

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ದಸರಾ ಕ್ರೀಡಾಕೂಟ ಸಿಎಂ ಕಪ್-2026ರ ವಿಜೇತರಿಗೆ ಬುಧವಾರ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಶಾಸಕ ತನ್ವೀರ್ ಸೇಠ್ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಈಗಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಾಲಕರು ತಮ್ಮ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಲು ಪ್ರೇರೆಪಿಸುತ್ತಿಲ್ಲ. ಅತಿ ಹೆಚ್ಚು ಅಂಕ ಪಡೆಯಬೇಕು ಎಂದು ನೀರಿಕ್ಷಿಸುತ್ತಿದ್ದಾರೆ. ಎಲ್ಲರೂ ವೈದ್ಯರು, ಇಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ ಎಂದು ಹೇಳಿದರು.
ಈ ನಾಡನ್ನು ಕಟ್ಟಲು ಎಲ್ಲ ಕ್ಷೇತ್ರದವರು ಬೇಕು. ಗೆಲವು, ಸೋಲು ಎರಡನ್ನು ಸಮನಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಕ್ರೀಡೆ ಕಲಿಸುತ್ತದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಿಗೆ ಕ್ರೀಡಾ ಜವಾಬ್ದಾರಿ ನೀಡಬೇಕು. ನಗರ ಸಭೆ, ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ವಿಧಾನ ಸಭಾ ಕ್ಷೇತ್ರವಾರು ಕ್ರೀಡಾಪಟುಗಳನ್ನು ಗುರುತಿಸಲು ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ತಿಳಿಸಿದರು.
ದಸರಾದಲ್ಲಿ ಪ್ರತಿ ವರ್ಷ ಕ್ರೀಡಾಪಟುಗಳ ಏರಿಕೆಯನ್ನು ನಾವು ನೋಡುತ್ತಿದ್ದೇವೆ. ಯುವ ಸಮೂಹವು ಕ್ರೀಡಾ ಮಾನೋಭಾದಿಂದಲೇ ಈ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ. ಇದೇ ಉದ್ದೇಶದಿಂದ ನಮ್ಮ ಸರ್ಕಾರವು ಭಾರತ್ ಜೋಡೊ ಯುವಕರ ಸಂಘವನ್ನು ರೂಪಿಸುತ್ತಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್.ಅನುಚೇತ್ ಮಾತನಾಡಿ, ನಾಲ್ಕು ದಿನಗಳ ದಸರಾ ಕ್ರೀಡಾಕೂಟವನ್ನು ಉತ್ತಮವಾಗಿ ಆಯೋಜಿಸಿ ಯಶಸ್ವಿಗೊಳಿಸಿರುವ ಹೆಗ್ಗಳಿಕೆ ನಮಗಿದೆ. ಇದಕ್ಕಾಗಿ ತರಬೇತುದಾರರು ಹಾಗೂ ಇಲಾಖಾ ಅಧಿಕಾರಿಗಳು ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದರು.
ಸರ್ಕಾರದಿಂದ ಕ್ರೀಡಾಪಟುಗಳಿಗೆ ಸಲ್ಲಬೇಕಾದ ಎಲ್ಲ ಸೌಲಭ್ಯ ಹಾಗೂ ಗೌರವವನ್ನು ಇಲಾಖೆ ಒದಗಿಸಿಕೊಡುತ್ತಿದೆ. ಅದರಂತೆ ಕ್ರೀಡಾಪಟುಗಳು ನಮ್ಮ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಮತ್ತು ಯಶಸ್ಸನ್ನು ತರಬೇಕು ಎಂದು ಆಶಿಸಿದರು.
ಕಬಡ್ಡಿ ರಾಷ್ಟ್ರೀಯ ತರಬೇತುದಾರ ಬಿ.ಸಿ.ರಮೇಶ್ ಅವರನ್ನು ಸನ್ಮಾನಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಎಂ.ಸಿ.ರಮೇಶ್, ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಇತರರಿದ್ದರು.
ಮೈಸೂರು ತಂಡ ಪ್ರಥಮ:
ದಸರಾ ಕ್ರೀಡಾಕೂಟದ ಬಾಲ್ ಬ್ಯಾಡ್ಮಿಂಟನ್ ಮಹಿಳೆಯರ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಮೈಸೂರು ವಿಭಾಗ ಪ್ರಥಮ ಸ್ಥಾನ ಪಡೆಯಿತು.
ಬೆಂಗಳೂರು ನಗರ ವಿಭಾಗ ದ್ವಿತೀಯ ಹಾಗೂ ಬೆಂಗಳೂರು ಗ್ರಾಮಾಂತರ ವಿಭಾಗ ತೃತೀಯ ಸ್ಥಾನ ಪಡೆದವು. ಬುಧವಾರ ನಡೆದ ಪಂದ್ಯದಲ್ಲಿ ಮೈಸೂರು ತಂಡ 35-19, 35-22 ಅಂಕಗಳಿಂದ ಬೆಂಗಳೂರು ನಗರ ತಂಡವನ್ನು ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ 35-19, 33-5, 35-21 ಅಂಕಗಳಿಂದ ಬೆಂಗಳೂರು ಗ್ರಾಮಾಂತರ ವಿರುದ್ಧ ಜಯ ಸಾಧಿಸಿತು.
ಇನ್ನು ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ ವಿಭಾಗ ಪ್ರಥಮ, ಮೈಸೂರು ವಿಭಾಗ ದ್ವಿತೀಯ ಹಾಗೂ ಬೆಂಗಳೂರು ಗ್ರಾಮಾಂತರ ತಂಡ ತೃತೀಯ ಸ್ಥಾನ ಪಡೆಯಿತು.