

ದೇಶದ 3ನೇ ಅತಿ ದೊಡ್ಡ ಏಕಶಿಲಾಮೂರ್ತಿ ಚಾಮುಂಡಿಬೆಟ್ಟದ ಶ್ರೀನಂದಿ ವಿಗ್ರಹ ಭಾನುವಾರ ವಿವಿಧ ದ್ರವ್ಯಗಳ ಅಭಿಷೇಕದಲ್ಲಿ ಮಿಂದು ನಾನಾ ಬಣ್ಣಗಳಿಂದ ಕಂಗೊಳಿಸಿತು.
ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಚಾಮುಂಡಿಬೆಟ್ಟದ ಶ್ರೀನಂದಿಗೆ 21ನೇ ವರ್ಷದ ಮಹಾಭಿಷೇಕ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಗಳಿಂದ ನಡೆಸಲಾಯಿತು.
ಮೂರು ಗಂಟೆಗೂ ಹೆಚ್ಚು ಕಾಲ ಬಗೆಯ ದ್ರವ್ಯಗಳ ಅಭಿಷೇಕ ನಡೆಯಿತು. ಮೊದಲಿಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ನಂದಿಗೆ ಅಭಿಷೇಕ ಮಾಡುವ ಮೂಲಕ ಮಹಾಭಿಷೇಕಕ್ಕೆ ಚಾಲನೆ ನೀಡಿದರು.
ನಂತರ ಶ್ರಿನಂದಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಬಾಳೆಹಣ್ಣು, ದ್ರಾಕ್ಷಿ, ಬೇಲದಹಣ್ಣು, ಎಳನೀರು, ಅರಿಶಿಣ, ಕುಂಕುಮ, ಸಿಂಧೂರ, ರಕ್ತಚಂದನ ಹಾಗೂ ವಿವಿಧ 32 ಬಗೆಯ ದ್ರವ್ಯಗಳ ಅಭಿಷೇಕ ನೆರವೇರಿಸಲಾಯಿತು.
ಬೆಳಗ್ಗೆಯಿಂದಲೇ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಅಭಿಷೇಕಕ್ಕೆ ಬೇಕಾದ ಎಲ್ಲ ರೀತಿಯ ವಸ್ತುಗಳನ್ನು ಬಕೆಟ್‌ಗಳಲ್ಲಿ ಸಿದ್ಧಮಾಡಿಕೊಂಡಿಕೊಂಡು ಅಭಿಷೇಕ ನೆರವೇರಿಸಿದರು. ಅಭಿಷೇಕದ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಮೂಲಕ ಭಕ್ತಿಯ ಪರವಶರಾದರು.
ಅಭಿಷೇಕದ ವೇಳೆ ಒಂದು ಕಡೆ ಮಂತ್ರಘೋಷ ಮೊಳಗಿದರೆ, ಮತ್ತೊಂದು ಕಡೆ ಭಕ್ತರಿಂದ ಶ್ರೀನಂದಿಗೆ, ಚಾಮುಂಡೇಶ್ವರಿಗೆ ಹಾಗೂ ಉತ್ತನಳ್ಳಿ ಮಾರಮ್ಮನಿಗೆ ಜೈಕಾರ ಘೋಷಗಳು ಮೊಳಗಿದವು. ಭಕ್ತರಿಗೆ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.
ಟ್ರಸ್ಟ್‌ನ ಅಧ್ಯಕ್ಷ ಎಸ್.ಪ್ರಕಾಶನ್, ಕಾರ್ಯದರ್ಶಿ ಎನ್.ಗೋವಿಂದ, ಪದಾಧಿಕಾರಿಗಳಾದ ಸುಂದರ್, ಶಂಕರ್, ಮಹೇಶ್, ಸುಬ್ಬಣ ಸೇರಿದಂತೆ ಹಲವರು ಭಾಗವಹಿಸಿದ್ದರು.