ಸ್ಟ್ರೋಕ್ ಜಾಗೃತಿಗೆ ಮೈಸೂರಿಗರ ಹೆಜ್ಜೆ: 'ಬಿ-ಫಾಸ್ಟ್ ಮೂವ್ ಫಾರ್ ಲೈಫ್' ಅಭಿಯಾನ

Mysoreans' step towards stroke awareness: 'Be-Fast Move for Life' campaign
ಸ್ಟ್ರೋಕ್ ಜಾಗೃತಿಗೆ ಮೈಸೂರಿಗರ ಹೆಜ್ಜೆ: 'ಬಿ-ಫಾಸ್ಟ್ ಮೂವ್ ಫಾರ್ ಲೈಫ್' ಅಭಿಯಾನ
Published on: 

ಪಾರ್ಶ್ವವಾಯು (ಸ್ಟ್ರೋಕ್) ಕುರಿತಾದ ಭಯ ಮತ್ತು ಗೊಂದಲ ದೂರಮಾಡಿ, ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮೈಸೂರಿನ ಮಣಿಪಾಲ್ ಆಸ್ಪತ್ರೆ ವತಿಯಿಂದ ಭಾನುವಾರ 'ಬಿ-ಫಾಸ್ಟ್ ಮೂವ್ ಫಾರ್ ಲೈಫ್ 2026' ಜಾಗೃತಿ ಓಟ ಮತ್ತು ವಾಕಥಾನ್‌ ಆಯೋಜಿಸಲಾಗಿತ್ತು. ಮುಂಜಾನೆಯೇ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ್ದ 2,000ಕ್ಕೂ ಹೆಚ್ಚು ನಾಗರಿಕರು, ನುರಿತ ಓಟಗಾರರು ಹಾಗೂ ಕುಟುಂಬಸ್ಥರು ಆರೋಗ್ಯ ಜಾಗೃತಿಯ ಸಂಕಲ್ಪದೊಂದಿಗೆ ಹೆಜ್ಜೆ ಹಾಕಿದರು.

ಬೆಳಿಗ್ಗೆ 7 ಗಂಟೆಗೆ 10 ಕಿ.ಮೀ ಓಟ ಹಾಗೂ 7.05ಕ್ಕೆ 5 ಕಿ.ಮೀ ವಾಕಥಾನ್‌ಗೆ ಚಾಲನೆ ನೀಡಲಾಯಿತು. ಕುಕ್ಕರಹಳ್ಳಿ ಕೆರೆ, ಕೆ.ಆರ್. ಆಸ್ಪತ್ರೆ, ರೈಲು ನಿಲ್ದಾಣ ಹಾಗೂ ದೊಡ್ಡ ಗಡಿಯಾರ ವೃತ್ತದ ಮಾರ್ಗವಾಗಿ ಸಾಗಿದ ಜಾಥಾದಲ್ಲಿ, ಸ್ಟ್ರೋಕ್‌ನ ಪ್ರಮುಖ ಎಚ್ಚರಿಕೆಯ ಲಕ್ಷಣಗಳಾದ 'ಬಿ-ಫಾಸ್ಟ್' (BE-FAST) ಕುರಿತ ಫಲಕಗಳನ್ನು ಪ್ರದರ್ಶಿಸಲಾಯಿತು. ಹಠಾತ್ ಸಮತೋಲನ ತಪ್ಪುವುದು, ದೃಷ್ಟಿ ಮಂಜಾಗುವುದು, ಮುಖ ಒಂದು ಬದಿಗೆ ವಾಲುವುದು, ಕೈಯಲ್ಲಿ ನಿಶ್ಶಕ್ತಿ ಹಾಗೂ ಮಾತು ತೊದಲುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಬೇಕು ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಆನ್‌ಲೈನ್ ಮೂಲಕ ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, "ನಾಗರಿಕರು ಪರಸ್ಪರ ಕಾಳಜಿ ವಹಿಸಿದಾಗ ಮಾತ್ರ ಆರೋಗ್ಯಕರ ಮತ್ತು ಸದೃಢ ಮೈಸೂರು ನಿರ್ಮಾಣವಾಗಲು ಸಾಧ್ಯ. ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಸಕಾಲದಲ್ಲಿ ಗುರುತಿಸುವುದು ಜೀವ ಉಳಿಸುವ ಅತ್ಯಂತ ಸರಳ ಹಾಗೂ ಪ್ರಬಲ ಮಾರ್ಗವಾಗಿದೆ." ಎಂದು ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, "ಪಾರ್ಶ್ವವಾಯುವಿನ ಬಗ್ಗೆ ಸಾರ್ವಜನಿಕರಲ್ಲಿ ಸರಿಯಾದ ಅರಿವು ಇರುವುದು ಇಂದಿನ ಅಗತ್ಯವಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮದಲ್ಲಿ ನೂರಾರು ಮೈಸೂರಿಗರು ಪಾಲ್ಗೊಂಡಿರುವುದು ಸಂತಸದ ವಿಷಯ. ಪಾರ್ಶ್ವವಾಯು ಜಾಗೃತಿ ಸಂದೇಶವನ್ನು ಪ್ರತಿಯೊಬ್ಬರೂ ಸಮಾಜದ ಇತರರಿಗೂ ತಲುಪಿಸಬೇಕು." ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

