ಕ್ರೀಡಾಪಟುಗಳನ್ನು ಆಶೀರ್ವದಿಸಿದ ಅಭಿನವ ಶ್ರೀಗಳು

* ವಾಲಿಬಾಲ್ ಪಂದ್ಯಾವಳಿ ವೀಕ್ಷಣೆ
Sri Gavisiddeshwara Swamiji inaugurated the wrestling match on Tuesday. Sri Shivashantaveera Swamiji, Wrestler Srinivasagowda, L. Nagesh, and others were present.
ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಮಂಗಳವಾರ ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಿದರು. ಶ್ರೀ ಶಿವಶಾಂತವೀರ ಸ್ವಾಮೀಜಿ, ಪೈ. ಶ್ರೀನಿವಾಸಗೌಡ, ಎಲ್.ನಾಗೇಶ್ ಇತರರಿದ್ದರು.
Published on: 

ದಸರಾ ಮಹೋತ್ಸವದ ಉದ್ಘಾಟಕರಾದ ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಮಂಗಳವಾರ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಭೇಟಿ ನೀಡಿ, ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಸ್ಪರ್ಧಿಗಳನ್ನು ಆಶೀರ್ವದಿಸಿದರು.

ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಕಲಬುರಗಿ ವಿಭಾಗಗಳ ನಡುವೆ ನಡೆದ ವಾಲಿಬಾಲ್ ಪಂದ್ಯಾವಳಿಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ನಂತರ ಅಥ್ಲೆಟಿಕ್ಸ್‌ನ ಸಿಂಥೆಟಿಕ್ ಅಂಕಣಕ್ಕೆ ತೆರಳಿ ಮಹಿಳೆಯರ ಹಾಗೂ ಪುರುಷರ 4*400 ಮೀಟರ್ ರಿಲೇ ಸ್ಪರ್ಧೆಗಳನ್ನು ವೀಕ್ಷಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು.

ಇದೇ ವೇಳೆ ಮಾತನಾಡಿದ ಅವರು, ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿರುವ ದಸರಾ ಕ್ರೀಡಾಕೂಟದಲ್ಲಿ ರಾಜ್ಯದ 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ. ಕ್ರೀಡಾಪಟುಗಳು ತಮ್ಮ ಸಾಧನೆಯ ಮೂಲಕ ನಾಡಿನ ಕೀರ್ತಿಯನ್ನು ದೇಶಾದ್ಯಂತ ಪಸರಿಸುತ್ತಿದ್ದಾರೆ ಎಂದರು.

ಗದುಗಿನ ಚಿಕ್ಕೇನಕೊಪ್ಪ ಮಠದ ಶ್ರೀ ಶಿವಶಾಂತವೀರ ಸ್ವಾಮೀಜಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ದಸರಾ ಕ್ರೀಡಾ ಉಪಸಮಿತಿಯ ಕಾರ್ಯಾಧ್ಯಕ್ಷ ಡಾ. ಜಿತೇಂದ್ರ ಶೆಟ್ಟಿ, ಜಂಟಿ ನಿರ್ದೇಶಕ ಸುಭಾಷ್ ಚಂದ್ರ, ಉಪ ನಿರ್ದೇಶಕ ಎಂ.ಸಿ.ರಮೇಶ್, ಸಹಾಯಕ ನಿರ್ದೇಶಕರಾದ ಮಂಜುನಾಥಸ್ವಾಮಿ, ಡಾ. ಶರಣು ಗೋಗೇರಿ, ವಿಠ್ಠಲ್ ಜಾಬ್‌ಗೌಡರ್, ಈರೇಶ್ ನಾಯಕ್, ತರಬೇತುದಾರರಾದ ವಿಜಯಕೃಷ್ಣ, ವಿನೋದ್ ಕುಮಾರ್ ಇತರರಿದ್ದರು.

ಕುಸ್ತಿ ವೀಕ್ಷಣೆ:

ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಕುಸ್ತಿ ಪಂದ್ಯಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡಿದರು. ದಸರಾ ಕುಸ್ತಿ ಉಪಸಮಿತಿ ಅಧ್ಯಕ್ಷ ಪೈ.ಶ್ರೀನಿವಾಸಗೌಡ, ವಿಶೇಷಾಧಿಕಾರಿ ಎಲ್.ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net