ಯದುವಂಶದ ದರ್ಬಾರ್‌ಗೆ ರತ್ನಖಚಿತ ಸಿಂಹಾಸನ ರೆಡಿ

- ಅರಮನೆಯಲ್ಲಿ ಜೋಡಣೆ - ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ
The jeweled throne of the palace
ಅರಮನೆಯ ರತ್ನಖಚಿತ ಸಿಂಹಾಸನ
Published on: 

ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಶರನ್ನವರಾತ್ರಿ ರಾಜವೈಭವಕ್ಕೆ ಮುನ್ನುಡಿ ಎಂಬಂತೆ ಮೈಸೂರು ಅರಮನೆಯಲ್ಲಿ ಸೋಮವಾರ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಶಾಸ್ತ್ರೋಕ್ತವಾಗಿ ನೆರವೇರಿತು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಿಂಹಾಸನ ಜೋಡಣೆ ಕಾರ್ಯ ನಡೆಯಿತು. ಬೆಳಗ್ಗೆ ಅರಮನೆಯ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನದ ಬಿಡಿಭಾಗಗಳನ್ನು ಪೂಜೆ ಹಾಗೂ ಹೋಮಗಳ ಬಳಿಕ ದರ್ಬಾರ್ ಹಾಲ್‌ಗೆ ರವಾನಿಸಲಾಯಿತು.

ಗಣಪತಿ ಹೋಮ, ನವಗ್ರಹ ಹೋಮ, ಚಾಮುಂಡಿ ಪೂಜೆ ಹಾಗೂ ಶಾಂತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಸಿಂಹಾಸನ ಜೋಡಣೆ ಪ್ರಕ್ರಿಯೆ ಆರಂಭಿಸಲಾಯಿತು. ವಿವಿಧ ಬಿಡಿಭಾಗಗಳನ್ನು ಬಳಸಿಕೊಂಡು ಚಿನ್ನದ ಸಿಂಹಾಸನವನ್ನು ಸಾಂಪ್ರದಾಯಿಕ ವಿಧಾನದಂತೆ ಜೋಡಿಸಲಾಯಿತು.

ದಸರಾ ಮಹೋತ್ಸವದ ಸಂದರ್ಭದಲ್ಲಿ ನಡೆಯುವ ರಾಜವಂಶಸ್ಥರ ಖಾಸಗಿ ದರ್ಬಾರ್‌ಗೆ ಈ ಸಿಂಹಾಸನವನ್ನು ಸಜ್ಜುಗೊಳಿಸಲಾಗಿದ್ದು, ಅರಮನೆಯ ರಾಜಪರಂಪರೆಯ ವೈಭವವನ್ನು ಪ್ರತಿಬಿಂಬಿಸುವ ಪ್ರಮುಖ ಆಚರಣೆ ಇದಾಗಿದೆ.

ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ

ಸಿಂಹಾಸನ ಜೋಡಣೆ ಕಾರ್ಯದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಧಾರ್ಮಿಕ ವಿಧಿವಿಧಾನಗಳು ಹಾಗೂ ಸಿಂಹಾಸನ ಜೋಡಣೆ ಪೂರ್ಣಗೊಂಡ ಬಳಿಕ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು.

ಖಾಸಗಿ ದರ್ಬಾರ್‌ಗೆ ಸಿದ್ಧತೆ

ಶರನ್ನವರಾತ್ರಿಯ ಹಿನ್ನೆಲೆಯಲ್ಲಿ ಅ.11ರಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಖಾಸಗಿ ದರ್ಬಾರ್ ಆರಂಭವಾಗಲಿದೆ. ಸಿಂಹಾಸನ ಜೋಡಣೆಯೊಂದಿಗೆ ಅರಮನೆಯಲ್ಲಿ ದಸರಾ ರಾಜವೈಭವದ ಸಾಂಪ್ರದಾಯಿಕ ಆಚರಣೆಗಳಿಗೆ ಚಾಲನೆ ದೊರೆತಂತಾಗಿದೆ. ದಸರಾ ಸಂದರ್ಭದಲ್ಲಿ ಮಾತ್ರ ಭದ್ರತಾ ಕೊಠಡಿಯಿಂದ ಹೊರತೆಗೆದು ಜೋಡಿಸಲಾಗುವ ಈ ರತ್ನಖಚಿತ ಸಿಂಹಾಸನ ಮೈಸೂರು ಒಡೆಯರ ರಾಜಪರಂಪರೆ ಮತ್ತು ದಸರಾ ವೈಭವದ ಜೀವಂತ ಪ್ರತೀಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net