ಮೈಸೂರು ನಗರ ಪೊಲೀಸ್ (ಅಪರಾಧ ಮತ್ತು ಸಂಚಾರ) ವಿಭಾಗದ ಉಪ ಪೊಲೀಸ್ ಆಯುಕ್ತರಾದ ಕೆ.ಎಸ್. ಸುಂದರ್ ರಾಜ್ ಮಾತನಾಡಿ, "ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಲು ಸಾರ್ವಜನಿಕರಲ್ಲಿ ಜಾಗೃತಿ ಇರುವುದು ಬಹಳ ಮುಖ್ಯ. ಇಂತಹ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಪಾರ್ಶ್ವವಾಯುವಿನ ಲಕ್ಷಣಗಳನ್ನು ಬೇಗ ಗುರುತಿಸಲು ಮತ್ತು ತಕ್ಷಣ ಆಸ್ಪತ್ರೆಗೆ ತಲುಪುವ ಅಗತ್ಯವನ್ನು ಜನರಿಗೆ ತಿಳಿಸಲು ನೆರವಾಗುತ್ತವೆ," ಎಂದರು.

ಮಣಿಪಾಲ್ ಆಸ್ಪತ್ರೆಯ ನ್ಯೂರೋಸರ್ಜರಿ (ಸೆರೆಬ್ರೊವಾಸ್ಕುಲರ್ ಮತ್ತು ಎಂಡೋವಾಸ್ಕುಲರ್ ಸರ್ಜರಿ) ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಮಕ್ಸೂದ್ ಅಹ್ಮದ್ ಎ. ಆರ್. ಮಾತನಾಡಿ, "ಸ್ಟ್ರೋಕ್ ಎಂಬುದು ಸಮಯದೊಂದಿಗೆ ಹೋರಾಡುವ ತುರ್ತು ವೈದ್ಯಕೀಯ ಸ್ಥಿತಿ. ಮೊದಲ ಕೆಲವು ಕ್ಷಣಗಳು ಚಿಕಿತ್ಸೆಯ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಆರಂಭಿಕ ಲಕ್ಷಣಗಳನ್ನು ಗುರುತಿಸಿ, ರೋಗಿಯನ್ನು ತಕ್ಷಣವೇ ಸ್ಟ್ರೋಕ್-ರೆಡಿ (stroke-ready) ಆಸ್ಪತ್ರೆಗೆ ದಾಖಲಿಸುವುದರಿಂದ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಲಕ್ಷಣಗಳು ಕಾಣಿಸಿಕೊಂಡಾಗ ವಿಳಂಬ ಮಾಡದೆ ತಕ್ಷಣ ಸ್ಪಂದಿಸುವಂತೆ ಜನರನ್ನು ಪ್ರೇರೇಪಿಸುವುದೇ ಈ ಅಭಿಯಾನದ ಉದ್ದೇಶ" ಎಂದರು.

ನ್ಯೂರಾಲಜಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ವೇಣುಗೋಪಾಲ್ ಕೃಷ್ಣ ಮಾತನಾಡಿ, "ಸ್ಟ್ರೋಕ್ ಜಾಗೃತಿಯತ್ತ ಇಡುವ ಪ್ರತಿಯೊಂದು ಹೆಜ್ಜೆಯೂ ಸನ್ನದ್ಧ ಸಮಾಜದತ್ತ ಇಡುವ ಹೆಜ್ಜೆಯಾಗಿದೆ. ಆರಂಭಿಕ ಲಕ್ಷಣಗಳನ್ನು ಅರಿತು ತ್ವರಿತವಾಗಿ ಸ್ಪಂದಿಸುವುದರಿಂದ ರೋಗಿಯು ಶೀಘ್ರವಾಗಿ ಚೇತರಿಸಿಕೊಂಡು ಸಹಜ ಜೀವನಕ್ಕೆ ಮರಳಲು ನೆರವಾಗುತ್ತದೆ. ಈ ಕಾರ್ಯಕ್ರಮದ ಮೂಲಕ ಜಾಗೃತಿ, ಆತ್ಮವಿಶ್ವಾಸ ಮತ್ತು ಭರವಸೆಯ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಪ್ರಯತ್ನ ಮಾಡಲಾಗಿದೆ" ಎಂದು ತಿಳಿಸಿದರು.

ಮೈಸೂರಿನ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. ಮಾತನಾಡಿ, "ಎಲ್ಲಾ ವಯೋಮಾನದವರು ಮುಂಜಾನೆಯೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಮೈಸೂರಿಗರಿಗೆ ಆರೋಗ್ಯದ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ. ಈ ಜೀವ ಉಳಿಸುವ ಮಾಹಿತಿಯು ಪ್ರತಿ ಮನೆಯಲ್ಲೂ ಸದಾ ಜೀವಂತವಾಗಿರಬೇಕು ಎಂಬುದೇ ನಮ್ಮ ಆಶಯ" ಎಂದರು.

ಈ ಕಾರ್ಯಕ್ರಮದಲ್ಲಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥರಾದ ಡಾ. ಉಪೇಂದ್ರ ಶೆಣೈ, ವಿವಿಧ ವಿಭಾಗಗಳ ವೈದ್ಯರು, ಪೊಲೀಸ್ ಅಧಿಕಾರಿಗಳು ಹಾಗೂ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಪಾರ್ಶ್ವವಾಯು ತಡೆಗಟ್ಟುವಿಕೆ, ಆರಂಭಿಕ ಲಕ್ಷಣಗಳ ಗುರುತಿಸುವಿಕೆ ಮತ್ತು ಸಕಾಲಿಕ ಚಿಕಿತ್ಸೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂತಹ ಸಾಮೂಹಿಕ ಪ್ರಯತ್ನಗಳು ಅತ್ಯಗತ್ಯ ಎಂಬುದನ್ನು ಇವರ ಉಪಸ್ಥಿತಿ ಹಾಗೂ ಬೆಂಬಲವು ಮತ್ತೊಮ್ಮೆ ದೃಢಪಡಿಸಿತು.

ಕೇವಲ ಓಟಕ್ಕಷ್ಟೇ ಸೀಮಿತವಾಗದ ಈ ಅಭಿಯಾನವು, ತುರ್ತು ಸಂದರ್ಭದಲ್ಲಿ ನೆರೆಹೊರೆಯವರು ಹಾಗೂ ಆಪ್ತರ ಜೀವ ಉಳಿಸುವ ನಿಟ್ಟಿನಲ್ಲಿ ನಗರದಾದ್ಯಂತ ಮಹತ್ವದ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.