ಧಾರ್ಮಿಕ ಕಾರ್ಯಕ್ರಮದಿಂದ ಸಾಮರಸ್ಯ ವೃದ್ಧಿ

ಶ್ರೀ ಅಪ್ಪಾಜಿ ಸ್ವಾಮೀಜಿ ಅಭಿಪ್ರಾಯ
ಬೆಟ್ಟದಪುರ ಸಮೀಪದ ಹಾರನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಧಾರ್ಮಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು.
ಬೆಟ್ಟದಪುರ ಸಮೀಪದ ಹಾರನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಧಾರ್ಮಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಹಾರನಹಳ್ಳಿ
Published on: 

ಬೆಟ್ಟದಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯೊಂದಿಗೆ ಮಹಿಳಾ ಸಬಲೀಕರಣ ಹಾಗೂ ಧಾರ್ಮಿಕ ಜಾಗೃತಿಗೂ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ದಿಂಡಗಾಡು ಶ್ರೀ ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಟ್ಟದಪುರ ಬಿಸಿ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಕ್ತಿ, ನಂಬಿಕೆ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸುತ್ತವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜಮುಖಿ ಕಾರ್ಯಗಳ ಮೂಲಕ ಗ್ರಾಮೀಣ ಪ್ರದೇಶದ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸುತ್ತಿದೆ. ಮಹಿಳೆಯರು ಸ್ವಾವಲಂಬಿಗಳಾಗಲು ನೆರವಾಗುವುದರ ಜತೆಗೆ ವಿವಿಧ ತರಬೇತಿ ಶಿಬಿರಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ವಿಠಲ್ ಎಸ್. ಸಾಲ್ಯಾನ್ ಮಾತನಾಡಿ, ಸರಳ ಜೀವನ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಮುಖ್ಯ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಧಾರ್ಮಿಕ, ಸಾಮಾಜಿಕ ಹಾಗೂ ಗ್ರಾಮಾಭಿವೃದ್ಧಿ ಕ್ಷೇತ್ರಗಳಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಬದುಕಿಗೆ ಆಸರೆಯಾಗಿದೆ. ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯು ಜನರಲ್ಲಿ ಭಕ್ತಿ, ಧಾರ್ಮಿಕ ಶ್ರದ್ಧೆ ಹಾಗೂ ಸಾಮರಸ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಧರ್ಮ ಮತ್ತು ಸಂಸ್ಕೃತಿಯ ಉಳಿವು ಹಾಗೂ ಮುಂದಿನ ಪೀಳಿಗೆಗೆ ಅವುಗಳನ್ನು ಪರಿಚಯಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಧಾರ್ಮಿಕ ವಿಧಿವಿಧಾನ: ಬೆಳಗ್ಗೆಯಿಂದಲೇ ಅರ್ಚಕರಾದ ಮಂಜು ಆರಾಧ್ಯ ಹಾಗೂ ಸುನೀಲ್ ಆರಾಧ್ಯ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಭಕ್ತರು ಶ್ರದ್ಧಾಭಕ್ತಿಯಿಂದ ಶ್ರೀ ಸತ್ಯನಾರಾಯಣ ಸ್ವಾಮಿಗೆ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸಾಮೂಹಿಕ ಪೂಜೆಯಲ್ಲಿ ಹಲವು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು.

ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಸಮಿತಿ ಅಧ್ಯಕ್ಷ ಯೋಗೇಶ್ ಗೌಡ, ರೈತ ಸಂಘದ ಅಧ್ಯಕ್ಷ ಕೆ.ವಿ. ಆನಂದ, ಜನ ಜಾಗೃತಿ ಸದಸ್ಯ ಎ.ಇ. ರಾಮಚಂದ್ರ, ಯೋಜನಾಧಿಕಾರಿ ಶೇಖರ್ ಗೌಡ, ಜ್ಞಾನ ವಿಕಾಸ ಕೇಂದ್ರದ ಸವಿತಾ, ಮುಖಂಡರಾದ ಸಿ.ಎನ್. ಬಸವರಾಜು, ಎಚ್.ಟಿ. ಗೋವಿಂದೇಗೌಡ, ಎಚ್.ಎನ್. ಅಣ್ಣಯ್ಯಚಾರ್, ಕೆ.ಟಿ. ನಾಗೇಂದ್ರ, ಎಚ್.ಜೆ. ಮಂಜುನಾಥ್, ದಿನೇಶ್ ಚಪ್ಪರದಹಳ್ಳಿ, ಕೀರ್ತಿ, ಜಗದೀಶ್, ಜಯಲಕ್ಷ್ಮೀ, ಅಶ್ವತ್ಥ್ ಕುಮಾರ್, ಜ್ಯೋತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net