ಮೈಸೂರು ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸ್ಮರಣ ಸಂಚಿಕೆಯಾದ ‘ಶತಮಾನ ಸೌರಭ’ವನ್ನು ಬಿಡುಗಡೆಗೊಳಿಸಲಾಯಿತು. ಸ್ವಾಮಿ ಅಮೂರ್ತಾನಂದಜಿ, ಸ್ವಾಮಿ ಸತ್ಯಜ್ಞಾನಾನಂದಜಿ, ಸ್ವಾಮಿ ಮುಕ್ತಿದಾನಂದ, ಸ್ವಾಮಿ ಆತ್ಮವಿದಾನಂದಜಿ, ಎಚ್.ಸಿ.ಕಿಶೋರ್‌ಚಂದ್ರ ಪಾಲ್ಗೊಂಡಿದ್ದರು.
‘ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರು’ ಗ್ರಂಥ, ಆಶ್ರಮದ ಇತಿಹಾಸ, ಪರಿಷ್ಕೃತ ಗ್ರಂಥ ಬಿಡುಗಡೆ
ರಾಮಕೃಷ್ಣ ಆಶ್ರಮವು ರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ ಸಾಹಿತ್ಯವನ್ನು ಗಂಗಾನದಿಯಂತೆ ಎಲ್ಲೆಡೆ ಹರಿಸಿದೆ
ಮೈಸೂರು: ನೂರು ವರ್ಷ ಪೂರೈಸಿರುವ ಮೈಸೂರು ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸ್ಮರಣ ಸಂಚಿಕೆಯಾದ ‘ಶತಮಾನ ಸೌರಭ’ವನ್ನು ಶುಕ್ರವಾರ ಬೆಳಗ್ಗೆ ಬಿಡುಗಡೆಗೊಳಿಸಲಾಯಿತು.
ಯಾದವಗಿರಿಯ ಆಶ್ರಮದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರು’ ಗ್ರಂಥ, ಆಶ್ರಮದ ಇತಿಹಾಸ, ಪರಿಷ್ಕೃತ ಗ್ರಂಥವನ್ನೂ ಈ ಸಂದರ್ಭದಲ್ಲೇ ಬಿಡುಗಡೆಗೊಳಿಸಲಾಯಿತು.
ಬಳಿಕ ಮಾತನಾಡಿದ ವೆಂಕಟಾಪುರದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಅಮೂರ್ತಾನಂದಜಿ, ಮೈಸೂರು ಶ್ರೀರಾಮಕೃಷ್ಣ ಆಶ್ರಮ ಪವಿತ್ರ ತೀರ್ಥ ಕ್ಷೇತ್ರ. ಇದು ಇಲ್ಲಿಯ ಭಕ್ತರು, ಸ್ವಾಮೀಜಿಗಳಿಗೆ ಪೂಜ್ಯನೀಯ ತಾಣವಾಗಿದೆ. ಸ್ವಾಮಿ ವಿವೇಕಾನಂದರು ನಡೆದಾಡಿದ ಪೂಣ್ಯ ಭೂಮಿ ಮೈಸೂರು ಎಂದು ಬಣ್ಣಿಸಿದರು.
ಸಾಂಸ್ಕೃತಿಕ, ಆಧ್ಯಾತ್ಮಿಕ ಕೆಲಸ ಮಾಡುತ್ತಿರುವ ಇಲ್ಲಿಯ ರಾಮಕೃಷ್ಣ ಆಶ್ರಮವು ರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ ಸಾಹಿತ್ಯವನ್ನು ಗಂಗಾನದಿಯಂತೆ ಎಲ್ಲೆಡೆ ಹರಿಸಿದೆ ಎಂದರು.
ಮೈಸೂರಿನಲ್ಲಿ ಅಕ್ಕಪಕ್ಕದ ಬಡಾವಣೆಗಳಿಗೆ ರಾಮಕೃಷ್ಣನಗರ, ವಿವೇಕಾನಂದನಗರ, ಶಾರದಾದೇವಿನಗರ ಹೆಸರು ನಾಮಕರಣ ಮಾಡಲಾಗಿದೆ. ಇದು ವಿಶೇಷ ಸ್ಮರಣಾ ಕಾರ್ಯ. ಇದರ ಹಿಂದೆ ರಾಮಕೃಷ್ಣ ಆಶ್ರಮ ಕೆಲಸ ಮಾಡಿದೆ ಎಂದರು.
ಶ್ರೀರಾಮಕೃಷ್ಣ ಆಶ್ರಮದ ಚೆನ್ನೈ ಅಧ್ಯಕ್ಷ ಸ್ವಾಮಿ ಸತ್ಯಜ್ಞಾನಾನಂದಜಿ, ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ, ಮಾಜಿ ಅಧ್ಯಕ್ಷ ಸ್ವಾಮಿ ಆತ್ಮವಿದಾನಂದಜಿ, ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಸಿ.ಕಿಶೋರ್‌ಚಂದ್ರ ಪಾಲ್ಗೊಂಡಿದ್ದರು.