

ಯುವಜನರಲ್ಲಿ ಭಾರತೀಯ ಸಂಗೀತ ಪರಂಪರೆ ಬಗ್ಗೆ ಅಭಿರುಚಿ ಮೂಡಿಸುವ ಹಾಗೂ ಶಾಸ್ತ್ರೀಯ ಮತ್ತು ಸುಗಮ ಸಂಗೀತದತ್ತ ಸೆಳೆಯುವ ಉದ್ದೇಶದಿಂದ ಪ್ರಸಾರ ಭಾರತಿಯು ದೇಶದ 26 ಆಕಾಶವಾಣಿ ಕೇಂದ್ರಗಳಲ್ಲಿ ಏರ್ ರೈಸಿಂಗ್ ಸ್ಟಾರ್ಸ್-ಸೀಸನ್-1 ಯುವ ಸಂಗೀತೋತ್ಸವ ಆಯೋಜಿಸಿದ್ದು, ಇದರ ಅಂಗವಾಗಿ ನ.27ರಂದು ಸಂಜೆ 6 ಗಂಟೆಗೆ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಯುವ ಸಂಗೀತೋತ್ಸವ ಆಯೋಜಿಸಲಾಗಿದೆ ಎಂದು ಮೈಸೂರು ಆಕಾಶವಾಣಿ ನಿಲಯದ ಮುಖ್ಯಸ್ಥ ಎನ್.ಕೇಶವಮೂರ್ತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೊದಲು ಆರ್.ಹರಿಣಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನೀಡಲಿದ್ದಾರೆ. ಸಿ.ವಿ.ಶ್ರುತಿ ಅವರು ವಯಲಿನ್, ಅರವಿಂದ ಸೂರಿ ಕಾರ್ತಿಕ್ ಮೃದಂಗ, ಶಮಿತ್ ಎಸ್.ಗೌಡ ಘಟ ಹಾಗೂ ವೈ.ಪಿ.ವಿಕ್ರಂ ಭಾರದ್ವಾಜ್ ಮೊರ್ಚಿಂಗ್ ಸಹಕಾರ ನೀಡಲಿದ್ದಾರೆ. ನಂತರ ಸಿ.ಸಿಂಚನಾ ಅವರು ಸುಗಮ ಸಂಗೀತ ಪ್ರಸ್ತುತಿ ನಡೆಯಲಿದ್ದು, ಆರ್.ಬಾಲಸುಬ್ರಮಣ್ಯ ಕೊಳಲು, ಸುಜೇಂದ್ರ ರಾವ್ ತಬಲ, ಋತ್ವಿಕ್ ಸುಂದರ್ ರಿದಂ ಪ್ಯಾಡ್ ಹಾಗೂ ದರ್ಶನ್ ಕೀಬೋರ್ಡ್ ಸಹಕಾರ ಇರಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಆಕಾಶವಾಣಿ ಕ್ಲಸ್ಟ್ರ್ ಮುಖ್ಯಸ್ಥ ಕೆ.ಪಿ.ಸಂಜೀವ್ ಭಾಗವಹಿಸಲಿದ್ದಾರೆ. ಯುವ ಸಂಗೀತೋತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿಎ ಎಂದು ತಿಳಿಸಿದರು.
ಆಕಾಶವಾಣಿಯ ಈ ವಿನೂತನ ಪ್ರಯತ್ನದ ಮೂಲಕ 30 ವರ್ಷದೊಳಗಿನ ಯುವ ಕಲಾವಿದರಿಗೆ ಸಂಗೀತ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತಿದ್ದು, ಭಾರತೀಯ ಸಂಗೀತದ ವಿವಿಧ ಪ್ರಕಾರಗಳನ್ನು ಯುವಜನರಿಗೆ ಪರಿಚಯಿಸುವ ಜತೆಗೆ ಅವುಗಳ ಮಹತ್ವವನ್ನು ತಿಳಿಸುವ ಆಶಯ ಹೊಂದಲಾಗಿದೆ ಎಂದರು.
ಯುವಜನರು ಶಾಸ್ತ್ರೀಯ ಸಂಗೀತ ಸೇರಿದಂತೆ ಭಾರತೀಯ ಸಂಗೀತದ ವಿವಿಧ ಪ್ರಕಾರಗಳನ್ನು ಆಲಿಸುವ, ಅರ್ಥೈಸಿಕೊಳ್ಳುವ ಹಾಗೂ ಅವುಗಳೊಂದಿಗೆ ಬೆರೆಯುವ ವಾತಾವರಣ ನಿರ್ಮಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಆಕಾಶವಾಣಿ ಕೇವಲ ಶಾಸ್ತ್ರೀಯ ಸಂಗೀತಕ್ಕಷ್ಟೇ ಸೀಮಿತವಾಗದೆ, ಜನಪದ, ಸುಗಮ, ಭಕ್ತಿ ಸಂಗೀತ ಸೇರಿದಂತೆ ವಿವಿಧ ಸಂಗೀತ ಪ್ರಕಾರಗಳಿಗೆ ಸಮಾನ ಪ್ರೋತ್ಸಾಹ ನೀಡುತ್ತಾ ಬಂದಿದೆ. ಸಂಗೀತ ಕಲಾವಿದರಿಗೆ ಗ್ರೇಡ್ ನೀಡುವ ವ್ಯವಸ್ಥೆಯ ಮೂಲಕ ಕಲಾವಿದರ ಪ್ರತಿಭೆ ಮತ್ತು ಸಾಧನೆಗೆ ಗುರುತಿನ ಚೀಟಿ ನೀಡುವ ಸಂಸ್ಥೆಯಾಗಿಯೂ ಆಕಾಶವಾಣಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾವಿದರಿಗೆ 40ರಿಂದ 50 ಲಕ್ಷ ರೂ.ವರೆಗೆ ಗೌರವಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಾಹಿತಿ, ಶಿಕ್ಷಣ ಮತ್ತು ಮನರಂಜನೆಗೆ ಆದ್ಯತೆ ನೀಡುವ ಆಕಾಶವಾಣಿ, ಯುವಜನರನ್ನು ತಲುಪಲು ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಮಾಹಿತಿ ಹಾಗೂ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಶಾಂತಕುಮಾರ್, ಬಿ.ದಿಗ್ವಿಜಯ್, ಡಾ.ಉಮೇಶ್ ಇತರರಿದ್ದರು.