

ಮೈಸೂರು: ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಉಳಿತಾಯದ ಮನೋಭಾವ ಬೆಳೆಸಿಕೊಂಡರೆ ಹಣ ಕೂಡಿಡಲು ಸಾಧ್ಯ. ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಕುಟುಂಬವೂ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಬೋಗಾದಿಯ ಜೆ.ಜೆ. ಗಾರ್ಡನ್ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಶ್ರೀಲಕ್ಷ್ಮೀ ಪೂಜಾ ಸಮಿತಿ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲ ಬದಲಾದಂತೆ ಮಹಿಳೆಯರು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ನಾಲ್ಕು ಗೋಡೆಗಳ ನಡುವೆ ಸೀಮಿತವಾಗಿದ್ದ ಮಹಿಳೆಯರು ಇಂದು ಕುಟುಂಬ ನಿರ್ವಹಣೆಯ ಜತೆಗೆ ದುಡಿದು ಆರ್ಥಿಕ ಸ್ವಾವಲಂಬನೆ ಸಾಧಿಸುವ ಶಕ್ತಿ ಹೊಂದಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಪರಸ್ಪರ ಸಂಬಂಧ, ಪ್ರೀತಿ, ಸಹಕಾರ ಹೆಚ್ಚುವುದರ ಜತೆಗೆ ಕುಟುಂಬಗಳ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತಿದೆ ಎಂದರು.
ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರ ದೂರದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳು ರಚನೆಯಾಗಿ ಮಹಿಳೆಯರು ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯವಾಗಿದೆ. ಮಹಿಳೆಯರು ಸಂಘಟಿತರಾಗಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸುವುದಷ್ಟೇ ಅಲ್ಲದೆ, ಇತರರಿಗೂ ಆರ್ಥಿಕ ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಪುಣ್ಯದ ಕಾರ್ಯಗಳಿಗೆ ಶ್ರೀ ಮಂಜುನಾಥ ಸ್ವಾಮಿ ಹಾಗೂ ಮಹಾಲಕ್ಷ್ಮಿಯ ಆಶೀರ್ವಾದ ಸದಾ ಇರಲಿ ಎಂದು ಹೇಳಿದರು.
ಮನೆಯಲ್ಲಿ ಪೂಜೆ ಮಾಡುವಾಗಲೂ ಕುಟುಂಬದ ಚಿಂತೆ, ಹಣಕಾಸಿನ ವಿಚಾರ, ಮಕ್ಕಳ ಬಗ್ಗೆ ಯೋಚಿಸುತ್ತಿರುತ್ತೇವೆ. ಅದರ ಬದಲಿಗೆ ಪ್ರತಿದಿನ ಕನಿಷ್ಠ ಹತ್ತು ನಿಮಿಷವಾದರೂ ಧ್ಯಾನದಲ್ಲಿ ತೊಡಗಿ ಮನಸ್ಸನ್ನು ದೇವರಿಗೆ ಅರ್ಪಿಸಿಕೊಳ್ಳಬೇಕು. ದೇವರು ಪ್ರತಿಯೊಬ್ಬರ ಆತ್ಮದಲ್ಲಿದ್ದಾನೆ. ಮನುಷ್ಯನಲ್ಲಿಯೇ ದೈವತ್ವವಿದೆ. ತಾಯಂದಿರು ಕೂಡ ದೇವರ ಸ್ವರೂಪ. ಈ ಅರಿವಿನೊಂದಿಗೆ ಸನ್ನಡತೆಯಿಂದ ಬದುಕಬೇಕು ಎಂದು ಕಿವಿಮಾತು ಹೇಳಿದರು.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅವಕಾಶ ಕಲ್ಪಿಸಲಾಯಿತು. ಸರ್ಕಾರದಿಂದ ದೊರೆಯುವ ಸಬ್ಸಿಡಿ ಸೌಲಭ್ಯಗಳನ್ನು ಬಳಸಿಕೊಂಡು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಸ್ವಂತ ಉದ್ಯೋಗ ಆರಂಭಿಸುವುದರ ಜತೆಗೆ ಇತರರಿಗೂ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂದು ತಿಳಿಸಿದರು.
ಹಿಂದೆ ಮಹಿಳೆಯರು ಮನೆ ಕೆಲಸ, ಕೃಷಿ ಚಟುವಟಿಕೆ, ಮಕ್ಕಳ ಪಾಲನೆ ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು. ಹೊಲಕ್ಕೆ ಊಟ ತೆಗೆದುಕೊಂಡು ಹೋಗುವುದು, ಕಳೆ ಕೀಳುವುದು, ಒಕ್ಕಣೆ ಮಾಡುವುದು ಸೇರಿದಂತೆ ಕಷ್ಟದ ಕೆಲಸಗಳನ್ನೂ ಮಾಡುತ್ತಿದ್ದರು. ಆದರೆ ಇಂದು ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಮಹಿಳೆಯರಿಗೆ ಅವಕಾಶ ಮತ್ತು ಅಧಿಕಾರ ನೀಡಿದರೆ ಪುರುಷರಷ್ಟೇ ಸಮರ್ಥವಾಗಿ ಆಡಳಿತ ನಡೆಸಬಲ್ಲರು ಎಂಬುದಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೇ ಉದಾಹರಣೆ ಎಂದರು.
