಹಿತ್ಯದ ಮೂಲಕ ಸಮಾಜದಲ್ಲಿನ ಅಸಮಾನತೆ, ಜಾತಿ ವ್ಯವಸ್ಥೆ ಹಾಗೂ ಮೌಢ್ಯವನ್ನು ಪ್ರಶ್ನಿಸಿ ಸಮಾನತೆಯ ಆಶಯವನ್ನು ಸಾರಿದವರು. ‘ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಕೃತಿಯ ಮೂಲಕ ಮನುಷ್ಯರಲ್ಲಿ ಜಾತಿ ಆಧಾರಿತ ಭೇದಭಾವ ಸಲ್ಲದು ಎಂಬ ಸಂದೇಶ ಸಾರಿದ್ದಾರೆ ಎಂದರು.

ಜಾತಿ ವ್ಯವಸ್ಥೆಯನ್ನು ಶಾಶ್ವತವಾಗಿ ಹೋಗಲಾಡಿಸಲು ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಸಬಲೀಕರಣ ಅತ್ಯಗತ್ಯ. ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಶೋಷಿತರು, ಹಿಂದುಳಿದವರು ಹಾಗೂ ದಲಿತರು ಉನ್ನತ ಶಿಕ್ಷಣ ಪಡೆದು ಆತ್ಮವಿಶ್ವಾಸದಿಂದ ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಮಾನತೆ ಮತ್ತು ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ತಳಮಟ್ಟದಲ್ಲಿರುವ ಬಡವರು ಹಾಗೂ ದುರ್ಬಲ ವರ್ಗದ ಜನರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಕನಕದಾಸರ ಸಮಗ್ರ ಸಾಹಿತ್ಯದ ಅನುವಾದ, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರಕಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು. ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತಿದ್ದು, ಇದರಿಂದ ಬಡವರ ಬದುಕಿನಲ್ಲಿ ನೆಮ್ಮದಿ ಮೂಡಿದೆ ಹಾಗೂ ರಾಜ್ಯದ ತಲಾ ಆದಾಯವೂ ಹೆಚ್ಚಾಗಿದೆ ಎಂದರು.

ಕನಕದಾಸರ ಜಯಂತಿ ಆಚರಣೆ ಕೇವಲ ಅವರ ಚಿಂತನೆಗಳನ್ನು ಕೇಳುವುದಕ್ಕೆ ಸೀಮಿತವಾಗಬಾರದು. ಅವರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದಾಗ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ ಎಂದು ಹೇಳಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಕನಕದಾಸರು ದೇವರ ಹೆಸರಿನಲ್ಲಿ ಹಲವು ಕೀರ್ತನೆಗಳು, ಸಾಹಿತ್ಯ ಹಾಗೂ ಕಾವ್ಯಗಳನ್ನು ರಚಿಸುವ ಮೂಲಕ ಸಮಾಜದ ಅಂಕುಡೊಂಕುಗಳು, ಅಸಮಾನತೆ ಮತ್ತು ಮೌಢ್ಯ ಆಚರಣೆಗಳನ್ನು ಖಂಡಿಸಿ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದರು.

ನಿವೃತ್ತ ಶಿಕ್ಷಣಾಧಿಕಾರಿ ಎಂ.ಬಿ.ನಿಂಗಪ್ಪ ಉಪನ್ಯಾಸ ನೀಡಿ, ಕನಕದಾಸರು ಯಾವುದೇ ಜಾತಿ ಅಥವಾ ಮತಕ್ಕೆ ಸೀಮಿತವಾಗದೆ ಸಕಲ ತತ್ವಗಳನ್ನು ಮೀರಿ ಬೆಳೆದ ವಿಶ್ವಮಾನವ. ಹರಿದಾಸ ಸಾಹಿತ್ಯದ ಸುವರ್ಣಯುಗದ ಪ್ರಮುಖ ಪ್ರವರ್ತಕರಲ್ಲಿ ಒಬ್ಬರಾಗಿದ್ದು, ಹರಿದಾಸ ಪರಂಪರೆಯ ವಿಶಿಷ್ಟ ವ್ಯಕ್ತಿತ್ವ ಎಂದು ಹೇಳಿದರು.

