ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಪಿ.ಪ್ರಶಾಂತ್ ಗೌಡ ಬ್ಯಾಟಿಂಗ್

ಪ್ರತಾಪ್ ಸಿಂಹ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಲು ಒತ್ತಾಯ ಒಕ್ಕಲಿಗ ಸಮುದಾಯದ ವತಿಯಿಂದ ಕಾನೂನು ಹೋರಾಟದ ಜೊತೆಗೆ ಪ್ರತಿಭಟನೆಗೆ ಸಿದ್ಧ
prashanth gowda
ಪ್ರಶಾಂತ್ ಗೌಡ
Published on: 

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ವಿನಾಕಾರಣ ತೇಜೋವಧೆ ಮಾಡುವುದನ್ನು ಸಹಿಸುವುದಿಲ್ಲ. ಅವರ ವಿರುದ್ಧ ದಾಖಲಿಸಿರುವ ಅಟ್ರಾಸಿಟಿ ಪ್ರಕರಣ ಸೇರಿದಂತೆ ಎಲ್ಲ ಪ್ರಕರಣಗಳನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಒಕ್ಕಲಿಗ ಸಮುದಾಯದ ವತಿಯಿಂದ ಕಾನೂನು ಹೋರಾಟದ ಜೊತೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯುತ್ಸವ ಸಮಿತಿಯ ಜಿಲ್ಲಾ ಅಧ್ಯಕ್ಷರೂ ಆದ, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಪಿ.ಪ್ರಶಾಂತ್ ಗೌಡ ಎಚ್ಚರಿಸಿದ್ದಾರೆ.

ತಿ.ನರಸೀಪುರದಲ್ಲಿ ಗಣೇಶೋತ್ಸವದ ಪೂರ್ವಭಾವಿ ಸಭೆಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಬಳಸಿದ ಹೇಳಿಕೆಗಳಿಂದ ವಿವಾದ ಆರಂಭವಾಯಿತು. ಈ ಕುರಿತು ಪ್ರತಿಭಟನೆ ನಡೆದ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಬಳಿಕ ಪ್ರತಾಪ್ ಸಿಂಹ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿರುವುದು ಏಕೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪ್ರತಾಪ್ ಸಿಂಹ ಅವರು ಯಾವ ಹೇಳಿಕೆ ನೀಡಿದ್ದಾರೆ, ಅದು ಕಾನೂನು ಬಾಹಿರವಾಗಿದ್ದರೆ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಿ. ಆದರೆ ಪೊಲೀಸ್ ಅಧಿಕಾರಿಯ ಹೇಳಿಕೆಯ ಕುರಿತು ಪ್ರತಿಭಟನೆಗಳು ನಡೆದಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳದೆ, ಪ್ರತಾಪ್ ಸಿಂಹ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಪ್ರತಾಪ್ ಸಿಂಹ ಅವರು ಲೇಖನಗಳನ್ನು ಬರೆದಿದ್ದು, ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ಅಪಮಾನಿಸುವಂತಹ ಯಾವುದೇ ಹೇಳಿಕೆಯನ್ನು ಅವರು ನೀಡಿಲ್ಲ. ಆದರೂ ಅವರ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯ ದೊರೆಯಬೇಕು ಎಂಬ ಉದ್ದೇಶದಿಂದ ಸಂವಿಧಾನ ರಚಿಸಿದ್ದಾರೆ. ಸಂವಿಧಾನದ ಹೆಸರಿನಲ್ಲಿ ಯಾವುದೇ ವ್ಯಕ್ತಿಯನ್ನು ತೇಜೋವಧೆ ಮಾಡುವ ಅಥವಾ ಕುಟುಂಬವನ್ನು ಅವಹೇಳನ ಮಾಡುವ ರೀತಿಯ ನಡೆ ಸರಿಯಲ್ಲ. ಪ್ರತಾಪ್ ಸಿಂಹ ಅವರಿಂದ ಯಾವ ತಪ್ಪಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ. ಈ ಕುರಿತು ಚರ್ಚೆಗೆ ಕರೆದರೆ ಭಾಗವಹಿಸಲು ಸಿದ್ಧವಿದ್ದೇವೆ. ಆದರೆ ರಾಜಕೀಯ ಕಾರಣಗಳಿಗಾಗಿ ಮೈಸೂರು ಭಾಗದ ಶಾಂತಿ ಮತ್ತು ಸೌಹಾರ್ದ ವಾತಾವರಣಕ್ಕೆ ಧಕ್ಕೆ ತರುವಂತಹ ಬೆಳವಣಿಗೆಗಳನ್ನು ಸಹಿಸುವುದಿಲ್ಲ ಎಂದರು.

ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಸ್ಥಾನಮಾನದ ಜವಾಬ್ದಾರಿಯನ್ನು ಮರೆತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವ ರೀತಿಯಲ್ಲಿ ಅವರು ಹೇಳಿಕೆಗಳನ್ನು ನೀಡಿದ್ದಾರೆ. ಆ ಮೂಲಕ ಅಂಬೇಡ್ಕರ್ ಅವರಿಗೂ ಅಪಮಾನ ಮಾಡಿದ್ದಾರೆ. ಮೈಸೂರು ಭಾಗದಲ್ಲಿ ವಿವಿಧ ಸಮುದಾಯಗಳ ನಡುವೆ ಇರುವ ಸೌಹಾರ್ದತೆ ಹಾಗೂ ಸಹೋದರತ್ವಕ್ಕೆ ಧಕ್ಕೆ ಉಂಟಾಗುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಆಗ್ರಹಿಸಿದರು.

ಅವರಿಗೆ ಪ್ರತಾಪ್ ಸಿಂಹ ಅವರ ವಿಚಾರದಲ್ಲಿ ಯಾವುದೇ ಆರೋಪಗಳಿದ್ದರೆ ಬಹಿರಂಗವಾಗಿ ಚರ್ಚೆಗೆ ಬರಲಿ. ಸ್ಥಳ ಮತ್ತು ದಿನಾಂಕ ನಿಗದಿಪಡಿಸಿದರೆ ಚರ್ಚೆಗೆ ತಾವು ಸಿದ್ಧ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಸಂತ ಮುನೀಶ್, ರಾಜಕುಮಾರ್, ವಕೀಲ ಹೇಮಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net