ಅನ್ನದಾತರ ಸಂಕಷ್ಟ ತೆರೆದಿಟ್ಟ ಜಿಲ್ಲಾಧಿಕಾರಿ

* ಕೇಂದ್ರ ತಂಡಕ್ಕೆ ಬರದ ಬವಣೆ ವಿವರಿಸಿದ ಲಕ್ಷ್ಮೀಕಾಂತ್ ರೆಡ್ಡಿ * ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ
The meeting organized on Monday at the Zilla Panchayat Hall was attended by District Collector G. Laxmikant Reddy, Ashish Pandey, Karan Chaudhary, Sudham Bagh and others.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಆಶಿಶ್ ಪಾಂಡೆ, ಕರಣ್ ಚೌಧರಿ, ಸುಧಾಮ್ ಬಾಗ್ ಇತರರಿದ್ದರು.
Published on: 

ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮೈಸೂರಿನಲ್ಲಿ ಅತಿ ಹೆಚ್ಚು, ಶೇ.59 ಮಳೆ ಕೊರತೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡವು ಮೈಸೂರು ಜಿಲ್ಲೆಯ ಬರ ಪರಿಸ್ಥಿತಿ, ಕೃಷಿ, ಕುಡಿಯುವ ನೀರು ಹಾಗೂ ಜಲಾಶಯಗಳ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಿತು.

ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಉಪ ಆಯುಕ್ತ ಸುಧಾಮ್ ಬಾಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರ ಆಶಿಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಹಾಲನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರದ ಉಪ ನಿರ್ದೇಶಕ ಕರಣ್ ಚೌಧರಿ ತಂಡದಲ್ಲಿದ್ದರು.

ಜಿಲ್ಲೆಯ ಜಲಸಂಪನ್ಮೂಲಗಳ ಸ್ಥಿತಿಗತಿ ಕುರಿತು ವಿವರಿಸಿದ ಜಿಲ್ಲಾಧಿಕಾರಿ, ಕೆಆರ್‌ಎಸ್, ಕಬಿನಿ ಹಾಗೂ ಹಾರಂಗಿ ಪ್ರಮುಖ ಮೂರು ಜಲಾಶಯಗಳಾಗಿವೆ. ಕೆಆರ್‌ಎಸ್‌ನಲ್ಲಿ ಪ್ರಸಕ್ತ ವರ್ಷ ಲೈವ್ ಸಾಮರ್ಥ್ಯ 17.86 ಟಿಎಂಸಿ ಇದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 21.83 ಟಿಎಂಸಿ ನೀರಿತ್ತು. ಇದರಿಂದ ಸುಮಾರು 5 ಟಿಎಂಸಿ ಕೊರತೆಯಾಗಿದೆ. ಕಬಿನಿ ಜಲಾಶಯದಲ್ಲಿ ಪ್ರಸಕ್ತ ವರ್ಷ 1.31 ಟಿಎಂಸಿ ನೀರಿದ್ದು, ಕಳೆದ ವರ್ಷ 8.71 ಟಿಎಂಸಿ ಇತ್ತು. ಅಂದರೆ ಸುಮಾರು 7 ಟಿಎಂಸಿ ಕೊರತೆಯಾಗಿದೆ ಎಂದು ತಿಳಿಸಿದರು.

ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಸದ್ಯ ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸುವ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತಿದೆ. ಮಳೆಯ ಅಭಾವ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

1.43 ಲಕ್ಷ ಹೆಕ್ಟೇರ್ ಬೆಳೆ ಹಾನಿ: ಜಿಲ್ಲೆಯಲ್ಲಿ ಬರದಿಂದಾಗಿ ಸುಮಾರು 1,43,308 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಎಸ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಸುಮಾರು 122.34 ಕೋಟಿ ರೂ.ನಷ್ಟವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ಕೃಷಿ ಹಾನಿ, ನೀರಿನ ಲಭ್ಯತೆ ಹಾಗೂ ಬರ ಪರಿಸ್ಥಿತಿಯ ಪರಿಣಾಮಗಳ ಕುರಿತು ಅಧಿಕಾರಿಗಳಿಂದ ವಿವರ ಪಡೆದ ಕೇಂದ್ರ ತಂಡವು ಜಿಲ್ಲೆಯ ವಿವಿಧ ಭಾಗಗಳ ಸ್ಥಿತಿಗತಿಗಳ ಪರಿಶೀಲನೆ ನಡೆಸಲಿದೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net