ಕನಕದಾಸರು ರಚಿಸಿದ ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆ ಸೇರಿದಂತೆ ವಿವಿಧ ಕಾವ್ಯಗಳು ಹಾಗೂ ಕೀರ್ತನೆಗಳ ಮಹತ್ವವನ್ನು ವಿವರಿಸಿದರು. ರಾಮಧಾನ್ಯ ಚರಿತ್ರೆಯಲ್ಲಿ ಸಮಾಜದ ಮೇಲ್ವರ್ಗ ಮತ್ತು ಕೆಳವರ್ಗದ ಪ್ರತೀಕಗಳಾಗಿ ಧಾನ್ಯಗಳ ನಡುವಿನ ಸಂವಾದದ ಮೂಲಕ ಸಾಮಾಜಿಕ ಸಮಾನತೆ ಹಾಗೂ ವಾಸ್ತವದ ಸತ್ಯವನ್ನು ಸಾರಲಾಗಿದೆ. ಕುಲ-ಕುಲವೆಂದು ಹೊಡೆದಾಡುವ ಸಮಾಜಕ್ಕೆ ಸತ್ಯ, ಭಕ್ತಿ ಮತ್ತು ಮಾನವೀಯತೆಯೇ ನಿಜವಾದ ಮೌಲ್ಯ ಎಂಬ ಸಂದೇಶವನ್ನು ಕನಕದಾಸರು ನೀಡಿದರು ಎಂದರು.

ಶ್ರೀ ಕಾಗಿನೆಲೆ ಕನಕ ಗುರುಪೀಠದ ಶ್ರೀ ಡಾ.ಶಿವಾನಂದಪುರಿ ಸ್ವಾಮೀಜಿ, ಶಾಸಕ ಕೆ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತ ಎನ್.ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ, ಕನಕದಾಸರ ಜಯಂತ್ಯುತ್ಸವ ಸಮಿತಿಯ ಎಂ.ಶಿವಣ್ಣ, ಬಿ.ಸುಬ್ರಮಣ್ಯ, ಸಿದ್ದಲಿಂಗೇಗೌಡ, ಎಂ. ಮಹದೇವೇಗೌಡ, ಟಿ.ಬಿ.ಚಿಕ್ಕಣ್ಣ, ಗೋಪಿ, ಬಸವರಾಜು, ರವಿ ಇತರರಿದ್ದರು.

ಕನಕ ಸಂಗೀತ ಸುಧೆ:

ಈ ವೇಳೆ ಖ್ಯಾತ ಗಾಯಕ ಡಾ.ಕಾ.ರಾಮೇಶ್ವರಪ್ಪ ಮತ್ತು ತಂಡ ವಿಶೇಷ ಕಂಬಳಿ ವೇಷಭೂಷಣದೊಂದಿಗೆ ಕನಕ ಸಂಗೀತ ಸುಧೆ ಕಾರ್ಯಕ್ರಮ ನಡೆಸಿಕೊಟ್ಟರು.

ಕನಕದಾಸರ ಭಕ್ತಿಗೀತೆಗಳು ಹಾಗೂ ದಾಸ ಸಾಹಿತ್ಯದ ಗಾಯನಕ್ಕೆ ವಿಶಿಷ್ಟ ವೇಷಭೂಷಣ ಮೆರುಗು ನೀಡಿತು. ತಂಡದ ಗಾಯನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಕನಕದಾಸರ ಸಾಹಿತ್ಯ ಮತ್ತು ಸಂಗೀತ ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ವೈಭವ ತುಂಬಿದರು.

ಅದ್ದೂರಿ ಮೆರವಣಿಗೆ, ಜಿಟಿಡಿ ಸ್ಟೆಪ್ಸ್

ಕನಕದಾಸರ ಜಯಂತಿ ಅಂಗವಾಗಿ ಶುಕ್ರವಾರ ಅದ್ದೂರಿ ಮೆರವಣಿಗೆ ಆಯೋಜಿಸಲಾಗಿತ್ತು. ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಶ್ರೀ ಸೋಮನಾಥ ಸ್ವಾಮೀಜಿ, ಶ್ರೀ ಡಾ.ಶಿವಾನಂದಪುರಿ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು.

ಬಳಿಕ ಸ್ತಬ್ದಚಿತ್ರ, ಕಂಸಾಳೆ, ನಗಾರಿ, ವೀರಗಾಸೆ, ಪಟ ಕುಣಿತ, ತೊಗಲು ಗೊಂಬೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳನ್ನೊಳಗೊಂಡ ಮೆರವಣಿಗೆ ಕಲಾಮಂದಿರದವರೆಗೆ ಸಾಗಿತು.

ಈ ವೇಳೆ ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ ಜಾನಪದ ವಾದ್ಯಗಳ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. ತಮಟೆ ಮತ್ತು ನಗಾರಿಯ ಜೋರು ಸದ್ದಿಗೆ ಉತ್ಸಾಹಗೊಂಡು ಸಖತ್ ಡಾನ್ಸ್ ಮಾಡಿ ಸಂಭ್ರಮಿಸಿದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಮುಖಂಡ ಶಿವಣ್ಣ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ ಹಲವರು ಇದ್ದರು.