ಯುವಜನರು ತಮ್ಮ ಸಾಮರ್ಥ್ಯ ಅರಿಯಲಿ

ಶಾಸಕ ಜಿ.ಡಿ.ಹರೀಶ್‌ಗೌಡ ಆಶಯ
ಶಾಸಕ ಜಿ.ಡಿ.ಹರೀಶ್‌ಗೌಡ
ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ಕ್ರೀಡಾಪಟುಗಳನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಸನ್ಮಾನಿಸಿದರು. ಪ್ರಾಂಶುಪಾಲ ಡಾ.ಸ್ವಾಮಿ, ಧರ್ಮಾಪುರ ನಾರಾಯಣ್, ಡಾ.ಬಿ.ಸಿ.ಸುರೇಶ್, ಕುಮಾರ್ ಇತರರಿದ್ದಾರೆ. ಹುಣಸೂರು
Published on: 

ಹುಣಸೂರು: ಯುವಜನರು ತಮ್ಮಲ್ಲಿರುವ ಸಾಮರ್ಥ್ಯವನ್ನು ತಾವೇ ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ವಿಪರ್ಯಾಸದ ಸಂಗತಿ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 2026-27ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‌ಕ್ರಾಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಜೆನ್-ಝೀಗಳು ದೇಶದ ಮುಖ್ಯ ಆಧಾರಸ್ಥಂಬವಾಗಿದ್ದಾರೆ. ಆದರೆ ಅವರಿಗೆ ತಮ್ಮ ಶಕ್ತಿಯ ಕುರಿತು ಅರಿವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಬಹುತೇಕ ಯುವಜನರು ಅಂಕಗಳ ಹಿಂದೆ ಬಿದದು, ಮೊಬೈಲ್ ಗೀಳಿಗೆ ಅಂಟಿಕೊಂಡು ಜೀವನದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿವರ್ಷ 430 ಪದವಿ ಕಾಲೇಜುಗಳು, 90ಕ್ಕೂ ಹೆಚ್ಚು ಪಾಲಿಟೆಕ್ನಿಕ್ ಕಾಲೇಜುಗಳಿಂದ ಒಟ್ಟು 1.50 ಲಕ್ಷ ವಿದ್ಯಾರ್ಥಿಗಳು ಪದವಿಪಡೆಯುತ್ತಿದ್ದಾರೆ. ಆದರೆ ಇವರಿಗೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಅಂದ ಮಾತ್ರಕ್ಕೆ ಬದುಕುವುದು ದುಸ್ತರ ಎಂದುಕೊಳ್ಳುವುದು ತಪ್ಪು. ಅವಕಾಶಗಳು ಆಕಾಶದಷ್ಟು ವಿಸ್ತಾರವಾಗಿದೆ. ಅದನ್ನು ಹುಡುಕಿಕೊಳ್ಳುವ, ಸದ್ಬಳಕೆ ಮಾಡಿಕೊಳ್ಳಲು ಯುವ ಸಮುದಾಯ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಎನ್‌ಎಸ್‌ಎಸ್ ಶಿಬಿರಗಳು ಗ್ರಾಮೀಣ ಭಾಗದಲ್ಲಿ ಶುಚಿತ್ವದ ಅರಿವು ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವ ವೇದಿಕೆಗಳಾಗಬೇಕು. ರೋಗರುಜಿನಗಳ ಆತಂಕ ಎದುರಾಗಿದ್ದು, ವಾರ್ಷಿಕ ಶಿಬಿರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಕಾನಪದ ಕಲಾವಿದ ಕೆ.ಕೆ.ದೇವಾನಂದ ವರಪ್ರಸಾದ್ ಮಾತನಾಡಿ, ಸಂಗೀತ, ಸಾಹಿತ್ಯ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಪರಿಪೂರ್ಣತೆ ನೀಡುತ್ತದೆ. ಮಹಾತ್ಮ ಗಾಂಧೀಜಿ ಮೀರಾಭಜನ್ ಕೇಳುತ್ತಿದ್ದರು, ಅಂಬೇಢ್ಕರ್ ಕಬೀರರ ದೋಹಗಳಿಗೆ ಮಾರುಹೋಗಿದ್ದರು. ಸಂಗೀತ ಮತ್ತು ಸಾಹಿತ್ಯ ಅಪ್ಪಟ ಮನುಷ್ಯನನ್ನು ಕಟ್ಟಿಕೊಡುತ್ತದೆ. ವಿದ್ಯಾರ್ಥಿಗಳು ಕೂಡ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಲ್ಲಿ ಮಾನವೀಯ ಗುಣಗಳೊಂದಿಗೆ ಬದುಕಲು ಸಾಧ್ಯ ಎಂದರು.

ಪ್ರಾಂಶುಪಾಲ ಡಾ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಆರ್.ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಕಟಪೂರ್ವ ಪ್ರಾಂಶುಪಾಲ ಡಾ.ಬಿ.ಸಿ.ಸುರೇಶ್, ಪತ್ರಕರ್ತ ಧರ್ಮಾಪುರ ನಾರಾಯಣ್, ವಿದ್ಯಾರ್ಥಿಗಳಾದ ವರುಣ್‌ಕುಮಾರ್, ಕೆಂಡಗಣ್ಣ, ಕೆ.ಆರ್.ರಚನಾ, ಚಿಕ್ಕದೇವರಾಜು, ವಿಶಾಂತ್ ಇತರರು ಇದ್ದರು.

ಇದೇ ವೇಳೆ ಇತ್ತೀಚೆಗೆ ಮೈಸೂರು ವಿವಿಯ ಅಂತರಕಾಲೇಜು ಮಟ್ಟದ ಕುಸ್ತಿ ಹಾಗೂ ಇನ್ನಿತರ ಪಂದ್ಯಾವಳಿಗಳಲ್ಲಿ ವಿಜೇತ 14 ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿನಿಯಿಂದ ದತ್ತಿನಿಧಿ: ಸ್ನಾತಕೋತ್ತರ ಇತಿಹಾಸ ವಿಭಾಗದ ವಿದ್ಯಾರ್ಥಿನಿ ಸುಧಾರಾಣಿ 2 ವರ್ಷಗಳ ಹಿಂದೆ ವಿದ್ಯುತ್ ಅವಘಡದಲ್ಲಿ ತಮ್ಮ ಪತಿ ಆನಂದ್ ಅವರನ್ನು ಕಳಕೊಂಡಿದ್ದರು. ಪತಿಯ ಮರಣಾನಂತರ ಛಲದಿಂದ ವ್ಯಾಸಂಗ ಮುಂದುವರೆಸಿ ಕಾಲೇಜಿಗೆ ಅತಿ ಹೆಚ್ಚು ಅಂಕಗಳಿಸಿದ್ದಾರೆ. ಇದೀಗ ಸೆಸ್ಕ್ ಉದ್ಯೋಗಿಯಾಗಿ ತಮ್ಮ ಮೊದಲ ತಿಂಗಳ ವೇತನದಲ್ಲಿ ತಾನು ವ್ಯಾಸಂಗ ಮಾಡಿದ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 50 ಸಾವಿರ ರೂ. ದತ್ತಿನಿಧಿ ಸ್ಥಾಪಿಸಿ ಚೆಕ್‌ನ್ನು ಶಾಸಕರ ಸಮ್ಮುಖದಲ್ಲಿ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net