ಹಿಂದಿನ ಕಾಲದಲ್ಲಿ ಮಹಿಳೆಯರು ಮನೆ ಮತ್ತು ಕೃಷಿ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರಿಂದ ದೈಹಿಕವಾಗಿ ಆರೋಗ್ಯವಾಗಿರುತ್ತಿದ್ದರು. ಈಗ ಆರೋಗ್ಯ ಕಾಪಾಡಿಕೊಳ್ಳಲು ವಾಯುವಿಹಾರ, ಯೋಗ ಮತ್ತು ಧ್ಯಾನಕ್ಕೆ ಆದ್ಯತೆ ನೀಡಬೇಕು. ಇವುಗಳನ್ನು ನಿರ್ಲಕ್ಷಿಸಿ ಅನಗತ್ಯ ಚಿಂತೆ ಮಾಡುತ್ತಾ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಆಸ್ಪತ್ರೆಗಳಿಗೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಸಾಯನಿಕ ಗೊಬ್ಬರ ಬಳಸಿ ಬೆಳೆದ ಆಹಾರ ಪದಾರ್ಥಗಳನ್ನು ಖರೀದಿಸುವ ಬದಲು ಮನೆಯ ಹಿತ್ತಲಿನಲ್ಲಿಯೇ ಸೊಪ್ಪು, ತರಕಾರಿ ಬೆಳೆದುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ನಮ್ಮ ಕುಟುಂಬ ವ್ಯವಸ್ಥೆಯಲ್ಲಿನ ಬದಲಾವಣೆಗಳೂ ಕಾರಣವಾಗಿವೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ಮತ್ತು ತಂದೆ-ತಾಯಿಯ ಬಗ್ಗೆ ಗೌರವ ಕಲಿಸಬೇಕು. ಆಗ ಮಾತ್ರ ವೃದ್ಧಾಪ್ಯದಲ್ಲಿ ಪೋಷಕರನ್ನು ಪ್ರೀತಿಯಿಂದ ನೋಡಿಕೊಳ್ಳುವ ಮನೋಭಾವ ಬೆಳೆಯುತ್ತದೆ ಎಂದರು.
ಇಂದು ಸಾಮೂಹಿಕ ವಿವಾಹಗಳಿಗೆ ಒಲವು ತೋರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದ್ಧೂರಿ ಮದುವೆಗಾಗಿ ಒಂದು ಎಕರೆ ಜಮೀನು ಮಾರಾಟ ಮಾಡಿ ಮದುವೆ ಮಾಡಬೇಕೆಂಬ ಮನೋಭಾವ ಹೆಚ್ಚುತ್ತಿದೆ. ಮಗಳಿಗೆ ಸರಳವಾಗಿ ಮದುವೆ ಮಾಡಿ, ಆ ಜಮೀನನ್ನು ಆಕೆಯ ಹೆಸರಿಗೇ ಬರೆದುಕೊಡುವಂತೆ ಸಲಹೆ ನೀಡಿದರೂ ಕೆಲವರು ಒಪ್ಪುತ್ತಿಲ್ಲ. ಜಮೀನು ಮಾರಾಟ ಮಾಡಿ ಅದ್ಧೂರಿ ಮದುವೆ ಮಾಡುವ ಬದಲು ಸರಳ ವಿವಾಹಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳಬೇಕು. ಕಷ್ಟದ ಸಮಯದಲ್ಲಿ ಉಳಿತಾಯದ ಹಣ ನೆರವಿಗೆ ಬರುತ್ತದೆ. ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದು ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಹಾಗೂ ಯಶಸ್ವಿನಿ ಕಾರ್ಡ್ಗಳಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಚಿಕಿತ್ಸಾ ವೆಚ್ಚದ ಹೊರೆ ಕಡಿಮೆ ಮಾಡಿಕೊಳ್ಳಬಹುದು ಎಂದರು.
ಶೆಟ್ಟನಾಯಕನಹಳ್ಳಿಯ ಶ್ರೀ ಬಸವಣ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ರಾಜಮ್ಮ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ಪ್ರಾದೇಶಿಕ ನಿರ್ದೇಶಕ ಎ. ಯೋಗೀಶ್, ನಿರ್ದೇಶಕ ವಿ. ವಿಜಯಕುಮಾರ್ ನಾಗನಾಳ, ಭಾರತೀಯ ಭೂಸೇನೆಯ ಮಾಜಿ ಸುಬೇದಾರ್ ಟಿ.ಎ. ಅಯ್ಯಪ್ಪ, ಕುಮಾಬೀಡು ಗ್ರಾಮದ ಮುಖಂಡ ಶಂಕರ್, ಬೋಗಾದಿ ಗ್ರಾಮದ ಮುಖಂಡ ರಾಜಣ್ಣ, ಬೀರಿಹುಂಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕರೀಗೌಡ, ಡಿಎಂಜಿ ಹಳ್ಳಿ ಗ್ರಾಮದ ಮುಖಂಡ ಶಿವನಂಜೇಗೌಡ, ಕ್ಷೇತ್ರ ಯೋಜನಾಧಿಕಾರಿ ಎ.ಜಿ. ಪ್ರವೀಣ್, ಮೇಲ್ವಿಚಾರಕಿ ರೇಖಾ ಮತ್ತಿತರರು ಉಪಸ್ಥಿತರಿದ್ದರು.